ಬೆಳ್ಳಿ ಪಲ್ಲಕ್ಕಿ ಸಮರ್ಪಣೆ
ಕ.ಪ್ರ ವಾರ್ತೆ, ಶಿರಾಳಕೊಪ್ಪ, ಮಾ.10
ಶಿವರಾತ್ರಿ ಪುಣ್ಯದಿನದಂದು ಐತಿಹಾಸಿಕ ಕ್ಷೇತ್ರ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿಗೆ 30 ಕೆಜಿ ತೂಕದ ಸುಮಾರು ರು. 25 ಲಕ್ಷ ವೆಚ್ಚದಿಂದ ನಿರ್ಮಿಸಿದ ಬೆಳ್ಳಿ ಪಲ್ಲಕ್ಕಿಯನ್ನು ಭಕ್ತಾದಿಗಳು ಅರ್ಪಿಸಿದರು.
ಭಾನುವಾರ ಗಡ್ಡದ ಮೇಲಿರುವ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿಗೆ ಗಂಗಮ್ಮ ಶಾಂತನಗೌಡರ್ ಚಿಕ್ಕೇರೂರ ಇವರ ಸ್ಮರಣಾರ್ಥ ಇವರ ಕುಟುಂಬ ಹಾಗೂ ಬೆಂಗಳೂರ ಮಿತ್ರ ವರ್ಗದವರು ಕೊಡುಗೆಯಾಗಿ ಕೊಟ್ಟ ಬೆಳ್ಳಿ ರಥವನ್ನು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹಿರಿಯರ ಸಂಕಲ್ಪದಂತೆ ಇತರರ ಸಹಕಾರದೊಂದಿಗೆ ಈ ಪವಿತ್ರಕಾರ್ಯ ಮಾಡಿದ್ದೇವೆ. ಧಾರ್ಮಿಕ ಚಿಂತನೆಗಳಿಂದ ಮನಸ್ಸು ನಿರ್ಮಲವಾಗುತ್ತದೆ ಎನ್ನುವದು ಸತ್ಯ. ಇದೊಂದು ನನ್ನ ಜೀವನದ ಸುದಿನ ಎಂದು ಭಾವಿಸುವದಾಗಿ ತಿಳಿಸಿದರು.
ಉಪಲೋಕಾಯುಕ್ತ ಸುಭಾಷ್ ಆದಿ ಮಾತನಾಡಿ, ಸದಾ ಸಮಾಜ ಮುಖಿಯಾಗಿ, ಧಾರ್ಮಿಕ ಚಿಂತನೆಗಳಿಂದ ಕೂಡಿದ ಮನಸ್ಸು ನಮ್ಮ ಹತೋಟಿಯಲ್ಲಿರುತ್ತದೆ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದೇವಾಲಯ ಸಮಿತಿ ಅಧ್ಯಕ್ಷ ಮಹಂತ ದೇಶಿ ಕೇಂದ್ರ ಸ್ವಾಮಿಗಳು ಮಾತನಾಡಿ, ದಾನಿಗಳ ಸಹಾಕರದಿಂದ ದೇವಸ್ಥಾನದ ಅಭಿವೃದ್ಧಿ ಸಾಧ್ಯ ಎಂದರು. ಪಂಚವಣ್ಣಿಗೆ ಮಠದ ಚೆನ್ನವೀರ ದೇಶೀಕೇಂದ್ರ ಸ್ವಾಮಿಗಳು ಆಶೀರ್ವದಿಸಿದರು.
ಪ್ರಾರಂಭದಲ್ಲಿ ದೇವಾಲಯ ಸಮಿತಿಯವರು ಪೂರ್ಣಕುಂಭದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಕಾರ್ಯಕ್ರಮದಲ್ಲಿ ಪಲ್ಲಕ್ಕಿ ದಾನವಾಗಿ ಕೊಟ್ಟ ನ್ಯಾಯಮೂರ್ತಿ ಮೋಹನ್ ಶಾಂತನ ಗೌಡರು, ದಾನಿಗಳ ಪರವಾಗಿ ಕೈಗಾರಿಕೋದ್ಯಮಿ ಬೆಂಗಳೂರಿನ ಲಕ್ಷ್ಮಣ ಅವರನ್ನು ಹಾಗೂ ಪ್ರಥಮ ಬಾರಿಗೆ ಆಗಮಿಸಿದ ಉಪಲೋಕಾಯುಕ್ತ ಸುಭಾಷ್ ಆದಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಚೆನ್ನಬಸವೇಶ್ವರ ಸ್ವಾಮಿ ರಥೋತ್ಸವ
ಸೊರಬ: ಗುಂಡಶೆಟ್ಟಿಕೊಪ್ಪ ಗ್ರಾಮದಲ್ಲಿ ಶ್ರೀ ಚೆನ್ನಬಸವೇಶ್ವರ ಸ್ವಾಮಿ ರಥೋತ್ಸವ ನಡೆಯಿತು.
ಕಡಸೂರು ವೇ.ವಿ. ಗುರುಮೂರ್ತಯ್ಯ ವೈಧಿಕತ್ವದಲ್ಲಿ ನಡೆದ ಗ್ರಾಮದ ನಾಗದೇವತೆಗಳಿಗೆ ರುದ್ರಾಭಿಷೇಕ, ಗಂಗಾಪೂಜೆ, ಹೂವಿನ ರಥೋತ್ಸವ, ಉತ್ಸವ ಮೂರ್ತಿಯ ಗ್ರಾಮ ಮೆರವಣಿಗೆ, ಮಹಾರಥೋತ್ಸವದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಜಾತ್ರಾ ನಿಮಿತ್ತ ಗ್ರಾಮದ ಹಿರಿಯರಿಗೆ ಸನ್ಮಾನ, ಗ್ರಾಮದ ಯುವಕರಿಂದ ಸಾಮಾಜಿಕ ನಾಟಕ, ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಬಂಗಾರದ ಬಳೆ, ಬೆಳ್ಳಿಗಧೆ, ಬೆಳ್ಳಿ ಬಳೆ, ನಗದು, ಪಾರಿತೋಷಕಗಳುಳ್ಳ ಬಯಲು ಜಂಗಿ ಕುಸ್ತಿ ವಿಶೇಷ ಆಕರ್ಷಣೆಯಾಗಿತ್ತು, ಹಾವೇರಿ, ಧಾರವಾಡ, ಗದಗ, ಬಿಜಾಪುರ ಹಾಗೂ ಜಿಲ್ಲೆಯ ಒಟ್ಟು 40 ಕುಸ್ತಿಪಟುಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಧಾರವಾಡದ ಫಕ್ಕೀರಪ್ಪ, ಮಾಸೂರು ದಾದಾಪೀರ್ ಕುಸ್ತಿ ಸಮಕುಸ್ತಿಯಾಗಿದ್ದರಿಂದ ಅಖಾಡ ಬಳೆ ಹಾಗೆಯೇ ಉಳಿದಿದ್ದು, ಬೆಳ್ಳಿಗಧೆ ಪಡೆಯುವಲ್ಲಿ ಜಿಲ್ಲೆಯ ಕಡೇನಳ್ಳಿ ರಮೇಶ್ಯ್ಶಸ್ವಿಯಾದರು. ಕುಸ್ತಿ ಪ್ರದರ್ಶನಕ್ಕೆ ತಾಲೂಕಿನ, ನೆರೆ ತಾಲೂಕಿನ ನೂರಾರು ಅಭಿಮಾನಿಗಳು ಪಾಲ್ಗೊಂಡು ವೀಕ್ಷಿಸಿದರು.
ಗ್ರಾಮಸ್ಥರು, ಜಾತ್ರಾ ಸಮಿತಿಯವರು, ತಾಲೂಕು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಮೊದಲಾದವರು ಆಗಮಿಸಿದ್ದರು.
ಈಶ್ವರಪ್ಪ, ಬಿಎಸ್ವೈ ವಿರುದ್ಧ ವಾಗ್ದಾಳಿ
ಶಿವಮೊಗ್ಗ: ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯಿಂದ ವಲಸೆ ಬಂದ ಇಬ್ಬರು ವಲಸಿಗ ರಾಜಕಾರಣಿಗಳಿಂದ ಶಿವಮೊಗ್ಗ ಜಿಲ್ಲೆಯ ರಾಜಕೀಯ ಔನ್ನತ್ಯ, ಹಿರಿಮೆ ನಾಶವಾಗಿದೆ ಎಂದು ಸಾಹಿತಿ ಶ್ರೀಕಂಠ ಕೂಡಿಗೆ ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ರಾಜಕಾರಣಕ್ಕೆ ಈ ಹಿಂದಿನಿಂದಲೂ ತನ್ನದೇ ಆದ ಇತಿಹಾಸವಿದೆ. ಆದರೆ ವಲಸಿಗ ಇಬ್ಬರು ರಾಜಕಾರಣಿಗಳು ಜಿಲ್ಲೆಯ ರಾಜಕೀಯ ಔನ್ನತ್ಯ ನಾಶ ಮಾಡಿದರು ಎಂದು ಕುಟುಕಿದರು. ಸದ್ಯದ ರಾಜಕಾರಣ ಮಾಡುವವರು ಕಸದ ಬುಟ್ಟಿಗೆ ಸೇರುತ್ತಾರೆ. ಒಳ್ಳೆಯ ರಾಜಕಾರಣ ಮಾಡುವವರು ಅಧಿಕಾರದಲ್ಲಿರದಿದ್ದರೂ ಚರಿತ್ರೆಯಾಗುತ್ತಾರೆ ಎಂಬುವುದಕ್ಕೆ ಗೋಪಾಲಗೌಡರಂತ ಮುತ್ಸದಿ ಸಾಕ್ಷಿಯಾಗಿದ್ದಾರೆ ಎಂದ ಅವರು, ವಚನಕಾರರು ಪರಧನವೊಲ್ಲೆ, ಪರಸತಿಯೊಲ್ಲೆ ಎಂದು ಸಾರಿ ಹೇಳಿದರು. ಆದರೆ ಪ್ರಸ್ತುತ ಕೆಲ ರಾಜಕಾರಣಿಗಳು ಪರಧನವೂ ಬಲ್ಲೆ, ಪರಸತಿಯೂ ಬಲ್ಲೆ ಎಂಬುವರಾಗಿದ್ದಾರೆ. ಅನೈತಿಕತೆಯಲ್ಲಿ ಏಕತೆ ಹುಡುಕುವವರಾಗಿದ್ದಾರೆ. ಇಂತಹ ರಾಜಕಾರಣಿಗಳನ್ನು ತಿರಸ್ಕರಿಸಬೇಕಾಗಿದೆ ಎಂದರು.
ಎಣಿಕೆ ಕೊಠಡಿಗೆ ಒಬ್ಬರಿಗೆ ಪ್ರವೇಶ
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತಎಣಿಕೆ ಕಾರ್ಯ ಮಾರ್ಚ್ 11ರಂದು ಬೆಳಗ್ಗೆ 8 ಗಂಟೆಗೆ ನಗರದ ಎಸ್.ಆರ್. ನಾಗಪ್ಪ ಶ್ರೇಷ್ಠಿ ಅನ್ವಯಿಕ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಮತ ಎಣಿಕೆ ಕೇಂದ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಅಭ್ಯರ್ಥಿಯಿಂದ ನೇಮಕವಾದ ಏಜೆಂಟ್ ಯಾರಾದರೊಬ್ಬರು ಎಣಿಕೆ ಕೊಠಡಿಯ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಮತಎಣಿಕೆ ಏಜೆಂಟ್ರಾಗಿ ಹಾಜರಿರಬಹುದು ಎಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಎಚ್. ಕೊಟ್ರೇಶ್ ತಿಳಿಸಿದ್ದಾರೆ.
ಹೊಸ ವಿವಿ ಅನುಮೋದನೆ ಸರಿಯಲ್ಲ
ಸಾಗರ: ಹಾದಿ ಬೀದಿಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಿ, ಶಿಕ್ಷಣದ ಗುಣಮಟ್ಟ ಅಧೋಗತಿಗೆ ದೂಡುತ್ತಿರುವ ಸರ್ಕಾರದ ಕ್ರಮದ ಬಗ್ಗೆ ಹಿರಿಯ ಸಾಹಿತಿ ಟಿ. ಮಹಾಬಲೇಶ್ವರ ಭಟ್ಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಕೊನೆ ಅಧಿವೇಶನದಲ್ಲಿ ಹೊಸದಾಗಿ 20 ಖಾಸಗಿ ವಿ.ವಿ ಗಳಿಗೆ ಸದನದ ಅನುಮೋದನೆ ಪಡೆದಿದೆ. ಈಗಾಗಲೇ ರಾಜ್ಯದಲ್ಲಿ 22 ವಿಶ್ವವಿದ್ಯಾನಿಲಯಗಳು, 23 ಡೀಮಡ್ ವಿವಿ, 21 ಖಾಸಗೀ ವಿಶ್ವ ವಿದ್ಯಾನಿಲಯಗಳು ಹಾಗೂ ಒಂದು ಸೆಂಟ್ರಲ್ ವಿವಿ ಹೀಗೆ ಒಟ್ಟು 67 ವಿವಿಗಳು ತೆವಳುತ್ತಾ ಕೆಲಸ ಮಾಡುತ್ತಿವೆ. ಇವು ಸಾಲದು ಎನ್ನುವಂತೆ ಖಾಸಗಿ ಯವರಿಗಾಗಿ ಬೆಳಗಾವಿಗೆ 13, ಬೆಂಗಳೂರಿಗೆ 7 ವಿಶ್ವವಿದ್ಯಾನಿಲಯಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ ಎಂದರು.
ಸೌಲಭ್ಯದ ಕೊರತೆ: ರಾಜ್ಯದಲ್ಲಿ ಈಗಾಗಲೇ 21 ಖಾಸಗಿ ವಿ.ವಿ.ಗಳು ಕೆಲಸ ಮಾಡುತ್ತಿವೆ. ಈ ಪೈಕಿ ಅಜೀಂ ಪ್ರೇಮ್ ಜೀ ಒಡೆತನದ ವಿ.ವಿ. ಬಿಟ್ಟರೆ ಅನೇಕ ಖಾಸಗಿ ವಿ.ವಿ. ಗಳಲ್ಲಿ ನಿಯಮಾವಳಿಯಂತೆ ಸರಿಯಾದ ಸೌಲಭ್ಯವೇ ಇಲ್ಲದೆ, ಹೆಸರಿಗೆ ಮಾತ್ರ ಉಳಿದುಕೊಂಡಿದ್ದು, ವಿದ್ಯಾರ್ಥಿಗಳ ಹಾಗೂ ಪೋಷಕರ ಹಣ ಸುಲಿಗೆ ಮಾಡುವ ದಂದೆಯಲ್ಲಿ ತೊಡಗಿದ್ದರೆ ಸರ್ಕಾರದ ಅಧೀನದಲ್ಲಿರುವ ಅನೇಕ ವಿ.ವಿ.ಗಳು ಇಂದು ಭ್ರಷ್ಟಾಚಾರದ ಕೂಪಗಳಾಗಿವೆ ಎಂದರು.
ಪಶ್ನೆ ಪತ್ರಿಕೆ ಬಹಿರಂಗ, ಅಂಕಪಟ್ಟಿಯ ತಿದ್ದುಪಡಿ, ಕೊಟ್ಟು ಅರ್ಹತಾ ಪತ್ರ ಮುಂತಾದವುಗಳ ಅಪಾದನೆ ಹೊತ್ತಿವೆ. ಇದನ್ನು ಸರಿಪಡಿಸಲು ಸರ್ಕಾರ ಗಮನ ಕೊಡುವ ಬದಲು ಒಳಒಪ್ಪಂದ ಮಾಡಿಕೊಂಡು ಕೇಳಿದವರಿಗೆಲ್ಲಾ ವಿಶ್ವವಿದ್ಯಾನಿಲಯ ನೀಡುತ್ತಿರುವುದು ಸರಿಯಲ್ಲ. ರಾಜ್ಯಪಾಲರು ಇದನ್ನು ತಿರಸ್ಕರಿಸಬೇಕು ಎಂದು ಮಹಾಬಲೇಶ್ವರ ಭಟ್ಟರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಹೊರನಾಡಿನಲ್ಲಿ ರಥೋತ್ಸವ
ಶಿವಮೊಗ್ಗ: ಹೊರನಾಡು ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಮಾ.12ರಿಂದ 16ರ ವರೆಗೆ ಶ್ರೀಮನ್ ಮಹಾರಥೋತ್ಸವ ಕಾರ್ಯಕ್ರಮ ಏರ್ಪಡಿಸಿದೆ. 12ರಂದು ರಥೋತ್ಸವಾಂಗ ಗಣಪತಿ ಪೂಜೆ, ಗಣಪತಿ ಹೋಮ ಮತ್ತು ರಾತ್ರಿ ರಂಗಪೂಜೆ. 13ರಂದು ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ, 14ರಂದು ಶ್ರೀಮನ್ ಮಹಾರಥೋತ್ಸವ, 15ರಂದು ಕುಂಕುಮೋತ್ಸವ, ಅವಭೃತಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾರೋಹಣ, 16ರಂದು ಸಂಪ್ರೋಕ್ಷಣೆ ಹಮ್ಮಿಕೊಂಡಿದೆ ಎಂದು ದೇವಾಲಯದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಜೆಡಿಎಸ್ ವರ್ತನೆಗೆ ಕಾಂಗ್ರೆಸ್ ಖಂಡನೆ
ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವ ಹೊಸನಗರ ತಾಲೂಕು ಜೆಡಿಎಸ್ ಪ್ರಮುಖರ ವರ್ತನೆಯನ್ನು ಸಾಗರ ತಾಲೂಕು ಯುವ ಕಾಂಗ್ರೆಸ್ ಘಟಕ ಖಂಡಿಸಿದೆ. ಇತ್ತೀಚೆಗೆ ಹೊಸನಗರ ಪಪಂ ಚುನಾವಣೆ ಸಂದರ್ಭದಲ್ಲಿ ವಿರೋಧಿ ಹೇಳಿಕೆ ಮುಂದುವರಿಸಿಕೊಂಡು ಬಂದಿರುವ ಹೊಸನಗರ ಜೆಡಿಎಸ್ ಘಟಕ ಕಾಗೋಡು ತಿಮ್ಮಪ್ಪನವರನ್ನು ಸರ್ವಾಧಿಕಾರಿ ಎಂಬ ಹೇಳಿಕೆ ನೀಡಿದ್ದನ್ನು ಯುವ ಕಾಂಗ್ರೆಸ್ ಘಟಕ ಉಗ್ರವಾಗಿ ಖಂಡಿಸಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಎಂದಿಗೂ ಸರ್ವಾಧಿಕಾರಿಯಂತೆ ವರ್ತಿಸಿಲ್ಲ. ಎಲ್ಲ ಜನಾಂಗದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆಯನ್ನು ಕಂಡು ಸಹಿಸಲಾಗದೆ ಜೆಡಿಎಸು ಮುಖಂಡರು ಕಾಗೋಡು ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಗೋಡು ತಿಮ್ಮಪ್ಪನವರ ಬಗ್ಗೆ ಅನಗತ್ಯವಾಗಿ ಆರೋಪ ಮಾಡಿದರೆ ಯುವ ಕಾಂಗ್ರೆಸ್ ಘಟಕದಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣಾಕರ, ತಾಲೂಕು ಉಪಾಧ್ಯಕ್ಷ ತಾರಾಮೂರ್ತಿ, ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ಆನಂದ ಮೊದಲಾವರು ಎಚ್ಚರಿಕೆ ನೀಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಭದ್ರಾವತಿ: ತವರಿಗೆ ಹೋದ ಪತ್ನಿ ತಿರುಗಿ ಬರಲಿಲ್ಲವೆಂದು ಜಿಗುಪ್ಸೆಗೊಂಡು ಮಾದೇವ (35) ಎಂಬವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ
ಶಿವಮೊಗ್ಗ: ಪದವಿಪೂರ್ವ ಶಿಕ್ಷಣ ಇಲಾಖೆ 2013-14ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಶೈಕ್ಷಣಿಕ ವರ್ಷದ ಆರಂಭ, ಮುಕ್ತಾಯ ಮತ್ತು ರಜಾದಿನಗಳ ವಿವರಗಳನ್ನು ನೀಡಿದೆ.
2013ರ ಮೇ 30ರಿಂದ 2014ರ ಮಾರ್ಚ್ 31ರವರೆಗೆ ಶೈಕ್ಷಣಿಕ ವರ್ಷವಾಗಿರುತ್ತದೆ. 2013ರ ಮೇ 30ರಂದು ತರಗತಿ ಆರಂಭವಾಗಲಿದ್ದು, ಅಕ್ಟೋಬರ್ 7ರಿಂದ 27ರವರೆಗೆ ಮಧ್ಯಂತರ ರಜೆ ಇರುತ್ತದೆ. 2014ರ ಏಪ್ರಿಲ್ 1ರಿಂದ ಮೇ 29ರವರೆಗೆ ಬೇಸಿಗೆ ರಜೆ ನಿಗದಿ ಮಾಡಲಾಗಿದೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿ ದಂಡ ಶುಲ್ಕವಿಲ್ಲದೇ 2013ರ ಜೂನ್ 15ರಂದು ಕೊನೆಗೊಳ್ಳುತ್ತದೆ. ವಿಳಂಬ ದಾಖಲಾತಿ ದಂಡ ಶುಲ್ಕದೊಂದಿಗೆ ಜೂ.22 ಕೊನೆ ದಿನ. ಪ್ರಥಮ ಪಿಯುಸಿಗೆ ವಿಶೇಷ ದಂಡ ಶುಲ್ಕದೊಂದಿಗೆ ಜೂನ್ 29 ಕಡೆ ದಿನವಾಗಿರುತ್ತದೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ದಂಡ ಶುಲ್ಕವಿಲ್ಲದೆ 2013ರ ಜುಲೈ 15 ಕಡೆ ದಿನವಾಗಿರುತ್ತದೆ.
ತೆಂಗಿನಕಾಯಿ ಕೀಳುವ ತರಬೇತಿ
ಶಿವಮೊಗ್ಗ: ಕೃಷಿ ವಿಜ್ಞಾನ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ 18ರಿಂದ 23ರ ವರೆಗೆ ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತಿ ಕಾಯಿ ಕೀಳುವ ಮತ್ತು ಸಸ್ಯ ಸಂರಕ್ಷಣಾ ಪ್ರಾತ್ಯಕ್ಷಿಕಾ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಯುವಕ, ಯುವತಿಯರು, ಕೃಷಿ ಕಾರ್ಮಿಕರು ಭಾಗವಹಿಸಬಹುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಧೈರ್ಯಶಾಲಿಗಳಾಗಿದ್ದು, 18ರಿಂದ 35 ವರ್ಷದ ವಯೋವುತಿಯವರಾಗಿರಬೇಕು. ಭಾಗವಹಿಸಲು ಇಚ್ಚಿಸುವವರು ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇವರನ್ನು 15ರೊಳಗೆ ಖುದ್ದಾಗಿ ಬಂದು ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಮಾಹಿತಿಗಾಗಿ ದೂ- 295516 ಸಂಪರ್ಕಿಸಬಹುದು.
ನಾಳೆ ಮಹಿಳಾ ದಿನಾಚರಣೆ
ಶಿವಮೊಗ್ಗ: ಸುವರ್ಣ ಲೇಡಿಸ್ ಕ್ಲಬ್ ಮಾರ್ಚ್ 12ರಂದು ಮಧ್ಯಾಹ್ನ 2.30ಕ್ಕೆ ಅಂಬೇಡ್ಕರ್ ಭವನದಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡಿದೆ. ಮುಖ್ಯ ಅತಿಥಿಯಾಗಿ ಜೆಡಿಎಸ್ನ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮನೋವೈದ್ಯೆ ಡಾ.ಕೆ.ಎಸ್. ಪವಿತ್ರ, ಸುವರ್ಣ ವಾಹಿನಿಯ ಆಡಳಿತಾಧಿಕಾರಿ ಕೆ.ಬಿ. ವೈದ್ಯ ಪಾಲ್ಗೊಳ್ಳುವರು. ಇದೇ ವೇಳೆ ಸಮಾಜ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಸನ್ಮಾನಿಸಲಾಗುವುದು. ಕ್ಲಬ್ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿವರಗಳಿಗಾಗಿ- 9731315284.