ಅತಿವೃಷ್ಟಿ ಹಾನಿ; ಸರ್ಕಾರದ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ತೀರ್ಥಹಳ್ಳಿ ಆ.12
ತಾಲೂಕಿನಲ್ಲಿ ಎರಡು ತಿಂಗಳಿಂದ ಬಿದ್ದ ಸತತ ಮಳೆಯಿಂದಾಗಿ ಕೃಷಿಕರು ಕಂಗೆಟ್ಟಿದ್ದು, ಸರ್ಕಾರ ರೈತರ ನೆರವಿಗೆ ಬಂದಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಲೂಕಿನಲ್ಲಿ ಎರಡು ತಿಂಗಳಿನಿಂದಲೂ ಸತತ ಮಳೆಯಾಗಿದ್ದು, ಎಲ್ಲಾ ತಾಲೂಕು ಹೋಬಳಿಗಳಲ್ಲಿ ಬೆಳೆ ಹಾನಿಯಾಗಿದೆ. ಅಡಕೆ ತೋಟಕ್ಕೆ ಕೊಳೆರೋಗ ಬಂದು ಅಡಕೆ ಕಾಯಿಗಳು ಉದುರಿಹೋಗಿದ್ದರೆ, ಗದ್ದೆಗಳಲ್ಲಿ ನೀರು ತುಂಬಿದ್ದು ಹೂಳು ಕೂತಿದೆ, ಸಸಿಗಳು ಕೊಳೆಯುತ್ತಿವೆ. ಆದರೆ ಕಾಂಗ್ರೆಸ್ ಸರ್ರ್ಕಾರದ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಜಾಣಕಿವುಡು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.
ಹಿಂದೆ ಇದ್ದ ಬಿಜೆಪಿ ಸರ್ಕಾರ ರೈತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರ ಬಗ್ಗೆ ಕಾಳಜಿ ಇತ್ತು. ಈ ವರ್ಷದ ಮಳೆಯಿಂದ ಬತ್ತದ ಸಸಿ ಮಡಿಗಳು ಕೊಚ್ಚಿಕೊಂಡು ಹೋಗಿವೆ. ಹೊಳೆ ಹಳ್ಳಗಳ ದಂಡೆಗಳು ಒಡೆದು ಜಮೀನಿನ ಮೇಲೆ ನೀರು ಹಾಯ್ದುಹೋಗಿ ನೀರು ತುಂಬಿಕೊಂಡಿವೆ. ಬಹುತೇಕ ಭತ್ತದ ಗದ್ದೆ ನಾಟಿ ಮಾಡುವಂತಿಲ್ಲ. ಹಾಗೆಯೇ ಮಲೆನಾಡಿನ ಪ್ರಮುಖ ಅಡಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಜಿಲ್ಲೆ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಯಾವುದೇ ರೀತಿಯಲ್ಲಿ ಸ್ಪಂದನೆ ತೋರುತ್ತಿದೆ ಎಂದು ಆರೋಪಿಸಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 38 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರೆ, ತಾಲೂಕಿನಲ್ಲಿ 70 ಕೋಟಿ ನಷ್ಟವಾಗಿದೆ ಎಂದು ತಹಸೀಲ್ದಾರ್ ಹೇಳುತ್ತಾರೆ. ಇದರಲ್ಲಿ ಯಾವುದು ನಂಬುವುದು ಎಂದು ಆರಗ ಜ್ಞಾನೇಂದ್ರ ಆಪಾದಿಸಿದರು.
ಪಟ್ಟಣದ ರಸ್ತೆ ಅಗಲೀಕರಣದಿಂದಾಗಿ ಅನೇಕ ಕಟ್ಟಡಗಳಿಗೆ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆ ಮಾಡುವ ಬದಲು ಮಂತ್ರಿಯಾದವರು ಇಲ್ಲಿಂದ ತಂಡವನ್ನು ಕರೆಸಿಕೊಂಡು ಇನ್ನೊಬ್ಬ ಮಂತ್ರಿಗೆ ಮನವಿ ನೀಡುತ್ತಾರೆ. ಅದರ ಬದಲು ಅವರೇ ಪ್ರಯತ್ನಿಸಿದರೆ ಬಹಳ ಬೇಗ ಪರಿಹಾರ ದೊರೆಯುತ್ತದೆ ಎಂದರು.
ಸರ್ಕಾರ ಅತಿವೃಷ್ಟಿಯಾಗಿರುವ ಪ್ರದೇಶಗಳಿಗೆ ವಿಶೇಷ ತಂಡ ರಚಿಸಿ ಪರಿಶೀಲಿಸಿ ವಿಶೇಷ ಅನುದಾನ ಬಿಡುಗಡೆ ಮಾಡಿ ರೈತರಿಗೆ ಪರಿಹಾರ ನೀಡಬೇಕು, ಸಾಲಮನ್ನಾ ಆಗಿರುವ ರೈತರಿಗೆ ಸಹಕಾರ ಸಂಘಗಳ ಮೂಲಕ ಕೂಡಲೆ ಸಾಲ ವಿತರಣೆ ಮಾಡಬೇಕು. ಯಾವುದೇ ನಿಬಂಧನೆ ಹಾಕದೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ತಾಲೂಕು ಬಿಜೆಪಿ ಒತ್ತಾಯಿಸಿತು.
ಚಕ್ಕೊಡಬೈಲು ರಾಘವೇಂದ್ರ, ಕೊಡಸಗೊಳ್ಳಿ ಶಾಮಣ್ಣ, ಈಶ್ವರ್, ಸಾಲೇಕೊಪ್ಪ ರಾಮಚಂದ್ರ, ಸಂದೇಶ್ ಜವಳಿ ಇದ್ದರು.