ದಿಕ್ಕು ತಪ್ಪಿದ ನಮ್ಮ ಹೊಲ ನಮ್ಮ ದಾರಿ!
ಬಂಡಿ ದಾರಿಗೆ ಅವಕಾಶವಿಲ್ಲ, ಕಾಲುದಾರಿ ಮಾತ್ರ ಟಿ ದಾನಪತ್ರದ ಮೂಲಕ ಮಾತ್ರ ಭೂಮಿ ವಶಕ್ಕೆ ಅವಕಾಶ
-ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಶಿವಮೊಗ್ಗ ಆ. 28
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ 'ನಮ್ಮ ಹೊಲ ನಮ್ಮ ದಾರಿ' ಯೋಜನೆ ಪ್ರಕಟಿಸಿದಾಗ ಭದ್ರಾವತಿ ತಾಲೂಕು ಭದ್ರಾಪುರ ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದರು. ಏಕೆಂದರೆ ಕೇವಲ ಒಂದು ತಿಂಗಳ ಹಿಂದಷ್ಟೇ ಈ ಊರಿನ ಮೂವರು ಸಹೋದರರ ಕೊಲೆಗಳನ್ನು ಇವರು ಕಂಡಿದ್ದರು. ಇದಕ್ಕೆ ಕಾರಣವಾಗಿದ್ದು, ಹೊಲದ ನಡುವೆ ದಾರಿ ಬಿಡುವ ವಿಚಾರ ಎಂಬುದು ಸ್ಪಷ್ಟ.
ಇಂಥ ಸಂಘರ್ಷಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ ಕೆಲವೇ ದಿನಗಳಲ್ಲಿ 'ನಮ್ಮ ಹೊಲ ನಮ್ಮ ದಾರಿ' ಯೋಜನೆ ಕುರಿತು ಸರ್ಕಾರಿ ಆದೇಶವೂ ಹೊರಬಿತ್ತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ನು ಜೋಡಿಸಲಾಗಿದೆ.
ಆದರೆ, ಈ ಯೋಜನೆ ನಿರೀಕ್ಷೆಯಷ್ಟು ಫಲ ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಹಾಲಿ ಇರುವ ರಸ್ತೆಗಳನ್ನು, ಗ್ರಾಮ ನಕಾಶೆಯಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡಲಾಗಿದೆಯೇ ಹೊರತು ಹೊಸ ರಸ್ತೆಗಳನ್ನು ಮಾಡುವುದಕ್ಕೆ ಈ ಯೋಜನೆಯಲ್ಲಿ ಮಿತಿಗಳಿವೆ. ಹೊಸದಾಗಿ ಕಾಲುದಾರಿಗಳನ್ನು ಮಾಡಬಹುದೇ ಹೊರತು ಬಂಡಿದಾರಿಗಳನ್ನು ಮಾಡಲು ಅವಕಾಶವಿಲ್ಲ!
ಅಲ್ಲದೇ ರಸ್ತೆ ಸಂಪರ್ಕವನ್ನು ಖಾಸಗಿ ಸ್ವತ್ತಿನ ಮೂಲಕ ಮಾಡುವುದಾದರೆ ಭೂಮಾಲೀಕರು ದಾನಪತ್ರದ ಮೂಲಕ ಗ್ರಾಮ ಪಂಚಾಯ್ತಿಗೆ ಜಾಗ ಹಸ್ತಾಂತರಿಸಬೇಕಿದೆ. ತುಂಡು ಭೂಮಿಗಾಗಿ ಕೊಲೆಗಳೇ ನಡೆಯುವ ಸಮಯದಲ್ಲಿ ಭೂಮಾಲೀಕರು ದಾನ ಮಾಡುತ್ತಾರೆಂದು ನಿರೀಕ್ಷಿಸುವುದು ಅಸಾಧ್ಯ.
ಅಪಾರ ಅನುಕೂಲ
ಜಮೀನುಗಳ ನಡುವೆ ರಸ್ತೆಗಳನ್ನು ಮಾಡಿದರೆ ರೈತರಿಗೆ ಆಗುವ ಅನುಕೂಲಗಳು ಅಪಾರ. ಒಂದು ಲೆಕ್ಕಾಚಾರದಂತೆ ಒಂದು ಎಕರೆ ಭೂಮಿಗೆ ವರ್ಷಕ್ಕೆ 10 ಚೀಲ ಗೊಬ್ಬರ, 3 ಚೀಲ ಬೀಜ, ಸುಗ್ಗಿ ವೇಳೆ ಸುಮಾರು 25 ಚೀಲ ಬತ್ತ ಅಥವಾ ಇತರೆ ಬೆಳೆ, ಹುಲ್ಲು ಇತ್ಯಾದಿ ವಸ್ತುಗಳನ್ನು ರಸ್ತೆ ಇದ್ದಲ್ಲಿಗೆ ಸಾಗಿಸಬೇಕಾಗುತ್ತದೆ. ಕಟಾವು ಮಿಷನ್ ಬಳಸಿದರೆ ಒಂದು ಗಂಟೆಗೆ 2 ಸಾವಿರ ಬಾಡಿಗೆ ಇದೆ. ಬೆಳೆಯನ್ನು ರಸ್ತೆ ಇದ್ದಲ್ಲಿಗೆ ಸಾಗಿಸಲು ಹೆಚ್ಚುವರಿ ಗಂಟೆಗಳೇ ಬೇಕು. ಹಾಗಾಗಿ ಮಾನವ ಸಂಪನ್ಮೂಲ ಬಳಕೆ, ಕೂಲಿ ಇತ್ಯಾದಿ ವೆಚ್ಚಕ್ಕೆ ಕನಿಷ್ಟ ಶೇ.25ರಷ್ಟು ಹೆಚ್ಚುವರಿ ವೆಚ್ಚವನ್ನು ಒಳಭಾಗದಲ್ಲಿ ಜಮೀನಿರುವ ರೈತರು ಭರಿಸಬೇಕು. ರಸ್ತೆಯಾದರೆ ಇಷ್ಟು ಹಣ ರೈತರಿಗೆ ಉಳಿಯುತ್ತದೆ. ಬಲಾಢ್ಯ ರೈತರು ಹಲವು ಬಾರಿ ವೈಯಕ್ತಿಯ ಈರ್ಷೆಯ ಕಾರಣದಿಂದ ತಮ್ಮ ಜಮೀನಿನ ಮೂಲಕ ಸಾಗಲು ಅವಕಾಶ ನೀಡುವುದಿಲ್ಲ. ಸುತ್ತಮುತ್ತಲಿನ ಜಮೀನಿಗೆ ಬೇಲಿ ಹಾಕಿ ಮಧ್ಯೆ ಇರುವ ಬಡ ರೈತ ತನ್ನ ಜಮೀನನ್ನು ಅವರಿಗೇ ಹೇಳಿದ ಬೆಲೆಗೆ ಮಾರುವ ಸಂದಿಗ್ಧ ಪರಿಸ್ಥಿತಿ ತಂದಿಡುತ್ತಾರೆ. ಸರ್ಕಾರಿ ರಸ್ತೆಯೇ ಆದರೆ ಇದಕ್ಕೆಲ್ಲಾ ಅವಕಾಶವಾಗುವುದಿಲ್ಲ.
ಸಮಸ್ಯೆಗಳು ಹೀಗಿವೆ
ಘೋಷಿತ ಯೋಜನೆ ಪ್ರಕಾರ ಕಾಲು ದಾರಿ ಮಾಡಲು ಮಾತ್ರ ಅವಕಾಶವಿದೆ. ಈಗ ರೈತರಿಗೆ ಕಾಲುದಾರಿ ಸಮಸ್ಯೆಯೇನೂ ಇಲ್ಲ. ದಾರಿ ಇಲ್ಲದಿದ್ದರೂ ಪರವಾಗಿಲ್ಲ, ಅವರಿಗೆ ಬದುವಿನ ಮೇಲೆ ಓಡಾಡಲು ಸಾಕಷ್ಟು ಅವಕಾಶ ಇದ್ದೇ ಇರುತ್ತದೆ. ವೈಯಕ್ತಿಕ ಸಮಸ್ಯೆ ಹೊರತುಪಡಿಸಿ ಯಾರೂ ನಮ್ಮ ಜಮೀನಿನ ಬದುವಿನ ಮೇಲೆ ಓಡಾಡಬೇಡಿ ಎಂದು ಹೇಳುವುದಿಲ್ಲ. ಬಂಡಿ ರಸ್ತೆ ಮಾಡಬೇಕೆಂದರೆ ಈ ಯೋಜನೆ ಪ್ರಕಾರ ಭೂಸ್ವಾಧೀನಕ್ಕೆ ಅವಕಾಶವಿಲ್ಲ. ಭೂಮಾಲೀಕರು ದಾನ ನೀಡುವುದು ಕಡ್ಡಾಯವೇನೂ ಅಲ್ಲ. ಹಾಗಾಗಿ ಈಗಿರುವ ಕಾಡಾ ರಸ್ತೆಗಳು, ಸ್ಥಳೀಯ ಅಧಿಕಾರಿಗಳು-ಮುಖಂಡರಿಗೆ ಧಕ್ಷತೆ ಇದ್ದರೆ ಮುಚ್ಚಿರುವ ಗ್ರಾಮ ನಕಾಶೆ ರಸ್ತೆಗಳನ್ನು ತೆರವು ಮಾಡಬಹುದಷ್ಟೇ. ಭೂಮಾಲೀಕ ತನ್ನ ಭೂಮಿಯನ್ನು ರಸ್ತೆಗಾಗಿ ದಾನ ಮಾಡಿದ ಎಂದಿಟ್ಟುಕೊಂಡರೂ ಆತ ಮಾನಸಿಕವಾಗಿ ಆ ಜಾಗದ ಮೇಲೆ ಹಕ್ಕು ಸಾಧಿಸುತ್ತಲೇ ಇರುತ್ತಾನೆ. ಏಕೆಂದರೆ ಈ ಜಾಗಕ್ಕೆ ಪರ್ಯಾಯವಾಗಿ ಆತ ಹಣವನ್ನೇನೂ ಪಡೆದಿರುವುದಿಲ್ಲ.
ಗ್ರಾಮ ನಕಾಶೆಯಲ್ಲಿರುವ ಬಂಡಿ ದಾರಿಗಳನ್ನು ತೆರವು ಮಾಡುವುದರ ಜತೆಗೆ ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಅಗತ್ಯವಿರುವ ಕಡೆ ಭೂಸ್ವಾದೀನ ಮಾಡಿಕೊಂಡು, ಅದಕ್ಕೆ ಮಾರುಕಟ್ಟೆ ಬೆಲೆಯನ್ನು ರೈತನಿಗೆ ನೀಡಿ ರಸ್ತೆ ಮಾಡಬೇಕು.
-ವೈ.ಜಿ.ಮಲ್ಲಿಕಾರ್ಜುನ್, ರೈತ ಮುಖಂಡ
ಬಂಡಿ ದಾರಿ ಮಾಡಲು ಈ ಯೋಜನೆಯಲ್ಲಿ ಅವಕಾಶವಿಲ್ಲ. ಅಗತ್ಯವಿಲ್ಲದ್ದಲ್ಲಿ ಬೇರೆ ಯೋಜನೆಯಡಿ ಇಂತಹ ರಸ್ತೆಗಳನ್ನು ಕಾರ್ಯರೂಪಕ್ಕೆ ತರಬಹುದು.
- ಸಸಿಕಾಂತ್ ಸೆಂಥಿಲ್, ಶಿವಮೊಗ್ಗ ಜಿಪಂ ಸಿಇಒ