ಅಖಾಡದಲ್ಲಿ ಮಾವ - ಅಳಿಯನ ಕುಸ್ತಿ
ಜಗನ್ನಾಥ ಆರ್. ದೇಸಾಯಿ
ರಾಯಚೂರು: ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಸಂಬಂಧಿಗಳ ಸಂಘರ್ಷಕ್ಕೆ ದಾರಿ ಮಾಡಿದ್ದ ದೇವದುರ್ಗ ಕ್ಷೇತ್ರವು ಈಗ ಲೋಕ ಸಭೆ ಚುನಾವಣೆಯಲ್ಲೂ ಅಂಥದ್ದೇ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಒಂದು ಕುಟುಂಬದವರ ಮಧ್ಯೆಯೇ ರಾಜಕೀಯ ಜಿದ್ದಾಜಿದ್ದಿ ಮುಂದುವರಿಯಲಿದ್ದು, ಚುನಾವಣೆ ಕಣ ರಂಗೇರಿದೆ. ಲೋಕಸಭೆ ಕ್ಷೇತ್ರವು ಮಾವ ಅಳಿಯನ ಮಧ್ಯೆ ಭರ್ಜರಿ ಪೈಪೋಟಿಗೆ ವೇದಿಕೆಯಾಗಲಿದೆ.
ರಾಯಚೂರು ಲೋಕಸಭೆ ಎಸ್ಟಿ ಮೀಸಲು ಕ್ಷೇತ್ರದಲ್ಲಿನ ಸದ್ಯದ ಸ್ಥಿತಿಯಿದು. ರಾಯಚೂರು ಲೋಕಸಭೆ ಕ್ಷೇತ್ರವು ಕಳೆದ 2004ರ ನಂತರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಕ್ಷೇತ್ರ ಕರೆಯಿಸಿಕೊಂಡಿದೆ. ಜಿಲ್ಲೆಯ ದೇವದುರ್ಗ ವಿಧಾನಸಭೆ ಕ್ಷೇತ್ರವು ಕಳೆದ ಕೆಲ ಚುನಾವಣೆಗಳಿಂದ ಕುಟುಂಬದ ಮೂವರ ಮಧ್ಯೆ ರಣಾಂಗಣವಾಗಿತ್ತು. ರಾಜಕೀಯ ಜಿದ್ದಾಜಿದ್ದಿಯಲ್ಲಿ ತಾತ ವೆಂಕಟೇಶ ನಾಯಕ, ಅವರ ಪುತ್ರ ಬಿ.ವಿ. ನಾಯಕ ಕಾಂಗ್ರೆಸ್ನಿಂದ ಹಾಗೂ ವೆಂಕಟೇಶ ನಾಯಕ ಅವರ ಮೊಮ್ಮಗ ಶಿವನಗೌಡ ನಾಯಕ ಅವರು ಬಿಜೆಪಿಯಿಂದ ಮೇಲಿಂದ ಮೇಲೆ ಸ್ಪರ್ಧೆಗೆ ಚುನಾವಣೆ ಕಣ ಒದಗಿದ್ದರಿಂದ ಪೈಪೋಟಿಯ ತಾಣವಾಗಿತ್ತು.
ತಾತ-ಮೊಮ್ಮಗನ ಮಧ್ಯೆ ಸ್ಪರ್ಧೆ: ಹಿಂದುಳಿಯುವಿಕೆಯ ಹಣೆಪಟ್ಟಿ ಹೊತ್ತಿರುವ ದೇವದುರ್ಗ ವಿಧಾನಸಭೆ ಕ್ಷೇತ್ರ ರಾಜಕೀಯವಾಗಿ ಮಾತ್ರ ಸಾಕಷ್ಟು ಜಿದ್ದಾಜಿದ್ದು ಅಖಾಡ. ಇಲ್ಲಿ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ನ ಹಿರಿಯ ಮುಖಂಡ ವೆಂಕಟೇಶ ನಾಯಕ ಕುಟುಂಬ ಹಾಗೂ ಅವರ ಮೊಮ್ಮಗ ಶಿವನಗೌಡ ನಾಯಕ ಅವರ ಮಧ್ಯೆಯೇ ತೀವ್ರ ಸ್ಪರ್ಧೆ. ಇನ್ನುಳಿದವರು ಇಲ್ಲಿ ಲೆಕ್ಕಕ್ಕಿಲ್ಲ ಎಂಬಷ್ಟು ಸ್ಪರ್ಧೆ.
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ವೆಂಕಟೇಶ ನಾಯಕ(ಹಾಲಿ ಶಾಸಕರು) ಅವರು ನಾಲ್ಕು ಬಾರಿ ಗೆಲುವು ಕಂಡವರು. ಆದರೆ ಅವರಿಗೆ ಕಾಂಗ್ರೆಸ್ ಪಕ್ಷವು 2008ರಲ್ಲಿ ವಿಧಾನಸಭೆ ಕಣಕ್ಕಿಳಿಸಿತು. ಆಗ ಅವರ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದವರು ವೆಂಕಟೇಶ ನಾಯಕ ಅವರ ಮೊಮ್ಮಗ ಜೆಡಿಎಸ್ನ ಶಿವನಗೌಡ ನಾಯಕ.
ಗುರುವಿಗೇ ತಿರುಮಂತ್ರ: ರಾಜಕೀಯ ಕ್ಷೇತ್ರದ ಎಲ್ಲ ಪಟ್ಟುಗಳನ್ನು ವೆಂಕಟೇಶ ನಾಯಕರಿಂದಲೇ ಕಲಿತಿದ್ದ ಶಿವನಗೌಡ ನಾಯಕರು 2008ರಲ್ಲಿ ರಾಜ ಕೀಯ ಗುರುವಿನ ವಿರುದ್ಧವೇ ಸ್ಪರ್ಧೆಗಿಳಿದು ಗೆದ್ದರು. ಆದರೆ ಮುಂದೆ ಕೆಲವೇ ದಿನಗಳಲ್ಲಿ ಅವರು ಆಪರೇಷನ್ ಕಮಲಕ್ಕೆ ಸಿಲುಕಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದರು.
ಮಾವ- ಅಳಿಯ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವನಗೌಡ ನಾಯಕರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷವು, ಅವರ ಮಾವ ಹಾಗೂ ವೆಂಕಟೇಶ ನಾಯಕರ ಪುತ್ರ ಬಿ.ವಿ. ನಾಯಕ ಅವರನ್ನು ಕಣಕ್ಕಿಳಿಸಿತು. ಅದರಿಂದಾಗಿ ಮಾವ ಅಳಿಯನ ಮಧ್ಯೆ ಜಿದ್ದಾಜಿದ್ದಿಗೆ ಉಪಚುನಾವಣೆ ಕಣ ವೇದಿಕೆಯಾಯಿತು. ಅಳಿಯ ಶಿವನಗೌಡ ನಾಯಕ ಮಾವನ ವಿರುದ್ಧವೂ ಗೆಲವು ಕಂಡರು. ಅಂದಿನಿಂದಲೇ ಕ್ಷೇತ್ರದಲ್ಲಿ ಎರಡೂ ಕಡೆಯವರ ಕುಟುಂಬಗಳು ರಾಜಕೀಯ ಮೇಲಾಟಕ್ಕೆ ಅವಕಾಶ ಸಿಕ್ಕಾಗಲೆಲ್ಲ ಕಾಯುತ್ತಲೇ ಸಾಗಿದ್ದವು.
ಸೇಡು ತೀರಿತು..: 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತದೇ ಕುಟುಂಬಗಳ ಮಧ್ಯೆ ಕಣ ಸಿದ್ಧವಾಗಿತ್ತು. ಪರಿಣಾಮ ಬಿಜೆಪಿಯಿಂದ ಶಿವನಗೌಡ ನಾಯಕರು ಸ್ಪರ್ಧೆಗಿಳಿದರೆ, ಕಾಂಗ್ರೆಸ್ ಪಕ್ಷವು ಹಿರಿಯ ಮುಖಂಡ ವೆಂಕಟೇಶ ನಾಯಕ ಅವರಿಗೆ ಟಿಕೆಟ್ ನೀಡಿತು.
ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ ನಾಯಕ ಯಶಸ್ಸು ಕಂಡರು. ಶಿವನಗೌಡ ನಾಯಕರನ್ನು ಸೋಲಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡರು.
ಮತ್ತೆ ಚುನಾವಣೆಗೆ ಮಾವ, ಅಳಿಯ
ಈಗ ಲೋಕಸಭೆ ಚುನಾವಣೆ ಬಂದಿದೆ. ಇದುವರೆಗೆ ವಿಧಾನಸಭೆ ಮಟ್ಟದಲ್ಲಿದ್ದ ಕುಟುಂಬದ ಮಧ್ಯದ ರಾಜಕೀಯ ಸಂಘರ್ಷ ಈ ಬಾರಿ ರಾಷ್ಟ್ರಮಟ್ಟಕ್ಕೆ ಶಿಫ್ಟ್ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಶಿವನಗೌಡ ನಾಯಕರು ಲೋಕಸಭೆ ಚುನಾವಣೆಗೆ ಸಾಕಷ್ಟು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. ಹಾಗಾಗಿ ಬಿಜೆಪಿ ಅವರಿಗೇ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಆದರೆ ಕಾಂಗ್ರೆಸ್ ತಡವಾಗಿಯಾದರೂ ಕಳೆದ ಉಪ ಚುನಾವಣೆಯಲ್ಲಿ ಶಿವನಗೌಡ ನಾಯಕರ ವಿರುದ್ಧ ಸೋಲುಂಡಿದ್ದ ವೆಂಕಟೇಶ ನಾಯಕ ಅವರ ಪುತ್ರ ಬಿ.ವಿ.ನಾಯಕರಿಗೆ ಟಿಕೆಟ್ ನೀಡಿದೆ. ಈಗ ಮತ್ತೆ ಮಾವ- ಅಳಿಯನ ಮಧ್ಯೆ ಸ್ಪರ್ಧೆಗೆ ಲೋಕಸಭೆ ಚುನಾವಣೆ ಅಖಾಡ ಸಜ್ಜಾಗಿದೆ. ಹಾಗೆಯೇ ಕಳೆದ ಬಾರಿ ಉಪ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಬಿ.ವಿ. ನಾಯಕರಿಗೆ ಅವಕಾಶ ಕಲ್ಪಿಸಿರಲೂಬಹುದು. ಒಟ್ಟಿನಲ್ಲಿ ರಾಯಚೂರು ಲೋಕಸಭೆ ಕ್ಷೇತ್ರವೀಗ ಮಾವ- ಅಳಿಯನ ಮಧ್ಯದ ಹಣಾಹಣಿಗೆ ಮತ್ತೊಂದು ಬಾರಿಗೆ ವೇದಿಕೆಯಂತೂ ಆಗಿದೆ.
12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ. 17ರಂದು ನಡೆಯಲಿರುವ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಗುರುವಾರ ನಡೆದು ಒಟ್ಟು 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರ ನಾಮಪತ್ರ ಮಾತ್ರ ತಿರಸ್ಕೃತಗೊಂಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರ ಸಮ್ಮುಖದಲ್ಲಿ ನಡೆದ ನಾಮಪತ್ರಗಳ ಪರಿಶೀಲನೆಯ ವೇಳೆ ಶಹಾಪುರ ತಾಲೂಕಿನ ವನದುರ್ಗ ಮೂಲದ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಪಾಟೀಲ್ ನಾಮಪತ್ರ ಅಪೂರ್ಣವಾಗಿದ್ದು, ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹಾಗೂ ಪಟ್ಟಿಯಲ್ಲಿನ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದದರಿಂದ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಾಮಪತ್ರ ಸಲ್ಲಿಕೆ: ಇನ್ನುಳಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೇಳೆ ಸಲ್ಲಿಕೆಯಾಗಿದ್ದ ಒಟ್ಟು 12 ಅಭ್ಯರ್ಥಿಗಳ 21 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಕಾಂಗ್ರೆಸ್ನ ಬಿ.ವಿ. ನಾಯಕ, ಬಿಜೆಪಿಯ ಶಿವನಗೌಡ ನಾಯಕ, ಜೆಡಿಎಸ್ನ ಡಿ.ಬಿ. ನಾಯಕ, ಆಪ್ ಪಾರ್ಟಿಯ ಭೀಮರಾಯ, ಸಿಪಿಎಂಎಲ್ನ ನಾಗರಾಜ್, ಲೋಕಸತ್ತಾ ಪಾರ್ಟಿಯ ಭಗವಂತಪ್ಪ, ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದ ರಂಗನಾಯಕ, ಎಸ್ಯುಸಿಐ-ಸಿ ಯ ಸೋಮಶೇಖರ್, ಬಿಎಸ್ಪಿಯ ರಾಜಾ ತಿಮ್ಮಪ್ಪ ನಾಯಕ, ಪಕ್ಷೇತರರಾದ ಕೆ. ಬಸವಂತಪ್ಪ, ಚಿನ್ನಯ್ಯ ನಾಯಕ, ಎನ್ಡಿಪಿ ಪಾರ್ಟಿಯ ಮಾರುತಿ ಅವರು ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಸಲ್ಲಿಕೆಯಾಗಿರುವ ನಾಮಪತ್ರ ಹಿಂಪಡೆಯಲು ಮಾ. 29 ಕಡೆಯ ದಿನವಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.