ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಲುವೆ ನೀರಿಗಾಗಿ ಶಾಸಕರ ಗಡುವು

Srinivasa Murthy VN
Updated On : 26 Mar 2014, 12:26 pm

ಸುರಪುರ: ನಾರಾಯಣಪುರ ಎಡದಂಡೆ ಕಾಲುವೆಗೆ ಮಾ.31ರವರೆಗೆ ನೀರು ಹರಿಸದಿದ್ದರೆ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಗಡುವು ನೀಡಿದ್ದಾರೆ.
ಮಾರ್ಚ್ ಅಂತ್ಯದವರೆಗೂ ಕಾಲುವೆಗೆ ನೀರು ಹರಿಸಬೇಕು ಎಂದು ಅನೇಕ ಬಾರಿ ನಾರಾಯಣಪುರ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಅವರಿಗೆ ಹಾಗೂ ತಮಗೂ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದೆ. ಆದರೆ 22 ರಂದು ಸಂಜೆ ಏಕಾಏಕಿ ನೀರು ಬಂದ್ ಮಾಡಿ ರೈತರ ಬದುಕಿನೊಂದಿಗೆ ಚಕ್ಕಂದವಾಡುತ್ತಿರುವುದು ಸರಿಯಲ್ಲ. ಎಂದು ಶಾಸಕರು ಆಗ್ರಹಿಸಿದ್ದಾರೆ.
ಎಲ್ಲ ಪಕ್ಷಗಳ ಪ್ರತಿನಿಧಿಗಳು ನೀರಿನ ವಿಷಯದಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದಾರೆ. ಯಾವುದೇ ಒಂದು ಪಕ್ಷ, ಒಂದೇ ಜನಾಂಗದ ರೈತರಿಗೆ ನೀರು ಹರಿಸಿ ಎಂದು ಕೇಳುತ್ತಿಲ್ಲಾ ಮತ್ತು ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಾಸಕರು ಹೇಳಿದ್ದಾರೆ. ನೀರು ನಿಲುಗಡೆಯಿಂದ ಸಾವಿರಾರು ರೈತರ ಬದುಕು ದುರ್ಭರವಾಗಿದೆ. ರೈತರ ಕೋಟ್ಯಂತರ ರೂಪಾಯಿ ಮೊತ್ತದ ಬೆಳೆ ನಷ್ಟವಾಗುತ್ತದೆ. ರೈತ ಕುಟುಂಬಗಳು ಅನಿವಾರ್ಯವಾಗಿ  ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ನೀರು ಹರಿಸುವಂತೆ ಕೋರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಹಾಗಾಗಿ ತಕ್ಷಣ ಕಾಲುವೆಗೆ ನೀರು ಹರಿಸಬೇಕು ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆಯೊಳಗಾಗಿ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಿ ಬಡರೈತರನ್ನು ಸಂಕಷ್ಟದಿಂದ ಬಚಾವು ಮಾಡಬೇಕು. ಅವರ ಮೊಗದಲ್ಲಿ ಮಂದಹಾಸ ಮೂಡಲು ಕಾರಣೀಭೂತರಾಗಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.

ಬಿಸಿಲಿನ ಪ್ರತಾಪ: ಕಲ್ಲಂಗಡಿಗೆ ಮೊರೆ
ಮುದಗಲ್: ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದರಿಂದ ಜನರು ತಂಪು ಪಾನೀಯ, ಕಲ್ಲಂಗಡಿ ಹಣ್ಣುಗಳಿಗೆ ಮಾರು ಹೋಗುತ್ತಿದ್ದಾರೆ.
ಮಳೆಯ ಕೊರತೆಯಿಂದ ಭೂಮಿಯಲ್ಲಿ ತೇವಾಂಶ ಇಲ್ಲದೆ, ಒಣಹವೆ ಹೆಚ್ಚಾಗಿ ಬೇಸಿಗೆ ಆರಂಭದಲ್ಲಿ ಬಿಸಿಲು ನೆತ್ತಿ ಸುಡಲು ಆರಂಭಿಸಿದೆ. ಪಟ್ಟಣಕ್ಕೆ ವ್ಯವಹಾರಕ್ಕಾಗಿ ಧಾವಿಸುವ ಸಾರ್ವಜನಿಕರು ತಂಪು ಪಾನೀಯಗಳಾದ ಕಲ್ಲಂಗಡಿ, ಎಳೆ ನೀರು, ಐಸ್‌ಕ್ರೀಂ, ಸೋಡಾ, ಜ್ಯೂಸ್ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ.
ಪಟ್ಟಣದ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ಲಗ್ಗೆ ಹಾಕಿದ್ದು ಭರ್ಜರಿ ವ್ಯಾಪಾರದಿಂದ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಪಟ್ಟಣದಲ್ಲಿ ಸುತ್ತಮುತ್ತ ಗ್ರಾಮೀಣ ಪ್ರದೇಶಗಳಿಂದ ಬಂದ ಜನತೆ ಎಳೆ ನೀರು ಅಂಗಡಿಗೆ, ಕಲ್ಲಂಗಡಿ ಹಣ್ಣಿನ ರಾಶಿಗಳಿಗೆ ಮಾರು ಹೋಗಿದ್ದಾರೆ. ಜ್ಯೂಸ್, ಮಜ್ಜಿಗೆ, ಐಸ್, ಸೋಡಾ ಅಂಗಡಿಗಳ ಮುಂದೆ ಸರದಿಯಲ್ಲಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬೇಸಿಗೆ ಕಾಲ ಯಾವಾಗ ಬಂದಿತ್ತು ಎಂದು ಕಾಯುತ್ತಿದ್ದ ಅಂಗಡಿ ಮಾಲೀಕರಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಎಳನೀರು, ಕಲ್ಲಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ. ಒಂದು ಎಳನೀರಿಗೆ 20ರಿಂದ 25, ಕಲ್ಲಂಗಡಿಗೆ 40ರಿಂದ 80ರವರೆಗೆ ಮಾರಾಟ ಮಾಡಲಾಗುತ್ತಿದೆ. ಒಂದೊಂದು ಅಂಗಡಿಯಿಂದ ಪ್ರತಿನಿತ್ಯ 1 ಸಾವಿರದಿಂದ 3 ಸಾವಿರವರೆಗೆ ವ್ಯಾಪಾರ ನಡೆಯುತ್ತದೆ ಎನ್ನುತ್ತಾರೆ ಕಲ್ಲಂಗಡಿ ಅಂಗಡಿ ವ್ಯಾಪಾರಿಯೊಬ್ಬರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement