ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವ ಉದ್ಯೋಗ ಉಚಿತ ತರಬೇತಿ

Srinivasa Murthy VN
Updated On : 13 Aug 2013, 11:03 am

ಶಿವಮೊಗ್ಗ: ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್  ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆಯುವ ಉಡುಪಿ ಜಿಲ್ಲೆ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ 18ರಿಂದ 45 ವರ್ಷ ವಯೋವುತಿಯ, ಸ್ವ ಉದ್ಯೋಗ ಮಾಡಲು ಉತ್ಕಟ ಆಸಕ್ತಿಯುಳ್ಳ ನಿರುದ್ಯೋಗಿ ಯುವಕ- ಯುವತಿಯರಿಗೆ ತರಬೇತಿ ಆಯೋಜಿಸಲಾಗಿದ್ದು, ತರಬೇತಿಯಲ್ಲಿ ಸಂಬಂಧಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕ್ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಗಾರ್ಮೆಂಟ್ಸ್ ಟೈಲರಿಂಗ್ (ವಿದ್ಯುತ್ ಚಾಲಿತ ಮಷಿನ್) ತರಬೇತಿ ಸೆ. 10ರಿಂದ ಅಕ್ಟೋಬರ್ 9ರವರೆಗೆ 30 ದಿನಗಳದ್ದಾಗಿರುತ್ತದೆ. ಸಿದ್ಧ ಉಡುಪು ತಯಾರಿಕೆ ತರಬೇತಿ (ಮಹಿಳೆಯರಿಗೆ) ಸೆ.10 ರಿಂದ 30ರವರೆಗೆ 21 ದಿನಗಳದ್ದಾಗಿದ್ದು, ತರಬೇತಿ ಪೂರ್ತಿ ಉಚಿತವಾಗಿದ್ದು, ವಸತಿಯುತವಾಗಿದೆ. ಆಸಕ್ತ ಅಭ್ಯರ್ಥಿಗಳು ಆ.21ರ ಒಳಗಾಗಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ಪಡೆಯಲು ಇಚ್ಚಿಸುವ ತರಬೇತಿ ವಿವರಗಳೊಂದಿಗೆ ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, ಉಡುಪಿ ಜಿಲ್ಲೆ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ದೂ. 0820-2563455 ಸಂಪರ್ಕಿಸಬಹುದು.

ಕಳ್ಳರ ಬಂಧನ: ರು. 3.9 ಲಕ್ಷ ವಶ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಮತ್ತು ತಲವಾನಿ ಗ್ರಾಮದಲ್ಲಿ ಕಳ್ಳತನ ಮಾಡಿ ನಗರದ ಸಹ್ಯಾದ್ರಿ ಕಾಲೇಜು ಬಳಿಯ ಟೆಂಟುಗಳಲ್ಲಿ ವಾಸವಾಗಿದ್ದ ಮಂಜುನಾಥ ಬಿನ್ ಮಲ್ಲೇಶ ಮತ್ತು ಪ್ರಕಾಶ ಬಿನ್ ಲಕ್ಷ್ಮಣ ಎಂಬುವವರನ್ನು ದಸ್ತಗಿರಿ ಮಾಡಿ, ವಿಚಾರಣೆಗೊಳಪಡಿಸಲಾಗಿದ್ದು, ಬಂಧಿತರಿಂದ ರು. 3.9 ಲಕ್ಷದ ಬೆಳ್ಳಿ ಮತ್ತು ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕ್ಷಕರು ತಿಳಿಸಿದ್ದಾರೆ. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಬಿ. ದಯಾಳು, ತೀರ್ಥಹಳ್ಳಿ ಡಿವೈಎಸ್ಪಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜು, ಪಿಎಸ್‌ಐ ಚಂದ್ರಶೇಖರ, ಸೋಮಪ್ಪ, ಜ್ಞಾನೇಂದ್ರ, ಮುರಳಿ ಮತ್ತು ಮಂಜುನಾಥ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

'ಸ್ವಾವಲಂಬಿಗಳಾಗಿ'
ಶಿವಮೊಗ್ಗ: ಸ್ವಂತ ಗಳಿಕೆಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿ ತಮ್ಮ ಕಾಲಮೇಲೆ ನಿಲ್ಲುವ ಮನಸ್ಥಿತಿ ಎಲ್ಲಾ ಮಹಿಳೆಯರಲ್ಲಿಯೂ ಇರಬೇಕು. ಆರ್ಥಿಕವಾಗಿ ಸಬಲರಾದರೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ಮುಂದೆ ಬರಬಹುದು ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕರಾದ ಎಸ್.ವೈ. ಅರುಣಾದೇವಿ ಹೇಳಿದರು.  ಶಿಕಾರಿಪುರ ತಾಲೂಕಿನ ಹರಗುವಳ್ಳಿ ಗ್ರಾಮದಲ್ಲಿ ನಡೆದ ವಿವಿಧ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅವರು, ಎಲ್ಲಿ ಅವಕಾಶ ವಂಚಿತರಿರುವರೋ ಅಲ್ಲಿಗೆ ಮೂಲ ಸೌಕರ್ಯ ಒದಗಿಸುವುದು ಭಾರತ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಸರ್ಕಾರದಿಂದ ಬರುವ ಯೋಜನೆಗಳ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆಯಬೇಕು ಎಂದರು.

ಆತ್ಮ ವಿಶ್ವಾಸ ಹೆಚ್ಚಳ: ತರಬೇತಿ ಪಡೆದು, ಆರ್ಥಿಕವಾಗಿ ಬೆಳೆದು ಸಾಮಾಜಿಕವಾಗಿ ಗುರುತಿಸಿಕೊಳ್ಳುವಂತಾಗಬೇಕು. ಆಗ ಆತ್ಮವಿಶ್ವಾಸ ಹೆಚ್ಚಾಗುತ್ತದೆಂದು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ನಿರ್ದೇಶಕರಾದ ತೇಜಸ್ವಿನಿ ರಾಘವೇಂದ್ರ, ಯಾವುದೇ ಕೆಲಸವನ್ನು ನಿರ್ವಹಿಸಲು ದೃಢನಿರ್ಧಾರ ಬೇಕಾಗುತ್ತದೆ. ಮಹಿಳೆಯರು ಸಶಕ್ತರಾಗಬೇಕಾರೆ ಹೆಚ್ಚಿನ ಆಸಕ್ತಿಯಿಂದ ದೃಢನಿರ್ಧಾರದಿಂದ ಮುನ್ನುಗ್ಗಿ ಆಸಕ್ತಿ ವಹಿಸಿ ಕಲಿತಲ್ಲಿ ನೀವೂ ಕೂಡ ಯಶಸ್ವೀ ಮಹಿಳೆಯಾಗಬಹುದು ಎಂದರು.  ಕಾರ್ಯಕ್ರಮದಲ್ಲಿ ಹರಗುವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯರಾಂ, ಗ್ರಾಪಂ. ಅಧ್ಯಕ್ಷೆ ಮಂಜುಳ, ಅಧ್ಯಕ್ಷರು, ಸದಸ್ಯೆ ಸರಸ್ವತಿ ಊರಿನ ಪ್ರಮುಖರು ಇದ್ದರು.

ಇಂದಿನಿಂದ ಗಮಕ ವಾಚನ
ಸಾಗರ: ಮಲೆನಾಡು ಗಮಕ ಕಲಾಸಂಘ ಶೃಂಗೇರಿ ಶಂಕರಮಠ ಸಾಗರ ಶಾಖೆಯಲ್ಲಿ ಸಮಗ್ರ ಕನ್ನಡ ಭಾಗವತ ಗಮಕವಾಹಿನಿ ಕಾರ್ಯಕ್ರಮದ ಅಂಗವಾಗಿ ಆ.13ರಿಂದ 17ರ ವರೆಗೆ ಗಮಕ ವಾಚನ ಮತ್ತು ವ್ಯಾಖ್ಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಸಂಜೆ ಆರರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ವಸುದೇವನ ವಿವಾಹ, ಶ್ರೀಕೃಷ್ಣ ಜನನ, ಪೂತನಿ ಸಂಹಾರ ಮತ್ತು ಶ್ರೀಕೃಷ್ಣಲೀಲೆ ಕಥಾನಕದ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚೇತನ ಜಿತೇಂದ್ರ, ನಾಗರತ್ನ ಆನಂದಕುಮಾರ, ಸೀತಾ ಬಾಪಟ್ ಮತ್ತು ವಿನಾಯಕ ಅವರುಗಳು ವಾಚನ ನಡೆಸಲಿದ್ದಾರೆ. ಕೃಷ್ಣಮೂರ್ತಿ ಗೀಜಗಾರು, ರವೀಂದ್ರ ಕಟ್ಟಿನಕೆರೆ, ಪ್ರೊ. ತಿರುಮಲ ಮಾವಿನಕುಳಿ, ಪ್ರೊ. ಅಮರನಾಥ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.

ಶಾಲಾ ಕಾಲೇಜು ವಾಹನ ಚಾಲಕರ ಸಂಘ ಅಸ್ತಿತ್ವಕ್ಕೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಶಾಲಾ ಕಾಲೇಜು ವಾಹನ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ವಾಹನ ಚಾಲಕರು ಸದಸ್ಯತ್ವ ಪಡೆಯಬಹುದಾಗಿದೆ ಎಂದು ಸಂಘ ತಿಳಿಸಿದೆ. ಮಾಹಿತಿಗೆ ಸುರೇಶ್ ಮೊ-8050476142 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement