ನಂಜುಬಾಧೆ: ಪಶುವಿಜ್ಞಾನ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 24
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ವೈದ್ಯರು ನಂಜುಬಾಧೆಯಿಂದ ಬಳಲುತ್ತಿದ್ದ ಎತ್ತಿಗೆ ಶಸ್ತ್ರಚಿಕಿತ್ಸೆ ಕೈಗೊಂಡು ಗುಣಪಡಿಸುವಲ್ಲಿ ಶನಿವಾರ ಯಶಸ್ವಿಯಾಗಿದ್ದಾರೆ.
ರೈತರೊಬ್ಬರಿಗೆ ಸೇರಿದ ಕಿಲಾರಿ ತಳಿಯ ಎತ್ತಿನ ಒಂದು ಕೊಂಬಿನಲ್ಲಿ(ಕೋಡು) 2 ವರ್ಷದಿಂದ ಕೀವಾಗಿ ನಂಜು ಬಾಧೆಯಿಂದ ನರಳುತ್ತಿತ್ತು. ಮೊದಲಿಗೆ ಶಸ್ತ್ರಚಿಕಿತ್ಸೆ ಕೈಗೊಂಡು ಗುಣಪಡಿಸಲಾಗಿತ್ತು. ಆದರೆ ಅದರ ಈಗ ಮತ್ತೊಂದು ಕೊಂಬಿನಲ್ಲಿಯೂ ಅದೇ ಮಾದರಿಯ ಸಮಸ್ಯೆ ಕಾಣಿಸಿತ್ತು. ಕಳೆದ ಆರು ತಿಂಗಳಿಂದ ಯಾವುದೇ ಚಿಕಿತ್ಸೆಗೆ ಗುಣವಾಗದ್ದರಿಂದ ಪಶುವೈದ್ಯರಾದ, ಸಂಶೋಧನಾ ನಿರ್ದೇಶಕ ಡಾ.ಐ. ಶಂಕರೇಗೌಡರ ಸಮ್ಮುಖದಲ್ಲಿ, ಡಾ. ಮಂಜುನಾಥ ಪಾಟೀಲ್ ನೇತೃತ್ವದಲ್ಲಿ, ಡಾ. ಜಗಜೀವನ್ ರಾಮ್, ಡಾ. ಶ್ರೀಧರ ಜೆ.ಎನ್., ಡಾ. ಪ್ರಹ್ಲಾದ ಉಬಾಳೆ, ಡಾ. ಜಯಶಂಕರ ಹಾಗೂ ವಿರೂಪಾಕ್ಷಪ್ಪ ಅವರಿದ್ದ ತಂಡದವರು ಶನಿವಾರ ಬೆಳಗ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.
ಎತ್ತಿನ ತೊಂದರೆಗೀಡಾಗಿದ್ದ ಕೊಂಬಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಕೊಂಬನ್ನು ಅದರ ದೇಹದಿಂದ ಬೇರ್ಪಡಿಸಿ ನಂಜುಬಾಧೆ ನಿವಾರಣೆ ಸಂಬಂಧಿ ಚಿಕಿತ್ಸೆ ನೀಡಿ ಬಾಧೆಯಿಂದ ಮುಕ್ತಿ ದೊರಕಿಸಿದರು.
ತಜ್ಞರ ಸಲಹೆಗಳು: ಜಾನುವಾರುಗಳಿಗೆ ಕೊಂಬು(ಕೋಡಿ)ನ ಸಮಸ್ಯೆಗಳು ಮುಖ್ಯವಾಗಿ ರೈತರ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಉಂಟಾಗುತ್ತವೆ. ಜಾನುವಾರುಗಳ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಶೇ.5 ರಷ್ಟು ಕೋಡಿನ ಸಮಸ್ಯೆಯಿಂದಲೇ ಬಳಲುತ್ತವೆ ಎಂಬುದು ಗಮನಾರ್ಹ ಎಂದು ವೈದ್ಯರು ತಿಳಿಸಿದ್ದಾರೆ.
ಅವುಗಳಲ್ಲಿ ಮುಖ್ಯವಾಗಿ ಕೋಡಿನ ಕ್ಯಾನ್ಸರ್, ಕೋಡು ಮುರಿಯುವುದು, ಕೋಡಿನ ಹೊರ ಕವಚ ಕಿತ್ತು ಬರುವುದು, ಕೋಡಿನ ನಂಜಿನ ಕೀವು ಬಾಧೆ ಹಾಗೂ ಕೋಡಿನಲ್ಲಿ ಹುಳು ಬೀಳುವುದು ಪ್ರಮುಖ. ಅದರಲ್ಲೂ ಕಾರಹುಣ್ಣಿಮೆ, ಸಂತೆ ಅಥವಾ ಜಾತ್ರೆಯಂಥ ವಿಶೇಷ ಸಂದರ್ಭದಲ್ಲಿ ಎತ್ತುಗಳನ್ನು ಮಾರಾಟ ಮಾಡುವ ಭರದಲ್ಲಿ ಎತ್ತುಗಳ ಕೋಡುಗಳನ್ನು ಕೆತ್ತಿ ಸೀಸದ ಅಂಶವುಳ್ಳ ಬಣ್ಣವನ್ನು ಲೇಪಿಸುವುದು ಎತ್ತುಗಳ ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ರೈತರು ಗಮನಿಸುವಂತೆ ಸಲಹೆ ನೀಡಿದ್ದಾರೆ.
ಕೋಡಿಗೆ ಕ್ಯಾನ್ಸರ್: ಎತ್ತಿನ ಕೋಡುಗಳನ್ನು ಚೂಪಾಗಿ ಕೆತ್ತುವುದರಿಂದ ಕೋಡಿಗೆ ಗಾಯವಾಗಿ ನಂಜಾಗುತ್ತದೆ. ಕೀವು ತುಂಬಿ ದುರ್ವಾಸನೆ ಬರುತ್ತದೆ. ಜತೆಗೆ ಕೋಡು ಬಾಗುತ್ತದೆ. ಸೀಸದ ಅಂಶವುಳ್ಳ ಬಣ್ಣವನ್ನು ಲೇಪಿಸುವುದರಿಂದ ಕೋಡಿಗೆ ಕ್ಯಾನ್ಸರ್ ಬರುತ್ತದೆ. ಹಾಗೆಯೇ ಕೋಡಿನ ಮೇಲೆ ಇರುವಂತಹ ಗೆರೆಗಳು ಮುಚ್ಚಿ ಹೋಗಿ ನಂಜಿನ ಭಾದೆ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತರು ಎತ್ತಿನ ಕೋಡು ಕೆತ್ತುವುದನ್ನು ಬಿಡಬೇಕು. ಕೋಡುಗಳಿಗೆ ಸೀಸದ ಬಣ್ಣದ ಬದಲು ಜಾಜು ಹಚ್ಚಬಹುದೆಂದು ಸಲಹೆ ನೀಡಿರುವ ವೈದ್ಯರು, ಕೋಡಿಗೆ ಆಗುವ ಯಾವುದೇ ರೀತಿಯ ಗಾಯ ಬೇಗನೆ ಗುಣವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿರುವ ಕೋಡಿಗೆ ಸಂಬಂಧಿತ ಸಮಸ್ಯೆಗಳನ್ನು ಚಿಕಿತ್ಸೆ ಮುಖಾಂತರ ಗುಣಪಡಿಸಬಹುದು. ದೀರ್ಘಕಾಲದ ಕೋಡಿನ ಸಮಸ್ಯೆ ಇದ್ದಲ್ಲಿ ರೈತರು ಮಾರಾಟ ಮಾಡದೇ ಶಸ್ತ್ರಚಿಕಿತ್ಸೆ ಮಾಡಿಸಿ ಎತ್ತುಗಳನ್ನು ಪುನಃ ಕೃಷಿ ಚಟುವಟಿಕೆಗೆ ಬಳಸಬಹುದು ಎಂದು ಪಶು ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಮಂಜುನಾಥ ಪಾಟೀಲ್ ತಿಳಿಸಿದ್ದಾರೆ.
ಮುನ್ನೆಚರಿಕೆ ಕ್ರಮಗಳು: ಕೋಡು ಮುರಿದ ತಕ್ಷಣ ಸ್ವಚ್ಛವಾದ ಪಟ್ಟಿಯನ್ನು ಕಟ್ಟಿ ರಕ್ತ ಸೋರುವಿಕೆ ತಡೆಯಬೇಕು. ಕೋಡಿಗೆ ನೊಣದ ಹಾವಳಿ ಮತ್ತು ಹುಳು ಬೀಳುವುದನ್ನು ತಪ್ಪಿಸಲು ಪಟ್ಟಿಯನ್ನು ಕಟ್ಟಿ ಬೇವಿನ ಅಥವಾ ಹೊಂಗೆ ಎಣ್ಣೆಯನ್ನು ಸವರಬೇಕು. ಕೋಡು ಮುರಿಯದಂತೆ ರಸ್ತೆ ಮೇಲೆ ಅಥವಾ ಮೇಯುವ ಮೈದಾನದಲ್ಲಿ ಎಚ್ಚರವಹಿಸಬೇಕು. ಕೋಡಿನ ಶಸ್ತ್ರಚಿಕಿತ್ಸೆ ಬಹಳ ಕಷ್ಟವಿರುವುದರಿಂದ ಹಾಗೂ ವೆಚ್ಚವೂ ತಗಲುವುದರಿಂದ ಮುರಿಯದಂತೆ ನೋಡಿಕೊಳ್ಳುವುದು ಹೆಚ್ಚು ಸೂಕ್ತ ಎಂದಿದ್ದಾರೆ.