ತೀವ್ರ ಹಣಾಹಣಿ: ಷಡಕ್ಷರಿಗೆ ವಿಜಯಮಾಲೆ
ಕ.ಪ್ರ.ವಾರ್ತೆ ಶಿವಮೊಗ್ಗ ಆ.12
ತೀವ್ರ ಹಣಾಹಣಿ ನಡೆದಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಮುಖ್ಯಸ್ಥರ ಚುನಾವಣೆಯಲ್ಲಿ ಸಿ.ಎಸ್. ಷಡಕ್ಷರಿ ಅವರು ನಾಲ್ಕು ಮತಗಳ ಅಂತರದಿಂದ ಗೆಲವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಮತದಾನ ನಡೆದು, ಸಂಜೆ ಮತ ಎಣಿಕೆಯೂ ಆಯಿತು. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿ, ಮರು ಆಯ್ಕೆ ಬಯಸಿದ್ದ ರಘುರಾಮ್ ದೇವಾಡಿಗ ಅವರು 30 ಮತಗಳನ್ನು ಪಡೆದರೆ, ಷಡಕ್ಷರಿ ಅವರು 34 ಮತಗಳನ್ನು ಪಡೆದು ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ 59 ಸದಸ್ಯರು ಹಾಗೂ 6 ತಾಲೂಕು ಘಟಕಗಳ ಅಧ್ಯಕ್ಷರು ಮತದಾನದಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಷಡಕ್ಷರಿ ಬಣದ ನರಸಿಂಹಯ್ಯ ಅವರು 33 ಮತಗಳೊಂದಿಗೆ ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿದ್ದ ಘನಶ್ಯಾಮ್ 31 ಮತ ಪಡೆದರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವಾಡಿಗ ಬಣದ ಶಾಂತರಾಜ್ ಅವರು 33 ಮತ ಪಡೆದು ಆಯ್ಕೆಯಾದರೆ, ಇವರ ವಿರುದ್ಧ ಸ್ಪರ್ಧಿಸಿದ್ದ ಬಾಲಚಂದ್ರ 31 ಮತಗಳನ್ನು ಪಡೆದರು.
ಪ್ರಾಮಾಣಿಕತೆಗೆ ಜಯ: ತಮ್ಮ ಆಯ್ಕೆ ಪ್ರಾಮಾಣಿಕತೆಗೆ ಸಿಕ್ಕ ಜಯ ಎಂದು ಸಿ.ಎಸ್. ಷಡಕ್ಷರಿ ಹೇಳಿದ್ದಾರೆ. ಎಷ್ಟೇ ಒತ್ತಡ ಬಂದರೂ, ಯಾವುದೇ ಆಮಿಷ ತೋರಿದರೂ ಸಹ ಕಾರ್ಯಕಾರಿ ಸಮಿತಿಯ ಬಹುತೇಕ ಸದಸ್ಯರು ಅದಕ್ಕೆ ಬಲಿಯಾಗದೇ ಮತ ನೀಡಿ ಗೆಲವು ನೀಡಿದ್ದಾರೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಮಸ್ಯೆಗೆ ಸ್ಪಂದಿಸಲು ಮೀಸಲಿಡುತ್ತೇನೆ. ಚುನಾವಣೆಗೆ ಮುನ್ನ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರ ಆಪ್ತ ಸಹಾಯಕರಾಗಿದ್ದ ಷಡಕ್ಷರಿ ಅವರು, ನನಗೆ ಜನಪ್ರತಿನಿಧಿಗಳ ಒಡನಾಟ ಹೊಂದಿದ್ದರೂ ಅದ್ಯಾವುದನ್ನೂ ನಾನು ಬಳಸಿಕೊಳ್ಳಲಿಲ್ಲ. ವೈಯಕ್ತಿಕ ವರ್ಚಸ್ಸಿನಿಂದ ಹಾಗೂ ಇದೂವರೆಗೆ ನೌಕರರಿಗೆ ಸ್ಪಂದಿಸಿದ ರೀತಿಯಿಂದ ಗೆಲವು ಸಿಕ್ಕಿದೆ ಎಂದಿದ್ದಾರೆ.
ಎಲ್ಲರಿಗೂ ಮತ
ಚುನಾವಣೆ ವೇಳೆ ಎರಡು ಬಣಗಳು ಆಗಿದ್ದರಿಂದ ಅವರಿಗೆ ಅದೆಷ್ಟು ಬೇಸರವಾಗಿತ್ತೋ, ಚುನಾವಣೆಯಲ್ಲಿ ಒಬ್ಬ ಮತದಾರರು ಇಬ್ಬರೂ ಅಭ್ಯರ್ಥಿಗಳಿಗೆ ಮತ ನೀಡಿ ಸಮಾಧಾನಪಟ್ಟುಕೊಂಡಿದ್ದಾರೆ.
ಮೂರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಮೂರು ಬ್ಯಾಲೆಟ್‌ಗಳಲ್ಲೂ ಇದು ಕಂಡುಬಂತು. ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಸಹಜವಾಗಿಯೇ ಈ ಮತ ಅಸಿಂಧು ಎಂದು ಪರಿಗಣಿಸಲ್ಪಟ್ಟಿದೆ.
ಚುನಾವಣೆಗೆ ಮುನ್ನ, ನಾಮಪತ್ರ ಸಲ್ಲಿಸುವ ಮುನ್ನ ಹಲವು ಕಾರ್ಯಕಾರಿ ಸಮಿತಿ ಸದಸ್ಯರು ಎರಡೂ ಬಣದಲ್ಲಿ ಕಾಣಿಸಿಕೊಂಡಿದ್ದರು. ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಲೇ ಇದ್ದರು. ಅವರಲ್ಲಿ ಯಾರೋ ಒಬ್ಬರಿಗೆ ಮತ ಹಾಕುವ ಸಂದರ್ಭದಲ್ಲಿ ಈ ಅಭ್ಯಾಸ ಬಿಡಲು ಆಗಿಲ್ಲ. ಹಾಗಾಗಿ ಅವರು ಎಲ್ಲಾ ಅಭ್ಯರ್ಥಿಗಳಿಗೂ ಮತ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರನಾಗಿದ್ದುಕೊಂಡು, ಮತ ಅಸಿಂಧುವಾಗುತ್ತದೆ ಎಂದು ಗೊತ್ತಿದ್ದೂ ಈ ರೀತಿ ಮತ ಚಲಾಯಿಸಿದ ಮಹಾನುಭವ ಯಾರು ಎಂಬುದು ಮತ ಎಣಿಕೆ ಕೇಂದ್ರದಲ್ಲಿ ಭಾರಿ ಚರ್ಚೆಗೆ ಎಡೆಮಾಡಿತ್ತು.