ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ವೀರಶೈವ ಸಮಾಜ ರುದ್ರಭೂಮಿ ವಿವಾದ ವೀರಶೈವ ಸಮಾಜದಿಂದ ರಸ್ತೆ ತಡೆ

Srinivasa Murthy VN
Updated On : 27 Mar 2014, 11:25 am

ಕ.ಪ್ರ. ವಾರ್ತೆ ಮುದಗಲ್ ಮಾ.26
ಪಟ್ಟಣದ ವೀರಶೈವ ಸಮಾಜಕ್ಕೆ ಸೇರಿದ ರುದ್ರಭೂಮಿಯ ಖೊಟ್ಟಿ ದಾಖಲೆ ಸೃಷ್ಟಿಸಿ ನೀಲಕಂಠಯ್ಯ ಎನ್ನುವವರು ಅತಿಕ್ರಮಿಸಿದ್ದನ್ನು ವಿರೋಧಿಸಿ ಸಮಾಜದ ಮುಖಂಡರು ರಸ್ತೆ ತಡೆ ಚಳವಳಿ, ಪ್ರತಿಭಟನಾ ಧರಣಿ ನಡೆಸಿದರು.
ಪಟ್ಟಣ ಹೊರವಲಯದ ಸರ್ವೆ ನಂ. 464ರಲ್ಲಿ ನೂರಾರು ವರ್ಷಗಳಿಂದ ವೀರಶೈವ ಸಮಾಜದವರು ಯಾರೇ ಮೃತರಾದರೂ ಇಲ್ಲಿಯೇ ಶವಸಂಸ್ಕಾರ ಮಾಡಲಾಗುತ್ತಿದೆ. ನೀಲಕಂಠಯ್ಯ ಎನ್ನುವವರು ಈ ಜಮೀನಿಗೆ ಸಂಬಂಧಿಸಿದ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಈಗ ಕಾನೂನು ಸಮರಕ್ಕೆ ಮುಂದಾಗಿರುವುದು ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.

ನೆಲಸಮ: ವೀರಶೈವ ಸಮಾಜದ ಹಿರಿಯರ ಸಮಾಧಿಗಳನ್ನು ನೆಲಸಮ ಮಾಡಿ, ರುದ್ರಭೂಮಿಯಲ್ಲಿ ಟ್ರ್ಯಾಕ್ಟರ್ ಯಂತ್ರದಿಂದ ರಾತ್ರೋರಾತ್ರಿ ರೆಂಟೆ ಹೊಡೆಸಿದ್ದರಿಂದ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಮಾಡಿದ್ದನ್ನು ಸಮಾಜ ಬಾಂಧವರು ಖಂಡಿಸಿದರು. ವಿಜಯ ಮಹಾಂತೇಶ್ವರ ಮಠದಿಂದ ಆರಂಭವಾದ ಪ್ರತಿಭಟನೆ ಪ್ರಮುಖ ಬೀದಿ ಮುಖಂತರ ನಾಡ ತಹಸೀಲ್ದಾರ್ ಕಚೇರಿಗೆ ಬಂದು ಧರಣಿ ಸತ್ಯಗ್ರಹ ನಡೆಸಲಾಯಿತು.
ಖೊಟ್ಟಿ ದಾಖಲೆ: ನೀಲಕಂಠಯ್ಯಸ್ವಾಮಿ ಎನ್ನುವವರು ಸರ್ಕಾರಿ ನೌಕರರಾಗಿದ್ದರು, ಅವರ ಪೂರ್ವಜರು ಈ ಜಮೀನನ್ನು ವೀರಶೈವ ಸಮಾಜದ ರುದ್ರಭೂಮಿಗೆಂದು ಬಿಟ್ಟುಕೊಟ್ಟಿದ್ದು ಅಲ್ಲದೆ ಕಳೆದ 70 ವರ್ಷಗಳಿಂದ ಸಮಾಜದ ಯಾರೇ ಮೃತಪಟ್ಟರೂ ಅವರನ್ನು ಇದೇ ರುದ್ರಭೂಮಿಯಲ್ಲಿ ಸಂಸ್ಕಾರ ಮಾಡಲಾಗಿದೆ.
ಆದರೆ ನಿಲಕಂಠಯ್ಯ ತಮಗೆ ಸರ್ಕಾರದಿಂದ 1976ರಲ್ಲಿ ಟೆನೆಂಟ್‌ನಲ್ಲಿ ನೀಡಿದೆ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ. 1973ರಲ್ಲಿ ನೀಲಕಂಠಯ್ಯ ಸರ್ಕಾರಿ ನೌಕರನಾಗಿದ್ದರಿಂದ ಅವರಿಗೆ ಟೆನೆಂಟ್ ಆಗಲು ಸಾಧ್ಯವೇ ಎಂದು ಸಮಾಜದ ಮುಖಂಡರು ಪ್ರಶ್ನಿಸಿದ್ದಾರೆ.

ಯಕ್ಷಪ್ರಶ್ನೆ: ಪಟ್ಟಣದಲ್ಲಿ ವೀರಶೈವ ಸಮಾಜಕ್ಕೆ ಇರುವ ಏಕೈಕ ಸ್ಮಶಾನ ಇದಾಗಿದ್ದು, ಇದನ್ನು ಅಕ್ರಮಿಸಿಕೊಂಡರೆ ಸಮಾಜದವರು ಮೃತಪಟ್ಟರೆ ಎಲ್ಲಿ ಹೂಳುವುದು ಎನ್ನುವ ಪ್ರಶ್ನೆ ಎಲ್ಲ ವೀರಶೈವರಲ್ಲಿ ಕಾಡುತ್ತಿದೆ. ಅಲ್ಲದೆ ಸಮಾಜದ ಬಾಂಧವರು ವಂತಿಗೆ ಹಣ ನೀಡಿ ಈ ಸ್ಮಶಾನದ ರಸ್ತೆ ದುರಸ್ತಿಗೊಳಿಸಿದ್ದಾರೆ.
ಈಗ ಏಕಾಏಕಿ ನೀಲಕಂಠಯ್ಯ ಸಮಾಧಿಗಳನ್ನು ನೆಲಸಮಗೊಳಿಸಿ ರಸ್ತೆ ಬಂದ್ ಮಾಡಿರುವುದು ಸಮಾಜದವರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಸ್ಮಶಾನ ಜಾಗವನ್ನು ಅತಿಕ್ರಮಿಸಿಕೊಂಡಿರುವ ನೀಲಕಂಠಯ್ಯನವರ ದಾಖಲೆಗಳನ್ನು ಪರಿಶೀಲಿಸಬೇಕು. ಹಿರಿಯರ ಸಮಾಧಿಗಳನ್ನು ನೆಲಸಮ ಮಾಡಿದ್ದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಮರೇಗೌಡ ಮಟ್ಟೂರು, ಸುರೇಂದ್ರಗೌಡ ಪಾಟೀಲ್, ಚನ್ನಬಸನಗೌಡ ಕನ್ನಾಳ, ಮಹಾಂತೇಶ ಪಾಟೀಲ್, ಶಿವಪ್ಪ ಸುಂಕದ್, ನಿಂಗಪ್ಪ ಹಣಗಿ, ವಿರುಪಾಕ್ಷಪ್ಪ ನಾಗಲೀಕರ, ಡಾ. ಅಯ್ಯಪ್ಪ ಬನ್ನಿಗೋಳ, ಆಶೊಕಗೌಡ ಪಾಟೀಲ್, ರಾಜು ಮಾಲೀಪಾಟೀಲ್, ಅಲಿಕುಮಾರ, ಶರಣಪ್ಪ ಸಜ್ಜನ್, ಚಂದ್ರಶೇಖರ ಗಂಗಾವತಿ, ಶಶಿಧರ ಕಂಚಿಮಠ ಸೇರಿದಂತೆ ವೀರಶೈವ ಸಮಾಜದ ಎಲ್ಲಾ ಭಾಂದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಹಸೀಲ್ದಾರ್‌ಗೆ ಮುತ್ತಿಗೆ
ಮುದಗಲ್: ಪಟ್ಟಣದ ವೀರಶೈವ ಸಮಾಜದ ರುದ್ರಭೂಮಿ ಅತಿಕ್ರಮಣ ವಿರೋಧಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ತಹಸೀಲ್ದಾರ್ ತಡವಾಗಿ ಆಗಮಿಸಿ ಮನವಿ ಸ್ವೀಕರಿಸಿದ್ದಕ್ಕೆ ಸಮಾಜದ ಮುಖಂಡರು ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪ್ರತಿಭಟನಾಕಾರರು ಬೆಳಗ್ಗೆ 11.00 ಗಂಟೆಗೆ ಮನವಿ ನೀಡುವುದಾಗಿ ಮುಂಚಿತವಾಗಿಯೇ ತಿಳಿಸಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತಾಳಿ 12.40ಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಏಕಾಏಕಿ ರಸ್ತೆ ತಡೆ ನಡೆಸಲು ಕಾರಣವಾಯಿತು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರಿಗೆ ಮುಖಂಡರು ಪ್ರತಿಭಟನೆಗೆ ಸಮಯ ನೀಡಿದ್ದರೂ ಮನವಿ ಸ್ವೀಕರಿಸಲು ತಡವಾಗಿ ಬರಲು ಕಾರಣವೇನು, ಸಮಾಜದ ಬಗ್ಗೆ ನಿರ್ಲಕ್ಷ್ಯ ತಾಳಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಾಗ ತಹಸೀಲ್ದಾರ್ ಮಹಾಜನ್ ಅವರು, ಚುನಾವಣೆ ಕೆಲಸದಲ್ಲಿ ನಿರತರಾಗಿದ್ದರಿಂದ ಬರಲು ತಡವಾಯಿತು. ಆದೇನೇ ಇರಲಿ ರುದ್ರಭೂಮಿ ವಿವಾದವನ್ನು ಬಗೆಹರಿಸಲು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಭರವಸೆ: ಮನವಿ ಸ್ವೀಕರಿಸಿದ ಕೂಡಲೇ ರುದ್ರಭೂಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀಲಕಂಠಯ್ಯ ತಪ್ಪು ಮಾಡಿದ್ದಾರೆ. ಸಮಾಧಿಗಳನ್ನು ನೆಲಸಮ ಮಾಡಿರುವುದು ಮನವರಿಕೆಯಾಗಿದೆ. ಅಲ್ಲದೆ ರುದ್ರಭೂಮಿಯಲ್ಲಿ ಬೇಸಾಯ ಮಾಡಿರುವುದು ತಪ್ಪು. ಇದರ ಸಂಪೂರ್ಣ ವರದಿಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿ ಮುಂದೆ ಈ ಜಮೀನು ವೀರಶೈವ ರುದ್ರಭೂಮಿಗೆ ಉಳಿಸಿಕೊಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಲು ಕಾರಣರಾದ ಕಂದಾಯ ನಿರೀಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement