ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ

Srinivasa Murthy VN
Updated On : 24 Dec 2013, 10:10 am

ಕ.ಪ್ರ.ವಾರ್ತೆ ಶಿವಮೊಗ್ಗ ಡಿ.23
ನಗರದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಹಾಗೂ ಚಿಕಿತ್ಸಾಲಯ ನಿರ್ಮಿಸುವಂತೆ ಒತ್ತಾಯಿಸಿ ಖಾಸಗಿ ಸಂಸ್ಥೆಗಳ ಮತ್ತು ಖಾಸಗಿ ನೌಕರರ ಒಕ್ಕೂಟ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರದಲ್ಲಿ 33 ಸಾವಿರ ಹಾಗೂ ಭದ್ರಾವತಿಯಲ್ಲಿ ಸುಮಾರು 20 ಸಾವಿರ ಇಎಸ್‌ಐ ಕಾರ್ಡ್‌ದಾರರಿದ್ದು, ಪ್ರಸ್ತುತ ಐಎಸ್‌ಐ ಕಾರ್ಮಿಕರು ಮತ್ತು ಕುಟುಂಬ ಸದಸ್ಯರನ್ನು ಸೇರ್ಪಡೆ ಮಾಡಿದರೆ ಸುಮಾರು 3.50 ಲಕ್ಷ ಇಎಸ್‌ಐ ಚಿಕಿತ್ಸಾ ಫಲಾನುಭವಿಗಳಿದ್ದಾರೆ. ಆದರೆ, ಸದಸ್ಯರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಸರಿಯಾದ ಚಿಕಿತ್ಸೆ ಇಲ್ಲ: ಪ್ರಸ್ತುತ ಇರುವ ಇಎಸ್‌ಐ ಚಿಕಿತ್ಸಾಲಯದಲ್ಲಿ ದಿನನಿತ್ಯ 450 ರಿಂದ 500 ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. ಸಿಬ್ಬಂದಿ ಕೊರತೆಯಿದೆ. ಮಹಿಳಾ ವೈದ್ಯರು ಇಲ್ಲದೆ ಇರುವುದರಿಂದ ಮಹಿಳಾ ರೋಗಿಗಳಿಗೆ ಅನನುಕೂಲ ಉಂಟಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನಾಲ್ಕು ಹಾಗೂ ಭದ್ರಾವತಿಯಲ್ಲಿ 2 ಹೆಚ್ಚುವರಿ ಇಎಸ್‌ಐ ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು. ಭದ್ರಾವತಿಯಲ್ಲಿ ಇಎಸ್‌ಐ ಸ್ಥಳೀಯ ಕಚೇರಿ ತೆರೆಯಬೇಕು. ಶಿವಮೊಗ್ಗ  ಹಾಗೂ ಭದ್ರಾವತಿ ನಗರಕ್ಕೆ ಹೊಂದಿಕೊಂಡಂತೆ ಸುಸಜ್ಜಿತವಾದ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಯಾವುದೇ ಕ್ರಮವಿಲ್ಲ: ಈ ಬಗ್ಗೆ ಹಲವು ಬಾರಿ ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆ ಸಂಸ್ಥೆ ಹಾಗೂ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಒಕ್ಕೂಟದ ಪ್ರಮುಖ ಎಚ್. ನಟರಾಜ್, ಮಾದೇವಪ್ಪ, ರಾಜಾಸಾಬ್, ರಮೇಶ್, ಮಂಜುನಾಥ್, ರವಿ ಪ್ರಕಾಶ್, ನರೇಂದ್ರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement