ಮೋದಿ ಅಲೆ ಎಂಬುದು ಬರೀ ಭ್ರಮೆ: ಅತ್ತನೂರ
ರಾಯಚೂರು: ನರೇಂದ್ರ ಮೋದಿ ಅಲೆ ಎಂಬುದು ಭ್ರಮೆಯಷ್ಟೇ. ದೂರದ ಮೋದಿ ಮತ್ತು ರಾಹುಲ್ಗಿಂತ ಕನ್ನಡಿಗರೇ ಆದ ದೇವೇಗೌಡರ ಕೈಬಲಪಡಿಸುವತ್ತ ಮತದಾರರು ಗಮನಹರಿಸಬೇಕು. ಇದುವರೆಗೆ ಕಾಂಗ್ರೆಸ್- ಬಿಜೆಪಿ ನೀಡಿದ ಆಡಳಿತವನ್ನು ಜನತೆ ಕಂಡಿದ್ದು, ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲವು ನಿಶ್ಚಿತ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ. ಮೋದಿ ಅಲೆ ಎಂಬುದು ಕೇವಲ ಕಲ್ಪನೆಯಾಗಿದೆ ಎಂದು ಲೇವಡಿ ಮಾಡಿದರು. ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ರಾಜಾ ಅಮರೇಶ್ವರ ನಾಯಕ ಅವರ ಹೆಸರು ಘೋಷಿಸಲಾಗಿತ್ತು. ಆದರೆ ಅವರು ವೈಯಕ್ತಿಕ ಕಾರಣಕ್ಕೆ ಸ್ಪರ್ಧಿಸಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ನಿವೃತ್ತ ಅಧಿಕಾರಿ ಡಿ.ಬಿ. ನಾಯಕ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಹೇಳಿದರು.
ಜೆಡಿಎಸ್ನಿಂದ ಉತ್ತಮ ಆಡಳಿತ: ಹಾಲಿ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರ ತಂದೆ ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದು, ಪ್ರಗತಿ ಕಂಡಿಲ್ಲ. ಹಾಗೆಯೇ ಬಿಜೆಪಿಯಿಂದ ಕಡೆಯ ಅವಧಿಯಲ್ಲಿ ಆಯ್ಕೆಯಾಗಿದ್ದ ಸಣ್ಣಪಕೀರಪ್ಪ ಆನಂತರದಲ್ಲಿ ಜಿಲ್ಲೆಯತ್ತ ಹೊರಳಿಯೂ ನೋಡಿಲ್ಲ. ಅಂಥ ಪಕ್ಷಗಳ ಬದಲಿಗೆ ಜೆಡಿಎಸ್ ಮಾತ್ರ ಉತ್ತಮ ಆಡಳಿತ ನೀಡಬಲ್ಲದು ಎಂದುಹೇಳಿದರು.
ಹುಡುಕಾಟ ಅನಿವಾರ್ಯವಾಗಿತ್ತು: ಹೊರ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಯಚೂರು ಲೋಕಸಭೆ ಕ್ಷೇತ್ರವು ಎಸ್ಟಿ ಮೀಸಲಾಗಿದ್ದು, ಎಸ್ಟಿ ಜನಾಂಗದಲ್ಲಿ ಗೆಲ್ಲುವ ವ್ಯಕ್ತಿಯ ಹುಡುಕಾಟ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಹುಡುಕಿ ಕಣಕ್ಕಿಳಿಸಿದ್ದಾರೆ. ಕಣಕ್ಕಿಳಿಸುವ ಮುನ್ನ ಜಿಲ್ಲೆಯ ಪಕ್ಷದ ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪಕ್ಷ ಬಿಟ್ಟಿಲ್ಲ: ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಅವರು ಸದ್ಯಕ್ಕೆ ಜೆಡಿಎಸ್ನಲ್ಲೇ ಇದ್ದಾರೆ. ಪಕ್ಷದೊಂದಿಗೆ ಮುಂದುವರಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿ, ಪಕ್ಷದ ಹೊಸ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಡಿ.ಬಿ. ನಾಯಕ ಮಾತನಾಡಿ, ತಾವು ಹೈ.ಕ. ಭಾಗದ ವಿವಿಧ ಜಿಲ್ಲೆಗಳಲ್ಲಿ ಈ ಹಿಂದೆ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸ್ಥಳೀಯರ ಸಮಸ್ಯೆಗಳ ಬಗ್ಗೆ ಅರಿವಿದೆ. ಹಾಗೆಯೇ ಸಮಾಜ ಸೇವೆಯ ಅಪೇಕ್ಷೆಯಿಂದಲೇ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ. ತಮ್ಮ ಅಧಿಕಾರಾವಧಿಯ 30 ವರ್ಷಗಳಲ್ಲಿ 24 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗದ ಭೀಮರಾಯನಗುಡಿಯಲ್ಲಿ ಸೇವೆ ಸಲ್ಲಿಸಿರುವುದಾಗಿ ಹೇಳಿದ ಅವರು, ನೀರಾವರಿ ಯೋಜನೆಯ ಜಾರಿಯಲ್ಲಿ ಶ್ರಮಿಸಿದ್ದಾಗಿ ತಿಳಿಸಿದರು.
ಪಕ್ಷದ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಮಾನಪ್ಪ ವಜ್ಜಲ್, ಮಾಜಿ ಶಾಸಕ ವೆಂಕಟರಾವ ನಾಡಗೌಡ, ಶಿವಶಂಕರ್ ವಕೀಲರು ಸೇರಿದಂತೆ ಅನೇಕರಿದ್ದರು.