ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಗ ಜಲಪಾತದ ಮೇಲಿಂದ ಬಿದ್ದು ಮೂವರ ದುರ್ಮರಣ

Srinivasa Murthy VN
Updated On : 12 Aug 2013, 11:30 am

ಕ.ಪ್ರ.ವಾರ್ತೆ ಶಿವಮೊಗ್ಗ   ಆ.11
ಜೋಗಜಲಪಾತದ ಸೌಂದರ್ಯ ಆರಾಧಿಸಲು ಹೋಗಿ ಮೂವರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಭಾನುವಾರ ಸಂಜೆ ನಡೆದಿದೆ.
ಹುಬ್ಬಳ್ಳಿ ಮೂಲದ ದಾದಾಪೀರ್(31), ಮೈನುದ್ದೀನ್ ಮಖಂದರ್(37) ಮತ್ತು ಅಜೀ ಮಖಂದರ್(25) ಮೃತಪಟ್ಟವರು. ಆರು ಜನರ ತಂಡ ಹುಬ್ಬಳ್ಳಿಯ ಗಾರ್ಡನ್‌ಪೇಟೆ ವಾಸಿಗಳಾಗಿದ್ದು, ಮೃತಪಟ್ಟವರ ಪೈಕಿ ಮೈನುದ್ದೀನ್ ಮತ್ತು ಅಜೀ ಸಹೋದರರು. ಟಾಟಾ ಏಸ್‌ನಲ್ಲಿ ಭಾನುವಾರ ಮಧ್ಯಾಹ್ನ ಇವರು ಜೋಗಕ್ಕೆ ಆಗಮಿಸಿದ್ದರು.
ಜೋಗ ವೀಕ್ಷಣೆ ನಂತರ ನೀರಿನಲ್ಲಿ ಆಡುವ ಉದ್ದೇಶದಿಂದ ಜಲಪಾತದ ಹಿಂಭಾಗದ ಪ್ರದೇಶದಲ್ಲಿ ಆಟವಾಡಲು ಸಂಜೆ 5 ಗಂಟೆ ಸುಮಾರಿಗೆ ನೀರಿಗಿಳಿದಿದ್ದಾರೆ. 6 ಗಂಟೆ ಸುಮಾರಿಗೆ ದಾದಾಪೀರ್ ಮೊದಲು ಕಾಲು ಜಾರಿ ನೀರಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಇದರಿಂದ ಆತಂಕಿತರಾದ ಮೈನುದ್ದೀನ್ ಮಖಂದರ್ ದಾದಾಪೀರ್ ರಕ್ಷಿಸಲು ಮುಂದಾಗಿ ನೀರಿನಲ್ಲಿ ಇಳಿಯುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರೂ ಸಹ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ತಮ್ಮ ಸಹೋದರ ಹಾಗೂ ದಾದಾಪೀರ್ ಕೊಚ್ಚಿಹೋಗಿದ್ದನ್ನು ನೋಡಿದ ಮತ್ತೊಬ್ಬ ಅಜೀ ಮಖಂದರ್ ಸಹ ಗಾಬರಿಗೊಂಡು ನೀರಿನಲ್ಲಿ ಕಾಲಿಟ್ಟಿದ್ದು ಅವರೂ ಸಹ ಕೊಚ್ಚಿಹೋಗಿದ್ದಾರೆ.
ಅನುಮತಿ ಇರಲಿಲ್ಲ: ಮುಂಗಾರು ಮಳೆ ಚಿತ್ರದಲ್ಲಿ ಜೋಗವನ್ನು ವಿಶೇಷ ರೀತಿಯಲ್ಲಿ ತೋರಿಸಿದ್ದ ಪರಿಣಾಮ ಜೋಗವನ್ನು ಮೇಲ್ಬಾಗದಿಂದ ವೀಕ್ಷಿಸುವ ಪ್ರವಾಸಿಗರ ಪ್ರಮಾಣ ಹೆಚ್ಚಾಗುತ್ತಾ ಹೋಯಿತು. ಇದರಿಂದ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಯಾರಿಗೂ ಇಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿರಲಿಲ್ಲ. ಈ ರೀತಿಯ ವೀಕ್ಷಣೆ ಅಪಾಯಕಾರಿ ಎಂದು ಎಚ್ಚರಿಕೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.
ಈ ಕಾರಣಕ್ಕಾಗಿಯೇ ಹುಬ್ಬಳ್ಳಿಯಿಂದ ಬಂದಿದ್ದ ಈ ತಂಡ ಜೋಗ ಜಲಪಾತಕ್ಕಿಂತ ಕೊಂಚ ದೂರದಲ್ಲೇ ನೀರಿಗಿಳಿದು ಆಟವಾಡುತ್ತಿತ್ತು.
ಭಾನುವಾರ ಸಂಜೆ ವೇಳೆಗೆ ನೀರಿನ ರಭಸದ ಜೊತೆಗೆ ಗಾಳಿಯ ಅಬ್ಬರವೂ ಹೆಚ್ಚಾಗಿದ್ದರಿಂದ ಈ ಮೂವರಿಗೆ ತಮ್ಮನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
830 ಅಡಿಯಿಂದ ಬಿದ್ದರು: ನೀರಿನಲ್ಲಿ ಕೊಚ್ಚಿಬಂದ ಈ ಮೂವರು 830 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದು, ದೇಹ ಇನ್ನೂ ಪತ್ತೆಯಾಗಿಲ್ಲ. ಸಿದ್ದಾಪುರ ಹಾಗೂ ಜೋಗ ಪೊಲೀಸರು ಮೃತ ದೇಹವನ್ನು ಪತ್ತೆ ಮಾಡಲು ರಾತ್ರಿ ವೇಳೆ ಪ್ರಯತ್ನ ನಡೆಸಿದರೂ ಯಾವುದೇ ಯಶಕಾಣಲಿಲ್ಲ. ಸೋಮವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜಲಪಾತದ ಮಧ್ಯ ಭಾಗದಲ್ಲಿರುವ ಬಂಡೆಗಳ ಮಧ್ಯೆ ಸಿಕ್ಕಿಕೊಂಡಿದ್ದರೆ ದೇಹವನ್ನು ತೆಗೆಸಲು ಬಂಡೆ ಹತ್ತುವ ತಜ್ಞರನ್ನು ಕರೆಸಬೇಕಾಗುತ್ತದೆ. ಅಥವಾ ಮೃತ ದೇಹಗಳು ನೀರಿನಲ್ಲಿ ಜಲಪಾತದ ಕೆಳಕ್ಕೆ ತಲುಪಿದ್ದರೆ ಕನಿಷ್ಠ ಮೂರು ದಿನವಾದರೂ ಪತ್ತೆಗೆ ಸಮಯಾವಕಾಶ ಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement