ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್‌ನಿಂದ ನೆಮ್ಮದಿ, ಪ್ರಗತಿ ಸಾಧ್ಯ: ಬಿವಿಎನ್

Srinivasa Murthy VN
Updated On : 26 Mar 2014, 12:25 pm

ರಾಯಚೂರು: ಕಾಂಗ್ರೆಸ್ ಸಮಾಜದಲ್ಲಿ ಶಾಂತಿ, ಸಮೃದ್ಧಿ ಜತೆಗೆ ಪ್ರಗತಿ ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಲಾಗುತ್ತಿದೆ ಎಂದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ, ಬಿಜೆಪಿ ಅಭ್ಯರ್ಥಿ ವಿರುದ್ಧ ತಾವು ವ್ಯಕ್ತಿಗತ ಟೀಕೆ ಮಾಡುತ್ತಿಲ್ಲ. ಬದಲಿಗೆ ಸಚಿವರಾಗಿದ್ದ ವೇಳೆ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಎಸಗಿದ ತಪ್ಪುಗಳ ಬಗ್ಗೆ ಜನರ ಗಮನ ಸೆಳೆಯುತ್ತಿರುವುದಾಗಿ ಹೇಳಿದರು.
ನಗರದಲ್ಲಿ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇವದುರ್ಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನತೆಗೆ ಸುಳ್ಳು ಹೇಳಲಾಗುತ್ತಿದೆ. ಹಾಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಅಭಿವೃದ್ಧಿಯ ಬಗ್ಗೆ ಜನತೆಯ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ವಾಸ್ತವ ಬೇರೆಯೇ ಆಗಿದೆ. ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಈ ನಿಟ್ಟಿನಲ್ಲಿ ಮತದಾರರ ಗಮನ ಸೆಳೆಯುವ ಕಾರ್ಯ ಮಾಡುತ್ತಿರುವುದಾಗಿ ಅವರು ಹೇಳಿದರು.
ಕಾಂಗ್ರೆಸ್ ಯಾರ ವಿರುದ್ಧವೂ ಸೇಡಿನ ರಾಜಕೀಯ ಮಾಡುತ್ತಿಲ್ಲ. ಶಿವನಗೌಡರ ಅವಧಿಯಲ್ಲಿ ಮಂಜೂರಾದ ಕೋಟ್ಯಂತರ ರು. ವೆಚ್ಚದ ಕಾಮಗಾರಿಗಳಿಗೆ ಸಿಎಂ ಇತ್ತೀಚೆಗೆ ಚಾಲನೆ ನೀಡಿದ್ದಾರೆಂದ ಅವರು, ಶಿವನಗೌಡ ನಾಯಕರ ಬಗ್ಗೆ ಮತದಾರರನ್ನು ಎಚ್ಚರಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.

ನಕಲಿ-ಅಸಲಿ ಬಿಜೆಪಿಗೆ ಗೆಲವು ದೂರ: ಸಚಿವ
ರಾಯಚೂರು: ಬಿಜೆಪಿಯಲ್ಲಿ ಆಂತರಿಕ ಕಲಹದಿಂದಲೇ ಆ ಪಕ್ಷದವರಿಗೆ ಗೆಲವು ದೂರವಾಗಲಿದೆ ಎಂದು ಸಚಿವ ಬಾಬುರಾವ್ ಚಿಂಚನಸೂರ ಭವಿಷ್ಯ ನುಡಿದರು. ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ರಾಜ್ಯದಲ್ಲಿ ಈಚೆಗೆ ಬಿಜೆಪಿ ಸೇರಿದ ಶೋಭಾ ಕರಂದ್ಲಾಜೆ ಮತ್ತಿತರರನ್ನು ಸೋಲಿಸಲು ಅವರ ಪಕ್ಷದವರೇ ಶ್ರಮಿಸುತ್ತಿದ್ದಾರೆಂದು ಲೇವಡಿ ಮಾಡಿದರು.
ಒಂದಾದರೂ ಗೆಲವು ದೊರಕದು: ಕಳೆದ ಚುನಾವಣೆಯಲ್ಲಿ ಭಿನ್ನಾಭಿಪ್ರಾಯದಿಂದ ಬಿಜೆಪಿ ತೊರೆದಿದ್ದವರು ಈಗ ಒಂದಾಗಿದ್ದಾರೆ. ಅಕ್ರಮ, ಭ್ರಷ್ಟಾಚಾರದ ಆರೋಪ ಹೊತ್ತು ಆ ಪಕ್ಷ ತೊರೆದವರು ಚುನಾವಣೆ ಹಿನ್ನೆಲೆಯಲ್ಲಿ ಒಂದಾಗಿದ್ದಾರೆ. ಆದರೆ ಅವರಿಗೆ ಗೆಲವು ದೊರೆಯದು ಎಂದ ಚಿಂಚನಸೂರು, ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸುವರೆಂದರು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸರಾಜು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ರಾಜ್ಯದಲ್ಲಿ ಇನ್ನೂ 4 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಲಿದ್ದು, ಕೇಂದ್ರದಲ್ಲಿ ಬೇರೆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮತದಾರರ ಬೇಡಿಕೆ ಈಡೇರುವುದು ಕಷ್ಟವಾದೀತು ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement