ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೃಷಿ ಯಂತ್ರಗಳ ಸೃಷ್ಟಿಕರ್ತ

Srinivasa Murthy VN
Updated On : 12 Dec 2013, 12:19 pm

ಶಿವಮೊಗ್ಗ:  ಹೊಸಹಳ್ಳಿಯ ಕೃಷಿಕ್ಷೇತ್ರ ಕಳೆಗುಂದಿತ್ತು. ದಶಕಗಳ ಕಾಲ ಒಡನಾಡಿದ್ದ ಒಡೆಯ ಪ್ರಫುಲ್ಲಚಂದ್ರ ಅವರ ದೇಹವು ಜೀವ ಕಳೆದುಕೊಂಡಿತ್ತು. ಆದರೆ ಅವರು ರೂಪಿಸಿದ್ದ ಹತ್ತಾರು ಕೃಷಿ ಯಂತ್ರಗಳು, ಪ್ರಯೋಗದ ಪರಿಕರಗಳು ಅವರ ಸಾಧನೆಯ ಕತೆ ಹೇಳುತ್ತಿದ್ದವು.

ಯಂತ್ರಗಳ ಸೃಷ್ಟಿಕರ್ತ: ಡಾ. ಡಿ.ಆರ್. ಪ್ರಫುಲ್ಲಚಂದ್ರ ಎಂದರೆ ಕೃಷಿಯಂತ್ರಗಳ ಸೃಷ್ಟಿಕರ್ತನಿಗೆ ಇರುವ ಇನ್ನೊಂದು ಹೆಸರು. ಒಂದು ಟ್ರ್ಯಾಕ್ಟರ್, ಟಿಲ್ಲರ್ ಬಳಸಿಕೊಂಡು ರೂಪಿಸಿದ ಹತ್ತಾರು ಸಾಧನಗಳು, ಇವರು ಖುಷಿಯಿಂದ ಬಳಸುತ್ತಿದ್ದ ಫೋಕ್ ಲೈನ್ ಯಂತ್ರ, ಅಡಕೆ ಕತ್ತರಿಸುವ ಯಂತ್ರ, ಔಷಧಿ ಸಿಂಪಡಿಸುವ ಯಂತ್ರ... ಹೀಗೆ ಹತ್ತಾರು ಯಂತ್ರಗಳನ್ನು ಸೃಷ್ಟಿಸಿದವರು. ಯಾವತ್ತು ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಎದುರಾಯಿತೋ ಅವತ್ತಿನಿಂದ ಆರಂಭಿಸಿದ ಕೃಷಿ ಯಂತ್ರಗಳ ಆವಿಷ್ಕಾರ ಇವರನ್ನು ಎತ್ತರಕ್ಕೆ ಕೊಂಡೊಯ್ಯಿತು.
ಪ್ರಫುಲ್ಲಚಂದ್ರ ಅವರಿಗೆ ಯಾವುದೇ ಒಂದು ಮಾದರಿಯ ಕೃಷಿ ಪದ್ಧತಿ ಬಗ್ಗೆ ಒಲವು ಇರಲಿಲ್ಲ. ನೆಲದ ಫಲವತ್ತತೆ ಉಳಿಸಲು, ಹೆಚ್ಚು ಇಳುವರಿ ಪಡೆಯಲು ಯಾವ ಮಾದರಿ ಸೂಕ್ತವೋ ಅದನ್ನೇ ಅನುಸರಿಸುವುದು ಒಳ್ಳೆಯದು ಎಂಬ ಚಿಂತನೆ ಇವರದು. ಸಾವಯವ, ಸಹಜ, ರಾಸಾಯನಿಕ ಕೃಷಿ ಪದ್ಧತಿಯ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದರು.

ಕೃಷಿಋಷಿ:
ಕುವೆಂಪು ಅವರ ಪತ್ನಿ ಹೇಮಾವತಿ ಅವರ ಸಹೋದರರಾಗಿದ್ದ ಪ್ರಫುಲ್ಲಚಂದ್ರ ಅವರಿಗೆ ಸ್ವತಃ ಕುವೆಂಪು ಅವರೇ -ಕೃಷಿಋಷಿ- ಎಂದು ಕರೆದಿದ್ದು ಅತ್ಯಂತ ಅನ್ವರ್ಥವಾಗಿತ್ತು.
 ಕೃಷಿಯ ಜತೆಗೆ ಪ್ರಫುಲ್ಲಚಂದ್ರ ಅವರು ಕಲಿತ ಇನ್ನೊಂದು ಯಶಸ್ವಿ ವಿದ್ಯೆ ಎಂದರೆ ಬೇಟೆಯಾಡುವುದು. ಸರ್ಕಾರ ಬೇಟೆ ನಿಷೇಧಿಸಿದ ನಂತರ ಇದಕ್ಕೆ ತಡೆಯಾಗಿತ್ತು. ಆದರೆ ಕಾಡುಪ್ರಾಣಿಗಳ ಉಪಟಳ ಜಾಸ್ತಿಯಾದಾಗ ಸರ್ಕಾರವೇ ಇವರನ್ನು ಕೆಲವೆಡೆ ಬೇಟೆಯಾಡಲು ಆಹ್ವಾನಿಸಿತ್ತು.
 ಹಲವು ದಶಕಗಳ ಹಿಂದೆ ಶಿವಮೊಗ್ಗ ಸುತ್ತಮುತ್ತ ಮೂರು ಮಕ್ಕಳ ಸಾವಿಗೆ ಕಾರಣವಾಗಿದ್ದ ಹುಲಿಯನ್ನು ಬೇಟೆಯಾಡಿದ್ದ ಇವರು ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಕಡೂರು ಸುತ್ತಮುತ್ತ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನೂ ಸಹ ಬೇಟೆಯಾಡಲು ಸರ್ಕಾರಕ್ಕೆ ನೆರವಾಗಿದ್ದರು.
ತೇಜಸ್ವಿ ಅವರೊಂದಿಗೆ ಕಾಡು ಸುತ್ತುತ್ತಿದ್ದ ತೇಜಸ್ವಿ ಅವರ ಜೀಪು ಅವರ ಮನೆಯ ಹಿತ್ತಲಿನಲ್ಲಿಯೇ ನಿಂತಿದ್ದು, ಹಲವು ರೋಚಕ ಕತೆಗಳನ್ನು ಹೇಳುತ್ತಿತ್ತು.

ಪ್ರಾಣಿಪ್ರಿಯ:
ಪ್ರಾಣಿಗಳೆಂದರೆ ಇವರಿಗೆ ಅತ್ಯಂತ ಪ್ರಿಯ. ಯಾವುದೇ ಪ್ರಾಣಿಯಾಗಿರಲಿ ಅದನ್ನು ಪಳಗಿಸುವುದರಲ್ಲಿ ಇವರಿಗೆ ಪರಿಣಿತಿ ಇತ್ತು. ಚಿಕ್ಕಮರಿಯಾಗಿದ್ದಾಗ ಇವರ ಮನೆ ಹಿತ್ತಲಿಗೆ ಬಂದ ಕಾಡುಹಂದಿಗೆ ರಾಣಿ ಎಂದು ಹೆಸರಿಟ್ಟು ಸಾಕುತ್ತಿದ್ದ ಇವರು ಇದನ್ನು ನಾಯಿಯಂತೆಯೇ ಪಳಗಿಸಿದ್ದರು. ಅದು ಇವರು ಹೇಳಿದಂತೆ ಕೇಳುತ್ತಿತ್ತು.
 ಇವರ ಇಬ್ಬರು ಪುತ್ರರೂ ಸಹ ಕೃಷಿಯಲ್ಲಿಯೇ ಆಸಕ್ತರು. ಸವ್ಯಸಾಚಿ ಹಾಗೂ ಇಕ್ಷುಧನ್ವ (ಈ ನಾಮಕರಣ ಮಾಡಿದ್ದು ಕುವೆಂಪು) ಇಬ್ಬರೂ ಸಹ ಕೃಷಿ ಪದವೀಧರರು. ಇವರೂ ಸಹ ತಂದೆಯ ದಾರಿಯಲ್ಲಿಯೇ ಸಾಗುತ್ತಿದ್ದಾರೆ.

ಬೆಳೆಸ್ಪರ್ಧೆ ಸಾಧನೆ ರಾಜ್ಯಮಟ್ಟದಲ್ಲಿ

1971-71: ಬತ್ತ (ಐ.ಆರ್.8) ಪ್ರಥಮ
1974-75: ಬತ್ತ (ಜಯ) ಪ್ರಥಮ
1974-75: ಕಬ್ಬು ಪ್ರಥಮ
1975-76: ಬತ್ತ (ಜಯ) ಪ್ರಥಮ
1975-76: ಕಬ್ಬು ಪ್ರಥಮ

ರಾಷ್ಟ್ರಮಟ್ಟದಲ್ಲಿ...
1972-73: ಬತ್ತ (ಜಯ) ತೃತೀಯ
1974-75:  ಕಬ್ಬು (ಏಕಸಾಲಿ) ದ್ವಿತೀಯ (ರಜತ ಪದಕ)
1974-75: ಕಬ್ಬು (ಕೂಳೆ) ದ್ವಿತೀಯ (ರಜತ ಪದಕ)
1974-75: ಬತ್ತ (ಜಯ) ದ್ವಿತೀಯ (ರಜತ ಪದಕ)
1975-76: ಬತ್ತ (ಜಯ) ದ್ವಿತೀಯ (ರಜತ ಪದಕ)
1975-76: ಕಬ್ಬು (ಏಕಸಾಲಿ) ಪ್ರಥಮ (ಸ್ವರ್ಣ ಪದಕ)
1975-76: ಕಬ್ಬು (ಅಲ್ಪ ಕಾಲಾವಧಿ) ಪ್ರಥಮ (ಸ್ವರ್ಣ ಪದಕ)
1975-76: ಕಬ್ಬು (ಕೂಳೆ) ಪ್ರಥಮ (ಸ್ವರ್ಣ ಪದಕ)

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement