'ಕೈ'ಯ ದಶಕಗಳ ಸಾಧನೆ ಬಿಜೆಪಿಯ 3 ವರ್ಷಕ್ಕೆ ಸಮ
ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಇದುವರೆಗೆ ರಾಯಚೂರು ಕ್ಷೇತ್ರವನ್ನು ಪ್ರತಿನಿಧಿಸಿದವರು ಅಭಿವೃದ್ಧಿ ಕಡೆಗಣಿಸಿದ್ದಾರೆ. ಮತದಾರರು ತಮ್ಮನ್ನು ಬೆಂಬಲಿಸಿದಲ್ಲಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಭರವಸೆ ನೀಡಿದರು.
ಮಾನವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಹಾಗೂ ಅನ್ಯ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಅನೇಕ ದಶಕಗಳಿಂದ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರ ನಡೆಸಿದ್ದಾರೆ. ಆದರೆ ಸಮಗ್ರ ಪ್ರಗತಿಯ ಕನಸು ಸಾಕಾರಗೊಂಡಿಲ್ಲ ಎಂದರು. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರಂಸಿಂಗ್ ಅವರು ಅನೇಕ ದಶಕಗಳಿಂದ ರಾಜಕೀಯದಲ್ಲಿದ್ದರೂ ಈ ಭಾಗಕ್ಕೆ ಕೇವಲ 3 ಸಾವಿರ ಕೋಟಿ ದೊರಕಿಸಿದ್ದಾರೆ. ಆದರೆ ತಾವು ರಾಜ್ಯದ ಸಚಿವರಾಗಿ ಕೇವಲ 3 ವರ್ಷದಲ್ಲೇ 3 ಸಾವಿರ ಕೋಟಿಗೂ ಅಧಿಕ ಅನುದಾನ ದೇವದುರ್ಗ ಕ್ಷೇತ್ರಕ್ಕೆ ತಂದಿದ್ದಾಗಿ ಹೇಳಿದರು.
ಜಿಲ್ಲೆ ಹಿಂದುಳಿಯಲು ಇದುವರೆಗೆ ಆಡಳಿತ ನಡೆಸಿದ ನಾಯಕರೇ ಕಾರಣ. ಸ್ವಾರ್ಥ ಸಾಧನೆಗೆ ಹೆಚ್ಚಿನ ಗಮನ ಹರಿಸಿದ ನಾಯಕರಿಂದಾಗಿ ಜಿಲ್ಲೆ ಅಭಿವೃದ್ಧಿ ಕುಂಠಿತಗೊಂಡಿದೆ. ನೀರಾವರಿ, ವಿದ್ಯುತ್, ಕೃಷಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದರೂ ಪ್ರಗತಿ ಮಾತ್ರ ಜಾರಿಯಾಗಿಲ್ಲ ಎಂದರು.
ದಾರಿ ತಪ್ಪಿಸುವ ಕಾಂಗ್ರೆಸಿಗರು: ಕಾಂಗ್ರೆಸ್ ಮುಖಂಡರು ಮತದಾರರನ್ನು ದಾರಿ ತಪ್ಪಿಸುತ್ತಲೇ ರಾಜಕೀಯ ಜೀವನ ಸಾಗಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಾನವಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವುದಾಗಿ ಹೇಳಿದ್ದ ಆ ಪಕ್ಷದ ಮುಖಂಡರು ಈಗ ಮೌನವಾಗಿದ್ದಾರೆ. ಮತದಾರರು ತಮಗೆ ಬೆಂಬಲಿಸಿದಲ್ಲಿ ಶುದ್ಧ ಮತ್ತು ನಿರಂತರ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಹೋರಾಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ನವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು ಅದರಿಂದ ತಮ್ಮ ಗೆಲುವಿಗೆ ಅಡ್ಡಿಯಾಗದು. ದೇಶದಲ್ಲಿರುವ ಮೋದಿ ಅಲೆ, ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಜನರೊಂದಿಗಿನ ಸ್ಪಂದನೆ, ಕೆಲಸ ಗಮನವಿಸಿರುವ ಮತದಾರರು ತಮ್ಮನ್ನು ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ರಾಜುಗೌಡ ಮಾತನಾಡಿ, ಕಾಂಗ್ರೆಸ್ನವರು ಅಭ್ಯರ್ಥಿ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಬೇಕು. ತಮಗೂ ಶಿವನಗೌಡರಿಗೂ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ನವರ ಕಟ್ಟುಕತೆಗಳನ್ನು ಮತದಾರರು ನಂಬದಿರಲು ಮನವಿ ಮಾಡಿದರು.
ಸೇರ್ಪಡೆ: ಈ ಸಂದರ್ಭದಲ್ಲಿ ಕಾಂಗ್ರೆಸ್ಗೆ ರಾಜಿನಾಮೆ ನೀಡಿದ ಕೆಪಿಸಿಸಿ ಮಾಜಿ ಸದಸ್ಯ ದೊಡ್ಡಬಸಪ್ಪಗೌಡ, ಬೋಗಾವತಿ, ನಾಗರೆಡ್ಡಪ್ಪ, ರಾಜಾ ವಸಂತ ನಾಯಕ, ಬಸವರಾಜ ಗುಡದಿನ್ನಿ, ಚಂದ್ರಕಲಾಧರ ಸ್ವಾಮಿ, ಶಿವಕುಮಾರ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷರಾಗಿದ್ದ ಹರವಿ ಪಂಪಾಪತಿಗೌಡ ಮತ್ತಿತರರು ಬಿಜೆಪಿ ಸೇರಿದರು.