ಶಿಕ್ಷಣ ಯುವಕರ ಬದುಕು ಕಟ್ಟಲಿ
ಕ.ಪ್ರ. ವಾರ್ತೆ ಸಿಂಧನೂರು ಮಾ.26
ವಿದ್ಯಾರ್ಥಿ, ಯುವಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜಾಗತೀಕರಣದ ಕಾರಣದಿಂದ ಶಿಕ್ಷಣ ಸರಕಾಗಿದೆ. ಕೇವಲ ಅಂಕಗಳನ್ನು ಗಳಿಸುವುದೇ ಶಿಕ್ಷಣ ಅಲ್ಲ. ಬದುಕು ಕಟ್ಟುವ ಶಿಕ್ಷಣ ಬೇಕು ಎಂದು ಪತ್ರಕರ್ತ ಡಿ.ಎಚ್. ಕಂಬಳಿ ಅಭಿಪ್ರಾಯಪಟ್ಟರು.
ನಗರದ ಶಾದಿಮಹಲ್‌ನಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೌಶಲ್ಯಯುತ ಶಿಕ್ಷಣ ವಿದ್ಯಾರ್ಥಿಗಳಿಗೆ ಅನುಕೂಲವಾಗಬಲ್ಲದು. ಅದರ ಜೊತೆಗೆ ನೈತಿಕ ಮೌಲ್ಯಗಳು ಇರಬೇಕು. ನಾಡು ಕಟ್ಟುವ ನಿಟ್ಟಿನಲ್ಲಿ ಪರಿಪೂರ್ಣ ವ್ಯಕ್ತಿಯನ್ನಾಗಿಸಲು ಶಿಕ್ಷಣ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಸಮಾಜದೊಳಿತು ಬಯಸುವ ಪಕ್ಷ ಬೆಂಬಲಿಸಿ: ಜಾತ್ಯತೀತ ಮತ್ತು ಸಮಾಜ ಅಭಿವೃದ್ಧಿಗೆ ಒಳಿತನ್ನು ಬಯಸುವ ಪಕ್ಷಗಳನ್ನು ಬೆಂಬಲಿಸುವ ಜವಾಬ್ದಾರಿ ಯುವಕರ ಮೇಲಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಒ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಸರ್ಕಾರ ಮತ್ತು ವಿದ್ಯಾರ್ಥಿ ಯುವಜನರನ್ನಿಟ್ಟುಕೊಂಡು ಪ್ರಣಾಳಿಕೆಯನ್ನು ತಯಾರಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಐಒ ತಾಲೂಕು ಸಮಿತಿ ಅಧ್ಯಕ್ಷ ಮಹ್ಮದ್ ಅಲಿ ಮಾತನಾಡಿ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ದೊಡ್ಡದಿದ್ದು, ದೇಶದ ಅಭಿವೃದ್ಧಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೈಯ್ಯದ್ ತನ್ವೀರ್, ವಸೀಮ್ ಅಹ್ಮದ್, ನೂರ್ ಸೇರಿದಂತೆ ಎಸ್‌ಐಒ ತಾಲೂಕು ಘಟಕದ ವಿವಿಧ ಪದಾಧಿಕಾರಿಗಳು ಇದ್ದರು.