ದೇವದಾಸಿ ಪದ್ಧತಿ ಆಚರಣೆ ಖಂಡಿಸಿ ಪ್ರತಿಭಟನೆ
ರಾಯಚೂರು: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಮರಳು ಸಿದ್ದೇಶ್ವರ ಮಠದಲ್ಲಿ ಪೂಜಾರಿಗಳು ದೇವದಾಸಿ ಪದ್ಧತಿ ಆಚರಿಸುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದವರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ, ಕೂಡಲೇ ದೇವದಾಸಿ ಪದ್ಧತಿ ನಿಷೇಧಕ್ಕೆ ಕೊಪ್ಪಳ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಮರಳು ಸಿದ್ದೇಶ್ವರ ಮಠದ ಪೂಜಾರಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಎಚ್.ಜಿ. ರಾಮುಲು ಕಾಲೋನಿಯಲ್ಲಿ..: ಗ್ರಾಮದ ಎಚ್.ಜಿ. ರಾಮುಲು ಕಾಲೋನಿಯಲ್ಲಿ ಅನಿಷ್ಟ ದೇವದಾಸಿ ಪದ್ಧತಿ ಆಚರಣೆಯಲ್ಲಿದ್ದು, ಬಾಲಕಿಯರು- ಯುವತಿಯರು ಬಲಿಯಾಗುತ್ತಿದ್ದಾರೆ. ಮರಳು ಸಿದ್ದೇಶ್ವರ ದೇವಸ್ಥಾನದ ಪೂಜಾರಿ ಹಾಗೂ ಅವರ ಸಹೋದರರು ಮಹಿಳೆಯರಿಗೆ ಮುತ್ತು ಕಟ್ಟುವ ಕಾರ್ಯ ಮಾಡುತ್ತಿದ್ದು, ಈ ಬಗ್ಗೆ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೂಡಲೇ ಹಿರೇಸಿಂದೋಗಿ ಗ್ರಾಮದಲ್ಲಿರುವ ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಬೇಕು. ಈ ಪದ್ಧತಿ ಜೀವಂತವಾಗಿರಲು ಕಾರಣರಾಗಿರುವ ಪೂಜಾರಿ ಹಾಗೂ ಆತನ ಸಹೋದರನನ್ನು ಬಂಧಿಸುವಂತೆ ಹೋರಾಟಗಾರರು ಒತ್ತಾಯಿಸಿದರು.
ಬೇಡಿಕೆಗಳು: ಅನಿಷ್ಟ ಪದ್ಧತಿಗೆ ಒಳಗಾದ ಮಹಿಳೆಯರಿಗೆ 1,500 ಮಾಸಿಕ ಸಹಾಯಧನ ನೀಡಬೇಕು. ಮರಳು ಸಿದ್ದಯ್ಯ ಮಠದ ಆಸ್ತಿಯನ್ನು ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಹಂಚಿಕೆ ಮಾಡಬೇಕು. ಮಕ್ಕಳಿಗೆ ವಸತಿ ನಿಲಯದಲ್ಲಿ ಆಶ್ರಯ ನೀಡಬೇಕು. ರಾಯಚೂರು ಜಿಲ್ಲೆಯ ದೇವದಾಸಿ ಮಹಿಳೆಯರಿಗೆ ಒಂದು ವರ್ಷದಿಂದ ನಿಂತಿರುವ ಮಾಸಿಕ ವೇತನವನ್ನು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ. ವೀರೇಶ, ಮುಖಂಡರಾದ ಹುಲಿಗೆಮ್ಮ ಮುದಗಲ್, ಶೇಕ್ಷಾಖಾದ್ರಿ, ಮಲ್ಲಯ್ಯ ಜಾಲಹಳ್ಳಿ, ರವಿಕುಮಾರ, ಸರೋಜಾ, ಪಾರ್ವತಿ, ಲಕ್ಷ್ಮಮ್ಮ ಸೇರಿ ಅನೇಕರಿದ್ದರು.