ಮಲೆನಾಡು, ಬಯಲುಸೀಮೆಯಲ್ಲಿ ಮರೆಯದ ನೆನಪು
-ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಮಲೆನಾಡು ಹಾಗೂ ಬಯಲುಸೀಮೆಯ ಹಲವೆಡೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ನೆನಪನ್ನು ಶಾಶ್ವತವಾಗಿ ಉಳಿಸಿ ಹೋಗಿದ್ದಾರೆ.
ಶಿಕಾರಿಪುರ ಪಟ್ಟಣದ ಸಮೀಪದಲ್ಲಿಯೇ ಇರುವ ಗಬ್ಬೂರು ಅವರ ಜನ್ಮತಾಣ. ಇವರ ತಂದೆ ಶಾಂತವೀರಪ್ಪ ಅವರು ಶಿಕ್ಷಕರಾಗಿದ್ದು, ಈ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಇದೇ ಇವರ ಹುಟ್ಟೂರು. ಇವರ ತಂದೆ ಕೆಲಸ ಮಾಡುತ್ತಿದ್ದ ಈಸೂರಿನ ಪ್ರಾಥಮಿಕ ಶಾಲೆಯಲ್ಲಿಯೇ ಇವರ ಮೊದಲ ಅಕ್ಷರಾಭ್ಯಾಸ.
ನಂತರ ಈ ಶಾಲೆಯ ಸಮೀಪದ ಚಿಕ್ಕಜೋಗಿಹಳ್ಳಿಗೆ ಸ್ಥಳಾಂತರವಾಯಿತು. ಆಗಲೂ ಸಹ ಇದು ಈಸೂರು ಶಾಲೆ ಎಂದೇ ಕರೆಯಲ್ಪಡುತ್ತಿತ್ತು. ಈ ಶಾಲೆಯಲ್ಲಿ ಜಿಎಸ್ಸ್ ಅವರು ಬುದ್ಧಿವಂತ ವಿದ್ಯಾರ್ಥಿ ಎಂದೇ ಹೆಸರು ಮಾಡಿದ್ದರು ಎಂದು ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.
ಶಿವರುದ್ರಪ್ಪ ಅವರ ತಂದೆ ಹೊನ್ನಾಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ವರ್ಗವಾಗಿದ್ದರಿಂದ ಜಿಎಸ್ಎಸ್ ಅವರು ನಾಲ್ಕನೇ ತರಗತಿಯನ್ನು ಇದೇ ಶಾಲೆಯಲ್ಲಿ ಓದಿದರು. ನಂತರ ಇವರ ತಂದೆ ಇಲ್ಲಿಂದ ರಾಮಗಿರಿ, ಬೆಲಗೂರಿಗೆ ವರ್ಗವಾಯಿತು. ಪ್ರೌಢ ಶಿಕ್ಷಣ ಪೂರೈಸಲು ದಾವಣಗೆರೆಗೆ ತೆರಳಿದರು. ಈ ಊರುಗಳ ನಂತರ ಜಿಎಸ್ಸೆಸ್ ಅವರ ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರಿಯಿತು.
1984ರ ವೇಳೆಗೆ ಜಿಎಸ್ಸೆಸ್ ಅವರು ಹೊನ್ನಾಳಿಗೆ ಭೇಟಿ ನೀಡಿದ್ದಾಗ ಈ ಶಾಲೆಗೂ ಹೋಗಿದ್ದರು. ಆಗ ಶಾಲೆಯ ಶಿಕ್ಷಕರು 1936ರಲ್ಲಿ ಇದೇ ಶಾಲೆಯಲ್ಲಿ ಜಿಎಸ್ಎಸ್ ಅಭ್ಯಾಸ ಮಾಡಿದ್ದ ದಾಖಲೆಗಳನ್ನು ಅವರಿಗೆ ತೋರಿಸಿ ಸಂಭ್ರಮಿಸಿದ್ದರು. ಅಂದು ಇದೇ ಊರಿನ ಎಚ್.ಎಂ. ಶಿವಮೂರ್ತಯ್ಯ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯಾಗಿತ್ತು.
ಅಲ್ಲಿಯೂ ಸಹ ಸಾಹಿತ್ಯಾಸಕ್ತರು ಒಟ್ಟುಗೂಡಿದ್ದರು. 1997ರಲ್ಲಿ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಪ್ರಾಂಶುಪಾಲರಾಗಿದ್ದ ಕುಂದೂರು-ಕೂಲಂಬಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕವಿಗೋಷ್ಠಿಗೂ ಆಗಮಿಸಿದ್ದ ಅವರು ಈ ಕುಗ್ರಾಮದಲ್ಲಿ ಕಿರಿಯ ಕವಿಗಳೊಂದಿಗೆ ಸೇರಿ ಕವನ ವಾಚನ ಮಾಡಿದ್ದರು.
ತಮ್ಮ ಬಾಲ್ಯಕಾಲದ ಬಹುದಿನಗಳನ್ನು ಕಳೆದ ದಾವಣಗೆರೆಯಲ್ಲಿ 1991ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಎಸ್ಎಸ್ ಅವರನ್ನು ಆಯ್ಕೆ ಮಾಡಿ ಕನ್ನಡ ನಾಡು ಗೌರವ ಸಲ್ಲಿಸಿತ್ತು.
ಶಿವಮೊಗ್ಗ ನಂಟು: ಕನ್ನಡ ನಾಡಿನ ಇಬ್ಬರು ರಾಷ್ಟ್ರಕವಿಗಳಾದ ಕುವೆಂಪು, ಜಿಎಸ್ಎಸ್ ಗುರು-ಶಿಷ್ಯ ಪರಂಪರೆಯ ಅತ್ಯುತ್ತಮ ನಿದರ್ಶನವಾಗಿದ್ದರು. ಇಬ್ಬರೂ ಪರಸ್ಪರರಿಂದ ಪ್ರಭಾವಿತರಾಗಿದ್ದರು. ಇವರಿಬ್ಬರಿಗೂ ಸಹ ಜಿಲ್ಲೆಯ ಪ್ರಮುಖ ಸಾಹಿತ್ಯ ಸಂಘಟನೆಯಾದ ಕರ್ನಾಟಕ ಸಂಘವು ಗೌರವ ಸದಸ್ಯತ್ವ ನೀಡಿದೆ.
1997ರಲ್ಲಿ ಕರ್ನಾಟಕ ಸಂಘವು ಜಿಎಸ್ಎಸ್ ಅವರಿಗೆ ಗೌರವ ಸದಸ್ಯತ್ವ ನೀಡಿತು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮಗಳಿಗೆ ಅವರು ನಿರಂತರ ಭೇಟಿ ನೀಡುತ್ತಿದ್ದರು.
2006ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ವತಿಯಿಂದ ರಾಷ್ಟ್ರಕವಿ ಪದವಿಯನ್ನು ನೀಡಿದ್ದರು. ಇದಾದ ನಂತರ ಅವರನ್ನು ಶಿಕಾರಿಪುರಕ್ಕೆ ಆಹ್ವಾನಿಸಬೇಕೆಂಬ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನ ಫಲ ನೀಡಲಿಲ್ಲ. ಹೆಲಿಕಾಫ್ಟರ್ನಲ್ಲಿ ಕರೆತರುವ ಸಿದ್ಧತೆ ನಡೆದಿದ್ದರೂ ಸಾಧ್ಯವಾಗಿರಲ್ಲ. 87 ವರ್ಷಗಳ ತುಂಬು ಜೀವನ ನಡೆಸಿದ ಅವರು ಈಗ ಇಲ್ಲವಾಗಿದ್ದಾರೆ.
ಸಮನ್ವಯ ಕವಿಗೆ ಶ್ರದ್ಧಾಂಜಲಿಯ ಮಹಾಪೂರ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.23
ಸಮನ್ವಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಂತಾಪ- ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಹಲವು ಗಣ್ಯರು, ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಜಿಎಸ್ಸೆಸ್ ಅವರ ನಾಡು, ನುಡಿ ಸೇವೆ ಸ್ಮರಿಸಿಕೊಂಡಿದ್ದಾರೆ.
ಜಿಎಸ್ಸೆಸ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಯಿತು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದು, ಇವರ ಅಗಲಿಕೆಯು ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟ ಉಂಟು ಮಾಡಿದ್ದು, ಶಿವಮೊಗ್ಗದ ಮತ್ತೊಂದು ಕನ್ನಡ ಕವಿ ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಲೋಕದ ದಿಗ್ಗಜರು, ಸರಳ ಸಜ್ಜನಿಕೆಯ ಜನಸ್ನೇಹಿ, ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತ ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸಂತಾಪ ಸೂಚಿಸಿದ್ದಾರೆ.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು, ಜಿಎಸ್ಸೆಸ್ ಅವರು ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಮುಖಂಡರಾದ ಎಚ್.ಎಸ್. ಸುಂದರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರದ್ಧಾಂಜಲಿ: ನಗರದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ಸೋಮವಾರ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗಾಯಕ ಕೆ. ಯುವರಾಜ್, ಶಾಂತಾ ಶೆಟ್ಟಿ ಈ ಸಂದರ್ಭದಲ್ಲಿ ಜಿಎಸ್ಸೆಸ್ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರಿಯದರ್ಶಿನಿ ಎಜುಕೇಶನ್ ಟ್ರಸ್ಟ್ನ ಎನ್. ರಮೇಶ್, ಪ್ರಾಂಶುಪಾಲರಾದ ಸುನಿತಾ ಮತ್ತಿತರರು ಹಾಜರಿದ್ದರು.
ರಾಜನಾಥ್ ಸಿಂಗ್ ಕಂಬನಿ
ಸೊರಬ: ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪರವರ ಅಕಾಲಿಕ ನಿಧನದಿಂದಾಗಿ ಸಾರಸ್ವತ ಲೋಕ ಬಡವಾಗಿದೆ. ಇದರಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಇವರು ಕರ್ನಾಟಕ ರತ್ನ, ನಾಡೋಜ ಪ್ರಶಸ್ತಿ ಪಡೆದಿದ್ದು, ಇವರ ನಿಧನದಿಂದಾಗಿ ಉತ್ತಮ ಕವಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ರಾಜನಾಥ ಸಿಂಗ್, ಸಂಸದ ಅನಂತ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ,ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಕಂಬನಿ ಮಿಡಿದಿದ್ದಾರೆ.
ತಾಲೂಕು ಕಸಾಪ ಸಂತಾಪ: ಇಲ್ಲಿನ ತಾಲ್ಲೂಕು ಘಟಕದ ಅಧ್ಯಕ್ಷ ಮಧುರಾಯಶೇಠ್, ಕಾರ್ಯದರ್ಶಿ ಡಿ.ಮಂಜಪ್ಪ, ಸುಬ್ರಹ್ಮಣ್ಯ ಗುಡಿಗಾರ್, ಷಣ್ಮುಖಾಚಾರ್, ಮಾಜಿ ಅಧ್ಯಕ್ಷರುಗಳಾದ ಕೃಷ್ಣಾನಂದ್, ಎಸ್.ಆರ್.ಕುಮಾರಸ್ವಾಮಿ, ಡಾ.ಎಂ.ಕೆ.ಭಟ್, ಫೈಯಾಜ್ ಅಹ್ಮದ್, ಶಿವಾನಂದ್ ಬಳಗಿ, ಘಟಕದ ಅಧ್ಯಕ್ಷರುಗಳಾದ ಉಮೇಶ್ ಬಿಚ್ಚುಗತ್ತಿ, ಡಾ. ವಿಶ್ವನಾಥ್ ನಾಡಿಗೇರ್, ಸಾಹಿತಿಗಳಾದ ಮುಕ್ತಾಭಟ್, ರಾಜಶೇಖರ ಪಾಟೀಲ್, ಪಾಣಿರಾಜಪ್ಪ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಹುಟ್ಟೂರು ಶಿಕಾರಿಪುರದಲ್ಲಿ ಶ್ರದ್ಧಾಂಜಲಿ
ಶಿಕಾರಿಪುರ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನಕ್ಕೆ ಹುಟ್ಟೂರು ಶಿಕಾರಿಪುರದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ. ಪತ್ರಿಕಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್,ತಾ.ಕಾರ್ಯ ನಿರತ ಪರ್ತಕರ್ತರ ಸಂಘದ ಜತೆಗೆ ವಿವಿಧ ಸ್ಥಳೀಯ ಕನ್ನಡ ಸಂಘ ಸಂಸ್ಥೆಗಳ ಸದಸ್ಯರು ಮುಖಂಡರು ಸೋಮವಾರ ಸಂಜೆ ಶ್ರದ್ಧಾಂಜಲಿ ಸಭೆ ನಡೆಸಿದರು.
ಮಾಜಿ ಕಾಡಾ ಅಧ್ಯಕ್ಷ, ಜಿ.ಎಸ್.ಎಸ್. ಶಿಷ್ಯ ಕೆ.ಶೇಖರಪ್ಪ ಮಾತನಾಡಿ, ಅತ್ಯಂತ ಮೃದು ಹಾಗೂ ಸರಳ ಸ್ವಭಾದವ ಜಿಎಸ್ಎಸ್ ಪಟ್ಟಣದ ಗಬ್ಬೂರಿನಲ್ಲಿ ಜನಿಸಿ(ಅಂದಿನ ಗಗ್ಗರಿ) ಸ್ಥಳೀಯ ಸರ್ಕಾರಿ ಪೇಟೆ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಬ್ಯಾಸ ಪಡೆದುದಾಗಿ ತಿಳಿಸಿದರು.
ತಾ.ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಮಣಿ ಕೊಟ್ರೇಶಪ್ಪ ಮಾತನಾಡಿ, ಜಿಎಸ್ಎಸ್ ಕವನಗಳನ್ನು ಕಸಾಪ ಸಂಗ್ರಹಿಸಿ ಪ್ರತಿ ಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಎಂದರು.
ರಾ.ಸ್ವ.ಸೇ ಸಂಘದ ಹಿರಿಯ ಕಾರ್ಯಕರ್ತ ಎಸ್.ಬಿ. ಮಠದ್, ತಾ.ಕಸಾಪ ಅದ್ಯಕ್ಷ ಸುದರ್ಶನ್, ಮುಖಂಡ ಕೊಪ್ಪಲು ಮಂಜುನಾಥ್,ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ, ಚಂದ್ರಶೇಖರ್ ಸೇರೆಗಾರ್, ಕಾನೂರು ನಾಗಪ್ಪ, ಪಾಪಯ್ಯ, ಕಾಶೀಬಾಯಿ, ಸತ್ಯನಾರಾಯಣ, ಸ.ನಾ ಮಂಜಪ್ಪ, ಹರೀಶ್ ಹೂಗಾರ್, ಉಮೇಶ್ ಮಾರವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಶ್ರದ್ಧಾಂಜಲಿ ಸಭೆಯಾಗಿ ಮಾರ್ಪಟ್ಟ ಪೌರ ಸನ್ಮಾನ ಸಭೆ
ಸಾಗರ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ನಿಧನದ ಹಿನ್ನೆಲೆಯಲ್ಲಿ ಸಾಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಸಂಜೆ ಹಮ್ಮಿಕೊಂಡಿದ್ದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ನಾ.ಡಿಸೋಜ ಪೌರ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಿ ಶ್ರದ್ಧಾಂಜಲಿ ಸಭೆಯನ್ನಾಗಿ ಮಾರ್ಪಡಿಸಲಾಯಿತು.
ಸಭೆಯಲ್ಲಿ ಸಾಹಿತಿ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಜಿ.ಎಸ್. ಶಿವರುದ್ರಪ್ಪನವರು ಜಾತ್ಯತೀಯ ತತ್ವವನ್ನು ತಮ್ಮ ನಡೆ ಮತ್ತು ನುಡಿಯಲ್ಲಿ ಅಳವಡಿಸಿಕೊಂಡಿದ್ದ ಅಪರೂಪದ ಕವಿಯಾಗಿದ್ದರು ಎಂದು ಕಂಬನಿ ಮಿಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಜಿ.ಎಸ್.ಎಸ್. ಕಾಲದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಪ್ರಕಟಣೆಗಳಿಗೆ ಒಳ್ಳೆಯ ಪ್ರಯತ್ನ ನಡೆಯಿತು. ವಿಚಾರ ಸಂಕಿರಣಗಳಿಗೆ ಜಿ.ಎಸ್.ಎಸ್. ಸಾರ್ಥಕತೆಯನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ: 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಜಿ.ಎಸ್.ಎಸ್. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾವು ಸದಸ್ಯರಾಗಿದ್ದ ಸಂದರ್ಭವನ್ನು ಸ್ಮರಿಸಿಕೊಂಡು ಆಗ ಅವರು ಯಾವತ್ತು ತಮ್ಮ ಅಭಿಪ್ರಾಯವನ್ನು ಸದಸ್ಯರ ಮೇಲೆ ಹೇರುತ್ತಿರಲಿಲ್ಲ. ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದರು. ಜಿ.ಎಸ್.ಎಸ್. ಅವರ ಕಾವ್ಯವನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಅವರ ನೆನಪನ್ನು ಸಾರ್ಥಕಗೊಳಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ತಹಶೀಲ್ದಾರ್ ಸಜಿದ್ ಅಹಮದ್ ಮುಲ್ಲಾ ಮುಂತಾದವರು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಾಗಭೂಷಣ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಸವರಾಜ್, ತಾಲ್ಲೂಕು ಕಸಾಪ ಪದಾಧಿಕಾರಿಗಳು ಹಾಜರಿದ್ದರು. ವಸುಧಾ ಶರ್ಮಾ, ನಾಗೇಂದ್ರ ಕುಮಟ, ವಿ.ಶಂಕರ್ ಜಿ.ಎಸ್.ಎಸ್. ಕವನಗಳನ್ನು ಹಾಡಿದರು.
ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದ ಧೀಮಂತ
ಶಿರಾಳಕೊಪ್ಪ: ಕವಿಗಳು, ವಿಮರ್ಶಕರು, ಪರಂಪೆ ಮತ್ತು ಆಧುನಿಕತೆಗಳ ಮಧ್ಯದ ಸೇತುವೆಯಾಗಿ ಕನ್ನಡ ಸಾಹಿತ್ಯಕ್ಕೆ ಪ್ರಭುದ್ಧತೆಯನ್ನು ತಂದು ಕೊಟ್ಟ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ ರಾಷ್ಟ್ರಕವಿ ಶಿವರುದ್ರಪ್ಪನವರ ಸಾವು ಅತ್ಯಂತ ದುಖಃ ತಂದಿದೆ ಎಂದು ಶಿರಾಳಕೊಪ್ಪ ಕಸಪ ಘಟಕದ ಅಧ್ಯಕ್ಷ ಎಂಜಿ ನಾಗರಾಜ್ ತಿಳಿಸಿದರು.
ಶಿರಾಳಕೊಪ್ಪದ ಗುರುಭವನದಲ್ಲಿ ಕಸಪ ಆಶ್ರಯದಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರ ಕವಿ ಆಗಿ ಶಿಕಾರಿಪುರ ತಾಲ್ಲೂಕಿಗೆ ಹೆಸರು ತಂದ ಅವರು ಅನೇಕ ಕೃತಿಗಳನ್ನು ಬರೆದು ಎಲ್ಲರ ಮನದಲ್ಲಿ ನೆಲೆಯೂರಿದ್ದಾರೆ ಎಂದರು.
ಡಾ.ಮುರಘರಾಜ್ ಮಾತನಾಡಿ, ಇಂದು ಬೆಂಗಳೂರಿನಲ್ಲಿ ಇತರ ಭಾಷೆಗಳಿಂದ ಕನ್ನಡ ಉಳಿಯಲು ಶಿವರುದ್ರಪ್ಪ ನವರ ಕೊಡುಗೆ ಅಪಾರ. ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದರು.
ಸಾಹಿತಿ, ಶಿಕ್ಷಕ ಮಹದೇವಪ್ಪ, ವ್ಯ.ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ, ಶಿಕ್ಷಕ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಕಸಪ ತಾಲ್ಲೂಕ ಕಾರ್ಯದರ್ಶಿ ಚಿನ್ನಪ್ಪ ಓಬಳೇರ್, ಶಿಕ್ಷಕ ಮಂಜಣ್ಣ ಹಾಗು ಇತರರು ಮಾತನಾಡಿದರು.
ರಾಷ್ಟ್ರಕವಿಯಾದ ನಂತರ ಊರಿಗೆ ಬರಲೇ ಇಲ್ಲ: ಬಿಎಸ್ವೈ ಬೇಸರ
ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶಿವೈಕ್ಯರಾಗಿರುವುದು ನಾಡಿನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಮಾಜಿ ಸಿಎಂ, ಶಾಸಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಸಂಶೋಧಕರಾಗಿ, ಸಾಹಿತ್ಯ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.
ಕುವೆಂಪು, ಜಿಎಸ್ಎಸ್ ಇಬ್ಬರು ರಾಷ್ಟ್ರಕವಿಗಳು ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆ. ಅದರಲ್ಲೂ ಜಿಎಸ್ಎಸ್ ಅವರ ಊರನ್ನು ನಾನು ಪ್ರತಿನಿಧಿಸುತ್ತಿದ್ದೇನೆ ಎಂಬುದೇ ಹೆಮ್ಮೆಯ ಸಂಗತಿ ಎಂದರು.
ಈ ಅನಿರೀಕ್ಷಿತ ಸಾವಿನ ಸುದ್ದಿ ಮನಸ್ಸಿಗೆ ಬೇಸರ ತಂದಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ರಾಷ್ಟ್ರಕವಿ ಬಿರುದಾಂಕಿತರಾದ ಮೇಲೆ ಶಿವಮೊಗ್ಗ ಜಿಲ್ಲೆ, ಶಿಕಾರಿಪುರಕ್ಕೆ ಬನ್ನಿ ಎಂದು ಅನೇಕ ಬಾರಿ ಕೋರಿದ್ದೆ. ಅಗತ್ಯಬಿದ್ದರೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುತ್ತೇನೆಂದಿದ್ದೆ. ಅವರು ಬರುತ್ತೇನೆಂದಿದ್ದರು. ಆದರೆ, ದೈವಿಚ್ಛೆ ಬರಲು ಸಾಧ್ಯವಾಗಲೇ ಇಲ್ಲ. ಹುಟ್ಟೂರಿನಲ್ಲಿ ಅವರನ್ನು ಕಾಣುವ ಸೌಭಾಗ್ಯ ಸಿಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹತ್ತಾರು ಬಾರಿ ಶಿವರುದ್ರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಮಾರ್ಗದರ್ಶನ ಪಡೆದುಕೊಂಡಿದ್ದೇನೆ.
ಸಿಎಂ ಆದಾಗ ಅನೇಕ ಸಲಹೆ, ಸಹಕಾರ ನೀಡಿದ್ದರು. ಅವರ ಪ್ರೇರಣಾ ಶಕ್ತಿ ಮರೆಯಲಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಸಂತಾಪ
ಶಿವಮೊಗ್ಗ: ಜಿಎಸ್ಸೆಸ್ ನಿಧನಕ್ಕೆ ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸಂತಾಪ ಸೂಚಿಸಿದ್ದಾರೆ. ತಾವು ಸ್ಥಾಪಿಸಿದ ಕನ್ನಡ ಸಂಘರ್ಷ ಸಮಿತಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು ಎಂದು ಸ್ಮರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳ್ಳೇಕೆರೆ ಹನುಮಂತಪ್ಪ ಅವರು ಜಿಎಸ್ಸೆಸ್ ನಿಧನಕ್ಕೆ ಶೋಕಿಸಿದ್ದಾರೆ.