ಮೋದಿ ಸುನಾಮಿಗೆ ಕಾಂಗ್ರೆಸ್ ಧೂಳೀಪಟ: ಶೆಟ್ಟರ್
ಮಸ್ಕಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಎಲ್ಲೆಡೆ ಸುನಾಮಿ ರೀತಿಯಲ್ಲಿದ್ದು, ಅದರಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಮೋದಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾಗದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ತೇರಿನ ಮನೆ ಹತ್ತಿರ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಬುಧವಾರ ಸಂಜೆ ಮಾತನಾಡಿ, ದೇಶಾದ್ಯಂತ ಮೋದಿ ಪರ ಅಲೆಯಿದ್ದು ರಾಜ್ಯದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕ ಸುಭದ್ರತೆ ಅವಶ್ಯ: ದೇಶಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಸುಭದ್ರತೆ ತಂದು ಕೊಡುವ ಕಾರ್ಯ ಆಗಬೇಕಿದೆ. ದೇಶಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವುದು, ಯುವಕರೆಲ್ಲರಿಗೆ ಉದ್ಯೋಗ ಸೃಷ್ಟಿಯಾಗುವುದು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಮಾತ್ರ ಇಂಥ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಗುಜರಾತ್ ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮೋದಿ ಅಭಿವೃದ್ಧಿ ಪಡಿಸಿದ್ದಾರೆ. ದಿನದ 24ಗಂಟೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದರು.
ಸರ್ಕಾರದ ಸಾಧನೆ ಶೂನ್ಯ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಡೆಗಣಿಸಿದೆ. ಕಳೆದ 9 ತಿಂಗಳಿನಲ್ಲಿ ಸರ್ಕಾರದ ಸಾಧನೆ ಶೂನ್ಯ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸುವರ್ಣ ಗ್ರಾಮಯೋಜನೆ, ಸುವರ್ಣ ಭೂಮಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ.
ಹಾಗೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ 43 ನೂತನ ತಾಲೂಕು ಘೋಷಣೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿದರು.
ಕನಸು ನನಸಾಗಬೇಕು: ವಾಜಪೇಯಿ ಆಡಳಿತದಲ್ಲಿ ಮೊದಲ ಬಾರಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ತರಲಾಗಿತ್ತು. ದೇಶದ ಎಲ್ಲಾ ರೈತರಿಗೂ ನೀರು ಒದಗಿಸಲು ನದಿ ಜೋಡಣೆ ಮಾಡುವುದು ಅವರ ಕನಸಾಗಿತ್ತು. ಆ ಕನಸು ನನಸಾಗಬೇಕಾದರೆ ಹಾಗೂ ದೇಶ ಅಭಿವೃದ್ಧಿ ಸಾಧಿಸಬೇಕಾದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಮತದಾರರು ಈ ನಿಟ್ಟಿನಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ, ತಾವು ಆಯ್ಕೆಯಾದಲ್ಲಿ ಕೇಂದ್ರದಿಂದ ದೊರೆಯುವ ಅನುದಾನದ ಸಮರ್ಪಕ ಬಳಕೆ ಮೂಲಕ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಂಎಲ್ಸಿ ಹಾಲಪ್ಪ ಆಚಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ಟಿ.ಆರ್.ನಾಯ್ಕ, ಮಹಾದೇವಪ್ಪಗೌಡ, ಮಲ್ಲಪ್ಪ ಚಿತ್ತಾಪುರ ಮಾತನಾಡಿದರು.
ಜಿಪಂ ಸದಸ್ಯ ವಿಶ್ವನಾಥರೆಡ್ಡಿ ತೋರಣದಿನ್ನಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಂಕರ ಮೇದಾರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹನುಮೇಶ ಬಳಗಾನೂರ, ತಿಪ್ಪೇರುದ್ರ ಸ್ವಾಮಿ, ತಿಮ್ಮನಗೌಡ ಗುಡದೂರ, ದೊಡ್ಡಬಸವರಾಜ, ಗಿರಿಗೌಡ, ಅಮರೇಗೌಡ ವಿರುಪಾಪುರ, ದೇವೇಂದ್ರ ನಾಯಕ ಸೇರಿ ಅನೇಕರಿದ್ದರು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.