ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಗರ್ ಹುಕುಂ ಸಾಗುವಳಿ ಚೀಟಿಗೆ ಆಗ್ರಹ

Srinivasa Murthy VN
Updated On : 28 Mar 2014, 11:42 am

ಲಿಂಗಸ್ಗೂರು: ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ (ಪಟ್ಟಾ) ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು.
ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ರೈತರು ತಹಸೀಲ್ದಾರ್ ಜಿ.ಎಸ್. ಮಹಾಜನ್ರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಫೂಲಬಾವಿ, ಗೋನವಾಟ್ಲ, ಗೋನವಾಟ್ಲ ತಾಂಡಾ, ಗುಂತಗೋಳ, ದೇವರಭೂಪುರ, ಬಸಾಪೂರ, ಶೀಲಹಳ್ಳಿ (ತುಗಲಿ), ಯಳಗುಂದಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ರೈತರು 30-50 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಬಡ ಮತ್ತು ಹಿಂದುಳಿದ ವರ್ಗದ ರೈತರು ಜಮೀನು ಸಾಗುವಳಿ ಮಾಡುತ್ತಾ ಬಂದಿದ್ದಾರೆ.
ಹೋರಾಟ: ಕೆಲ ರೈತರಿಗೆ ಸಾಗುವಳಿ ಚೀಟಿ ಕೊಟ್ಟು ಪಹಣಿ ಪತ್ರಿಕೆಯಲ್ಲಿ ರೈತರ ಹೆಸರು ನೋಂದಾಯಿಸಿದ್ದಾರೆ. ಇನ್ನು ಕೆಲ ಅನಕ್ಷರಸ್ಥ ಹಾಗೂ ಮುಗ್ಧ ರೈತರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪಟ್ಟಾ ಅಥವಾ ಸಾಗುವಳಿ ಚೀಟಿ ಕೊಟ್ಟಿರುವುದಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡುವಂತೆ ಹಲವು ವರ್ಷಗಳಿಂದ ರೈತ ಸಂಘ ಹೋರಾಟ ನಡೆಸುತ್ತಾ ಬಂದಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಧೀನ ಹುನ್ನಾರ: ಫೂಲಬಾವಿ, ಗೋನವಾಟ್ಲ, ಗೋನವಾಟ್ಲ ತಾಂಡಾ, ಗುಂತಗೋಳ, ದೇವರಭೂಪುರ, ಬಸಾಪುರ, ಶೀಲಹಳ್ಳಿ (ತುಗಲಿ), ಯಳಗುಂದಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಸ್ವಾಧೀನ ಮಾಡಿಕೊಳ್ಳಲು ಕಾರ್ಯೋನ್ಮುಖವಾಗಿದ್ದು, ರೈತರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದೆ. ಇದಕ್ಕೆ ಕಡಿವಾಣ ಹಾಕಿ ರೈತರ ಹಿತ ಕಾಪಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದಿನ್ನಿ, ತಾಲೂಕ ಅಧ್ಯಕ್ಷ ಸಿದ್ಧೇಶ ಗೌಡೂರು, ಉಪಾಧ್ಯಕ್ಷ ಬಸವರಾಜ ಬಡಿಗೇರ, ಸಂ.ಕಾರ್ಯದರ್ಶಿ ಅಮರಯ್ಯಸ್ವಾಮಿ ಹುಲಿಗುಡ್ಡ, ಮುಖಂಡರಾದ ನಾಗಪ್ಪ ಫೂಲಬಾವಿ, ದುರುಗಪ್ಪ ಅಂತರಗಂಗಿ, ಶಿವಪ್ಪ ಕಾಟಗಲ್, ತಿಮ್ಮಪ್ಪ, ಅಂಬಣ್ಣ ಬಡಿಗೇರ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ತಾರಾಬಾಯಿ ಗೋನವಾಟ್ಲ ತಾಂಡಾ, ಗದ್ದೆಮ್ಮ, ಬಾಳಮ್ಮ, ಮಲ್ಲಮ್ಮ, ಅನುಸೂಯಮ್ಮ, ಅಂಬಮ್ಮ, ಹನುಮಮ್ಮ, ಗಂಗಮ್ಮ, ಬಾಲಮ್ಮ ಸೇರಿದಂತೆ ಇನ್ನಿತರರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ರೈತ ಸಂಘದ ಶಾಲು ಹಾಕಿ ಸ್ವಾಗತಿಸಿದರು.

ಬಗರ್ ಹುಕುಂ ಸಾಗುವಳಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ
ಲಿಂಗಸ್ಗೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಗರ್ ಹುಕುಂ ಸಾಗುವಳಿ ಸಮಸ್ಯೆ ಇದ್ದು, ಸರ್ಕಾರ ಸಾಗುವಳಿ ರೈತರಿಗೆ ಸಾಗುವಳಿ ಚೀಟಿ (ಪಟ್ಟಾ) ನೀಡುವಲ್ಲಿ ತಕ್ಷಣ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕಳೆದ ಹಲವಾರು ವರ್ಷಗಳಿಂದ ರೈತರು ಸಾವಿರಾರು ಎಕರೆ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಾ ಬರುತ್ತಿದ್ದು, ಸಾಗುವಳಿ ಚೀಟಿ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೇರೆ ಜಿಲ್ಲೆಗಳಲ್ಲಿ ಸಾಗುವಳಿ ಭೂಮಿ ಹದ್ದುಬಸ್ತ್ ಮಾಡುತ್ತಿಲ್ಲ. ಆದರೆ ಲಿಂಗಸ್ಗೂರು ತಾಲೂಕಿನಲ್ಲಿ ಮಾತ್ರ ಕಾರ್ಯೋನ್ಮುಖರಾಗಿದ್ದಾರೆ. ಟ್ರೆಂಚ್ ಹೊಡೆದ ಭೂಮಿ ಯಥಾಸ್ಥಿತಿಗೆ ತರಲು ರೈತರು ಶುಕ್ರವಾರದಿಂದ ಏಕಕಾಲಕ್ಕೆ ಕಾರ್ಯಚರಣೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹೋರಾಟ ಎಚ್ಚರಿಕೆ: ತಾಲೂಕಿನ ಫೂಲಬಾವಿ, ಗೋನವಾಟ್ಲ, ಗೋನವಾಟ್ಲ ತಾಂಡಾ, ಗುಂತಗೋಳ, ದೇವರಭೂಪುರ, ಬಸಾಪುರ, ಶೀಲಹಳ್ಳಿ (ತುಗಲಿ), ಯಳಗುಂದಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಹದ್ದಬಸ್ತ್ ಮಾಡಿಕೊಳ್ಳಲು ಕಾರ್ಯೋನ್ಮುಖವಾಗಿದ್ದು, ರೈತರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದೆ. ಕೂಡಲೇ ಟ್ರೆಂಚ್ ಕಾರ್ಯ ಕೈಬಿಡದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಬಲಗೊಳಿಸಲು ಗಮನ: ರಾಜ್ಯದಲ್ಲಿ ಕರ್ನಾಟಕ ರೈತಸಂಘ ಕಳೆದ 35 ವರ್ಷಗಳಿಂದ ಸಮಸ್ಯೆಗೆ ಸ್ಪಂದಿಸಲು ರೈತರಿಗೆ ಕೇವಲ ಹೋರಾಟದ ಪ್ರಜ್ಞೆ ಮಾತ್ರ ಕಲಿಸಿದ್ದು, ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ನಿರ್ಲಕ್ಷ್ಯ ತೋರಿತ್ತು. ಇನ್ನು ಮುಂದೆ ರಾಜಕೀಯ ಪ್ರಜ್ಞೆ ಮೂಡಿಸುವ ಮೂಲಕ ರಾಜ್ಯದಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಪ್ರಬಲಗೊಳಿಸಲು ಗಮನ ಹರಿಸಲಾಗುವುದು.
ದೇಶದಲ್ಲಿ ಅಭಿವೃದ್ಧಿ ಚಿಂತನೆ ಹಾಗೂ ಗುಣಾತ್ಮಕ ರಾಜಕೀಯ ಪಕ್ಷಗಳು ಇರುವುದಿಲ್ಲ. ಅನಿವಾರ್ಯವಾಗಿ ರೈತರು ಮತದಾನ ಮಾಡುವ ಪರಿಸ್ಥಿತಿ ಬಂದೊದಗಿದೆ. ಭ್ರಷ್ಟಾಚಾರಕ್ಕಿಂತ ಕೋಮುವಾದ ಅಪಾಯಕಾರಿಯಾಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಹೊರತು ಪಡಿಸಿ ಬೇರೆ ಯಾವುದೇ ಪಕ್ಷಕ್ಕೆ ಮತಹಾಕಲು ನಿರ್ಧರಿಸಿರುವುದಾಗಿ ತಿಳಿಸಿದರು. ಈ ವೇಳೆ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ರೈತ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ್, ಸಿದ್ಧೇಶ ಗೌಡೂರು, ಅಮರಯ್ಯಸ್ವಾಮಿ ಹುಲಿಗುಡ್ಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement