ಬೆಂಗಳೂರು ಚಲನಚಿತ್ರೋತ್ಸವ ಜ್ಯೂರಿಯಾಗಿ ವೈದ್ಯ
ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲದ ಸಂಚಾಲಕ, ರಂಗಭೂಮಿ ಕಲಾವಿದ, ಪತ್ರಕರ್ತ ವೈದ್ಯರವರನ್ನು ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 26ರಿಂದ ಜನವರಿ 2ರವರೆಗೆ ನಡೆಯಲಿರುವ ಪ್ರತಿಷ್ಟಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿಯನ್ನಾಗಿ ರಾಷ್ಟ್ರೀಯ ಚಲನಚಿತ್ರ ಸಮಾಜಗಳ ಮಹಾ ಮಂಡಲದ ಅಧ್ಯಕ್ಷ ಹಾಗೂ ಚಲನಚಿತ್ರೋತ್ಸವದ ನಿರ್ದೇಶಕರೂ ಆದ ನರಹರಿ ರಾವ್ ನೇಮಕ ಮಾಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಲ್ಪಡುವ ಏಕೈಕ ಜ್ಯೂರಿಯಾಗಿರುವ ವೈದ್ಯರವರು, ಕೇರಳದ ಮಧು ಇರಾವಂಕರ್, ಮುಂಬೈನ ಮೀನಾ ಕಾರ್ಣಿಕ್, ಹೈದರಾಬಾದ್ನ ಪ್ರಕಾಶ್ ರೆಡ್ಡಿ ಹಾಗೂ ಕೋಲ್ಕತ್ತಾದ ಸೀಲಾದಿತ್ಯ ಸೇನ್ ಅವರೊದಿಗೆ ಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಕನ್ನಡ ಚಿತ್ರಗಳ ಅವಲೋಕನ ನಡೆಸಲಿದ್ದಾರೆ. ಈ ಚಿತ್ರೋತ್ಸವದಲ್ಲಿ ಕನ್ನಡವೂ ಸೇರಿದಂತೆ ವಿವಿಧ ದೇಶಗಳ 150ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಅಂತರಾಷ್ಟ್ರೀಯ ಖ್ಯಾತಿ ಕಲಾವಿದರು, ತಂತ್ರಜ್ಞರು, ವಿಮರ್ಶಕರು ಪಾಲ್ಗೊಳ್ಳಲಿದ್ದಾರೆ. ವೈದ್ಯ ಅವರ ಸುದೀರ್ಘವಾದ ಮೂರೂವರೆ ದಶಕಗಳ ರಂಗಭೂಮಿ-ಸಿನಿಮಾ, ಹಾಗೂ ಇತ್ತೀಚಿನ ಬೆಳ್ಳಿಮಂಡಲಗಳ ಯಶಸ್ವೀ ಕಾರ್ಯಗಳನ್ನು ಗಮನಿಸಿ, ಈ ಪ್ರತಿಷ್ಟಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿಯನ್ನಾಗಿ ನೇಮಿಸಲಾಗಿದೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಎಂಆರ್ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಫ್-5 ಫೀಡರ್ಗೆ ಸಂಬಂಧಿಸಿದಂತೆ ವಾಹಕ ಬದಲಾವಣೆ ಕಾರ್ಯ ಇರುವುದರಿಂದ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಡಿ.24 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ನಗರದ ವ್ಯಾಪ್ತಿಯ ವಾದಿಹುದಾ, ಮದಾರಿಪಾಳ್ಯ, ಎಂಆರ್ ಎಸ್ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ನಾಳೆಯಿಂದ ವಿಜ್ಞಾನ ಕಾರ್ಯಾಗಾರ
ಶಿವಮೊಗ್ಗ: ನಗರದ ಜೆಎನ್ಎನ್ಸಿಇ ಕಾಲೇಜು ಆವರಣದಲ್ಲಿ ಡಿ. 25ರಿಂದ 29ರವರೆಗೆ ಡಿಎಸ್ಟಿ ಅನುದಾನಿತ ಇನ್ಸ್ಪೈಯರ್ ವಿಜ್ಞಾನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ರಾವ್ ಕುಂಟೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ತಿಳಿಸಿದರು.
ಪಡಿತರ ವಿತರಣೆ
ಶಿವಮೊಗ್ಗ: ಶಿವಮೊಗ್ಗ ನಗರ ಪಡಿತರ ಪ್ರದೇಶದ ವ್ಯಾಪ್ತಿಯಲ್ಲಿ ಭಾವಚಿತ್ರ ತೆಗೆಸಿದ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ತಾತ್ಕಾಲಿಕ ಗಣಕೀಕೃತ ಪಡಿತರ ಚೀಟಿದಾರರಿಗೆ ಶಾಶ್ವತ ಪಡಿತರ ಚೀಟಿದಾರರಿಗೆ ಮತ್ತು ನೆಮ್ಮದಿ ಕೇಂದ್ರಗಳ ಮೂಲಕ ವಿತರಣೆ ಮಾಡಿದ ತಾತ್ಕಾಲಿಕ ಬಿಪಿಎಲ್ ಪಡಿತರ ಚೀಟಿದಾರರಿಗೆ ಜನವರಿ ಮಾಹೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ. ಎಲ್ಲಾ ಕಾರ್ಡುದಾರರು ಜನವರಿ 1ರಿಂದ ಜನವರಿ 12ರೊಳಗಾಗಿ (12.1.2014 ಪಡಿತರ ಪಡೆಯಲು ಕಡೆಯ ದಿನವಾಗಿರುತ್ತದೆ) ನಿಗದಿಪಡಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರಗಳನ್ನು ಪಡೆದುಕೊಳ್ಳುವಂತೆ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಭಿನಂದನೆ
ಶಿವಮೊಗ್ಗ: ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದ ರಾಷ್ಟ್ರಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ ಮಹಿಳಾ ಕ್ರೀಡಾಕೂಟದ ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಶಿವಮೊಗ್ಗ ನಗರದ ನವೋದಯ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎನ್. ಆಶ್ವಿನಿ ಇವರು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಾಹಿತ್ಯದಲ್ಲಿ ಸೌಂದರ್ಯ ಪರಿಚಯಿಸಿದ ಧೀಮಂತ ಕವಿ
ಹೊಸನಗರ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸಿ, ಸೌಂದರ್ಯಕ್ಕೊಂದು ತಾರ್ಕಿಕ ಪ್ರಾಶಸ್ತ್ಯ ನೀಡಿದ ಧೀಮಂತ ಕವಿ ಶಿವರುದ್ರಪ್ಪ. ಕನ್ನಡ ಸಾರಸ್ವತ ಸಾಹಿತ್ಯ ಲೋಕದ ಮುಕುಟ ಮಣಿಯಾಗಿದ್ದ ರಾಷ್ಟ್ರಕವಿಯ ಅಗಲಿಕೆ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಸಾಹಿತಿ ಡಾ.ಶಾಂತರಾಮ ಪ್ರಭು ಅಭಿಪ್ರಾಯಪಟ್ಟರು. ಇಲ್ಲಿನ ಕಸಾಪ ಕಚೇರಿಯಲ್ಲಿ ನಡೆದ ಜಿ.ಎಸ್.ಎಸ್. ಶ್ರದ್ದಾಂಜಿಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಎಸ್. ನವ್ಯ, ನವೋದಯ ಸಾಹಿತ್ಯದಲ್ಲಿ ತಮ್ಮ ಅಗಾಧ ಪ್ರತಿಭೆ ಅನಾವರಣಗೊಳಿಸಿದ ನಿಜವಾದ ರಾಷ್ಟ್ರಕವಿ. ಕವಿಗಳಿಗೆ ಎಂದು ಸಾವಿಲ್ಲ. ಜಿ.ಎಸ್.ಎಸ್ ಆಶಯಗಳನ್ನು ಪಾಲಿಸುವ ಮತ್ತು ಆರಾದಿಸುವ ಕಾರ್ಯ ನಡೆಯಬೇಕು ಎಂದು ಆಶಿಸಿದರು. ತಾಲೂಕು ಕಸಾಪ ಅಧ್ಯಕ್ಷ ರತ್ನಾಕರ್, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ನೂರಾ ಮೆಟಲ್ ಡಾ. ಸಿಕ್ವೇರಾ, ಮಹಾಬಲ, ಅಶೋಕ ಗುಳೇದ, ಎಂ.ಪಿ. ಸುರೇಶ್ ಮತ್ತಿತರರು ಹಾಜರಿದ್ದರು.
ಹೋರಿ ತಿವಿದು ಇಬ್ಬರ ಸಾವು
ಸೊರಬ: ತಾಲ್ಲೂಕು ಜಡೆ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ದನ ಬೆದರಿಸುವ ಕಾರ್ಯಕ್ರಮ ಸೋಮವಾರ ನಡೆದಿದ್ದು, ಹೋರಿ ತಿವಿದು ಇಬ್ಬರು ಮೃತಪಟ್ಟಿದ್ದಾರೆ. ಹಾವೇರಿ ಮೂಲದ ದಾದಾಪೀರ್ ಮತ್ತು ನ್ಯಾಮತಿಯ ವೀರೇಶ್ ಆಚಾರ್ ಮೃತಪಟ್ಟವರು. ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿದ್ದು ಸಿರ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.