ಮನ ಬಂದಂತೆ ಮಾತನಾಡುವ ರಾಜಕಾರಣಿಗಳು
ಶಿವಮೊಗ್ಗ: ದೇಶಭಕ್ತರಲ್ಲದವರೂ ದೇಶದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.
ಲಂಕೇಶ್ ಜನ್ಮ ದಿನದ ಅಂಗವಾಗಿ ಭಾನುವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ರಾಜಕಾರಣಿಗಳಿಗೆ ದೇಶಪ್ರೇಮ ಕಡಿಮೆಯಾಗಿದ್ದು, ಮನ ಬಂದಂತೆ ಮಾತನಾಡುತ್ತಿದ್ದಾರೆ. ಟಿಪ್ಪು ಬಗ್ಗೆ ಮಾತನಾಡುವವರು ನಾಡನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಅಪ್ರಾಮಾಣಿಕತೆ: ರಾಜ್ಯದ ಕೆಲ ಕಡೆಗಳಲ್ಲಿ ಮಾತು ತನ್ನ ಮೌಲ್ಯ ಹಾಗೂ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ಅಶ್ಲೀಲ, ಆತ್ಮ ವಂಚನೆಗಳ ಅಭಿವ್ಯಕ್ತವಾಗುತ್ತಿದೆ. ಅಲ್ಲದೇ, ಒಬ್ಬ ನೈತಿಕತೆ ಇಲ್ಲದ ವ್ಯಕ್ತಿ ಅಪ್ರಾಮಾಣಿಕತೆ, ಭಂಡತನದ ಸಂಕೇತವಾದರೆ, ಸುಳ್ಳ ಆತನ ತಪ್ಪನ್ನು ಮುಚ್ಚಿಕೊಳ್ಳುವ ಸಾಧನವಾಗಿದೆ. ಲಂಕೇಶ್ ಅವರು ಇಂದು ಇದ್ದಿದ್ದರೆ ಇದನ್ನು ಸಹಿಸಿಕೊಳ್ಳುತ್ತಿರಲಿಲ್ಲ ಎಂದರು.
ಅಶ್ಲೀಲ ರಾಜಕಾರಣ: ಅಶ್ಲೀಲ ರಾಜಕಾರಣವನ್ನು ಕಳೆದ 5 ವರ್ಷಗಳಿಂದ ಕಂಡಿದ್ದೇವೆ. ಇದು ಬಡತನದ ಸಂಕೇತವಾಗಿದೆ ಎಂದ ಅವರು, ಮುಕ್ತ ಮಾರುಕಟ್ಟೆಯಲ್ಲಿ ಸುಳ್ಳನ್ನು ಸತ್ಯಗಳಂತೆ ಬಿಂಬಿಸಲಾಗಿದೆ. ಇಂದು ನಾಲಿಗೆ ಸೀಳಿ, ಕೈ ಕಡಿಯಿರಿ ಎಂದು ಹೇಳುವ ರಾಜಕಾರಣಿಗಳ ಮಾತುಗಳು ಸಾಮಾನ್ಯವಾಗಿವೆ. ಇದನ್ನು ಮಾಧ್ಯಮಗಳು ಬಿತ್ತರಿಸುವ ಮೂಲಕ ಮಾತುಗಳನ್ನು ಅಶ್ಲೀಲಗೊಳಿಸುತ್ತಿವೆ ಎಂದು ಹೇಳಿದರು.
ಲಂಕೇಶ್ ಪತ್ರಿಕೆಯೇ ಒಂದು ಚಳುವಳಿ, ರಾಜಕೀಯ ಪಕ್ಷ ಹಾಗೂ ರಾಜ್ಯದ ಆತ್ಮ ಸಾಕ್ಷಿಯಾಗಿತ್ತು. ಲಂಕೇಶ್ ಅವರು ಇದ್ದಿದ್ದರೆ ಪ್ರಸ್ತುತ ರಾಜಕೀಯ ಸ್ಥಿರತೆ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು. ಅದೇ ರೀತಿ ಪ್ರಜಾಪ್ರಭುತ್ವದಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದರು ಎಂದರು.
ಸಮಾಜದ ಹಿತ: ಸಮಾಜ ಕಟ್ಟುವ ಜವಾಬ್ದಾರಿ ಇದ್ದವರು ಮಾತನ್ನು ಅಶ್ಲೀಲಗೊಳಿಸಿದ್ದಾರೆ. ಮಾತನಾಡುವ ಸಂದರ್ಭದಲ್ಲಿ ಮೌನವಾಗಿದ್ದರೆ ಅದೂ ಅಶ್ಲೀಲವೇ. ಅಷ್ಟೇ ಅಲ್ಲ ಇದು ಇಡೀ ದೇಶದ ಸಮಸ್ಯೆ. ಸಜ್ಜನ ವ್ಯಕ್ತಿಗಳು ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳದೆ ಸಮಾಜದ ಹಿತ ಕಾಪಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಮಲೆನಾಡು ಪಾರಂಪರಿಕ ತಾಣವಾಗಿತ್ತು. ಆದರೆ, ಇಂದು ಸಂಪದ್ಬರಿತವಾಗಿಲ್ಲ. ಎಲ್ಲಿ ಪರಿಸರ ಉಳಿದಿದೆಯೋ ಅಲ್ಲಿರುವ ಜನರನ್ನು ಖಾಲಿ ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲ ಭೂ ಮಾಲೀಕರು ರಾಜಕಾರಣಿಗಳ ಮೇಲೆ ಒತ್ತಡ ಹೇರಿ ಅರಣ್ಯದಲ್ಲಿರುವ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದರು.
ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಮಾತನಾಡಿ, ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಬೆಳಕು ಚೆಲ್ಲುತ್ತಿದ್ದ ವಿಷಯಗಳನ್ನು ಈಗ ಯಾರು ಮಾಡುತ್ತಿಲ್ಲ. ರಾಜಕೀಯ ಹಾಗೂ ಸಮಾಜದಲ್ಲಿನ ಅವ್ಯವಸ್ಥೆಗಳನ್ನು ತೀರ ಕಠೋರವಾಗಿ ಅಭಿಪ್ರಾಯಗಳ ಮೂಲಕ ಹೇಳುತ್ತಿದ್ದರು. ಇವರೊಂದಿಗೆ ರಾಜಿಗೆ ಅವಕಾಶವೇ ಇರಲಿಲ್ಲ. ಲಂಕೇಶ್ ಅವರ ಕಾಲದಲ್ಲಿ ಪ್ರಗತಿಪರ ಚಿಂತನೆಗೆ, ರಾಜಕೀಯ ಬದಲಾವಣೆಗಾಗಿ ಮಾಡಿರುವ ಕೆಲಸವನ್ನು ಈಗ ಮಾಡುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದರು.
ಇಂದಿನ ವಿಭಿನ್ನ ಯೋಚನಾ ಶಕ್ತಿಯನ್ನು ಬದಲಾವಣೆ ಮಾಡುವ ಲೇಖಕ ಮತ್ತು ಮಾಧ್ಯಮ ಬೇಕು. ಶಾಸನ ಸಭೆಗಳಲ್ಲಿ ಮಾಡುವ ಶಾಸನಗಳನ್ನು ಚರ್ಚೆ ಮಾಡುವ ಉತ್ತಮ ಮಾಧ್ಯಮಗಳ ಅವಶ್ಯಕತೆ ಇದೆ ಎಂದರು. ಗೌರಿ ಲಂಕೇಶ್, ಕಡಿದಾಳ್ ಶಾಮಣ್ಣ, ಬಿ. ಚಂದ್ರೇಗೌಡ, ರಮೇಶ್ಹೆಗ್ಡೆ, ಗುರುಮೂರ್ತಿ ಇದ್ದರು.
ಮಹಿಳೆಯರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ
ಕ.ಪ್ರ ವಾರ್ತೆ, ಶಿರಾಳಕೊಪ್ಪ, ಮಾ.10
ಮಹಿಳೆಯರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ಮಹಿಳೆಯರು ತಮ್ಮ ಪ್ರಬುದ್ಧ ಶಕ್ತಿಯನ್ನು ತಾಳ್ಮೆಯ ರೂಪದಲ್ಲಿ ನಿರ್ವಹಿಸುತ್ತಾರೆ ಎಂದು ಶಿಕಾರಿಪುರ ವೃತ್ತನಿರೀಕ್ಷಕ ಮಾದಪ್ಪ ತಿಳಿಸಿದರು.
ಶಿರಾಳಕೊಪ್ಪದ ಪರಿವರ್ತನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಮಹಿಳಾದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿ, ಮಹಿಳೆಯ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿದರೆ ಅದು ಅಪರಾಧವಾಗುತ್ತದೆ. ಶಿಲಾಯುಗದಿಂದ ಇಂದಿನ ಆಧುನಿಕ ಯುಗದವರೆಗೂ ಮಹಿಳೆ ಜವಾಬ್ದಾರಿಯಿಂದ ತನ್ನದೇ ಆದ ಪಾತ್ರ ವಹಿಸುತ್ತಿದ್ದಾಳೆ. ಮಹಿಳೆ ಎಲ್ಲಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದು, ಇನ್ನಷ್ಟು ಅವಕಾಶಗಳನ್ನು ಹೊಂದಿ ಮುಂದೆ ಬರಲು ಪ್ರಯತ್ನಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕಾರಿಪುರ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮತಿ ಕಾರ್ಯದರ್ಶಿ ಜಗದೀಶ್ ಜಿ. ಶಿವಪೂಜಿ ಮಾತನಾಡಿ, ಮಹಿಳೆಯರು ಅಭಿವೃದ್ಧಿ ಹೊಂದಲು ಮಹಿಳಾ ದಿನಾಚರಣೆ ಕಾರ್ಯಕ್ರಮದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಯುವಸಮನ್ವಯಾಧಿಕಾರಿ ಎ.ಎ. ದೋನಿ, ನೆಹರು ಯುವಕೇಂದ್ರದ ಎಂ.ಎಂ. ಮನಗೂಳಿ, ತರಬೇತುದಾರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಬಾಗವಹಿಸಿದ್ದರು.
------
ಗದ್ದುಗೆ ಹಿಡಿಯೋರ್ಯಾರು?
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.10
ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆದಿದ್ದ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ.
ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ನಡುವೆಯೇ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಆರಂಭವಾಗಿದ್ದರೆ, ಯಾವ ಪಕ್ಷ ಗದ್ದುಗೆ ಏರುತ್ತದೆ ಎಂಬ ಕದನ ಕುತೂಹಲ ಜನಸಾಮಾನ್ಯರದ್ದು.
ಕಾಂಗ್ರೆಸ್ನ 172, ಬಿಜೆಪಿಯ 163, ಜೆಡಿಎಸ್ನ 157, ಕೆಜೆಪಿಯ 164, ಬಿಎಸ್ಪಿ 3, ಸಿಪಿಐ 3, ಎಸ್ಡಿಪಿಐ 6, ಬಿಎಸ್ಆರ್ ಕಾಂಗ್ರೆಸ್ 81, ಜೆಡಿಯು 7, ಹಾಗೂ 158 ಪಕ್ಷೇತರರು ಕಣದಲ್ಲಿದ್ದರು. ಕಳೆದ 10-12 ದಿನಗಳಿಂದ ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಒಲಿಸಿಕೊಳ್ಳಲು ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದ ಅಭ್ಯರ್ಥಿಗಳು ಮತ್ತು ಬೆಂಬಲಿಗರ ನೋಟ ಇದೀಗ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ. ತಮಗೆಷ್ಟು ಮತ ಬಂದಿರಬಹುದು, ಯಾರು ಕೈ ಹಿಡಿದರು, ಯಾರು ಕೈಕೊಟ್ಟರು ಎಂಬ ಲೆಕ್ಕಾಚಾರದಲ್ಲೇ ಶನಿವಾರ ಹಾಗೂ ಭಾನುವಾರ ಕಳೆದಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ನ ನಾಯಕರಲ್ಲಿ ಅತಿಯಾದ ಆತ್ಮ ವಿಶ್ವಾಸ ಕಂಡುಬಂದಿದ್ದು, ಶಿಕಾರಿಪುರ ಹಾಗೂ ಶಿರಾಳಕೊಪ್ಪ ಹೊರತಾಗಿ ಉಳಿದೆಲ್ಲಾ ಕಡೆ ತಾವೇ ಅಧಿಕಾರಕ್ಕೆ ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಯಾರ್ಯಾರ ವಿಶ್ವಾಸ ಹೇಗೆ? ಕಳೆದ ಚುನಾವಣೆಯಲ್ಲಿ 18 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 20 ಸ್ಥಾನ ಮುಟ್ಟುವವರೆಗೆ ವಿಶ್ವಾಸ ವ್ಯಕ್ತಪಡಿಸುತ್ತದೆ. ಈ ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಸರಿಯಾಗಿ ಕೆಲಸ ಮಾಡಿದ್ದೇ ಆದರೆ, ತಮ್ಮ ಪಕ್ಷಕ್ಕೆ 10ರಿಂದ 12 ಸ್ಥಾನ ಕಾಯಂ ಎಂದು ಪಕ್ಷದ ಜಿಲ್ಲಾ ಮುಖಂಡರೊಬ್ಬರು “OÚ«ÚsÚ®ÚúڒOæQ ವಿವರಿಸಿದರು.
ಶಿವಮೊಗ್ಗ ನಗರಸಭೆ ಬಲ 35 ಆಗಿದ್ದರೂ, ಇಬ್ಬರು ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯ ನಗರಸಭಾ ವ್ಯಾಪ್ತಿಯ ಮತದಾರರಾಗಿರುವುದರಿಂದ ಇವರಿಗೂ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ವೇಳೆ ಮತದಾನ ಮಾಡುವ ಹಕ್ಕು ಪಡೆಯಲಿದ್ದಾರೆ. ಹೀಗಾಗಿ ಹೇಗಿದ್ದರೂ ನಮಗೆ ಅಧಿಕಾರ ಎಂಬ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು.
35 ನಗರಸಭಾ ಸದಸ್ಯರ ಜೊತೆಗೆ ಚುನಾಯಿತ ಪ್ರತಿನಿಧಿಗಳ ಐದು ಮತ ಸೇರಿ ಒಟ್ಟು 40 ಸಂಖ್ಯೆಯಾಗಲಿದೆ. ಯಾರೇ ಅಧಿಕಾರ ಪಡೆಯಬೇಕೆಂದರೂ ಕನಿಷ್ಠ 21 ಸದಸ್ಯ ಬಲಬೇಕು. ಈ ನಡುವೆ ಕಾಂಗ್ರೆಸ್ ಕೂಡ ಗೆಲವಿನ ವಿಶ್ವಾಸದಲ್ಲಿದ್ದು, ಕನಿಷ್ಠ 16ರಿಂದ 18 ಸ್ಥಾನದಲ್ಲಿ ಗೆಲುವು ಸಾಧಿಸಿದರೆ, ಪಕ್ಷೇತರರ ಸಹಾಯದಿಂದ ಅಧಿಕಾರದ ಗದ್ದುಗೆ ಏರುವ ಕನಸು ಕಂಡಿದೆ.
ಈ ಎರಡು ಪಕ್ಷಗಳ ಅಬ್ಬರದ ನಡುವೆ ಕೆಜೆಪಿ ಕೂಡ ಕಿಂಗ್ಮೇಕರ್ ಎನಿಸಿಕೊಳ್ಳುವ ತವಕದಲ್ಲಿದೆ. ಕನಿಷ್ಠ 6ರಿಂದ 8 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ಆ ಪಕ್ಷದ ಮುಖಂಡರದ್ದು. ಯಾರೇ ಗೆಲ್ಲಲ್ಲಿ ನಮ್ಮನ್ನು ಬಿಟ್ಟು ಅಧಿಕಾರ ಕಷ್ಟ ಎಂದು ಆ ಪಕ್ಷದ ಮುಖಂಡರ ಆಂಬೋಣ.
ಜೆಡಿಸ್ ಸಹ ಈ ಬಾರಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ತಂತ್ರಗಾರಿಕೆ ರೂಪಿಸಿತ್ತು. ಹೀಗಾಗಿ ಕನಿಷ್ಠವೆಂದರೆ 4ರಿಂದ 5 ಸ್ಥಾನ ಗಳಿಸುವ ವಿಶ್ವಾಸ ಆ ಪಕ್ಷದ್ದು.
ಬಿಜೆಪಿ ಗಂಭೀರ: ಜಿಲ್ಲೆಯಲ್ಲಿ ಯಡಿಯೂರಪ್ಪ ಇಲ್ಲದ ಮೊದಲ ಚುನಾವಣೆ ಎದುರಿಸಿರುವ ಬಿಜೆಪಿಗೆ ಒಂದುಕಡೆ ಆತ್ಮವಿಶ್ವಾಸ. ಜೊತೆ ಜೊತೆಗೆ ದುಗುಡ. ಏನಾಗುತ್ತದೋ ಎಂಬ ಆತಂಕ. ಆ ಪಕ್ಷದ ಮುಖಂಡರು ಶಿಕಾರಿಪುರ, ಶಿರಾಳಕೊಪ್ಪದಲ್ಲಿ ಖಾತೆ ತೆರೆಯುವ ಮಾತನ್ನಾಡುತ್ತಾರೆ. ನಾವು ಶೂನ್ಯದಿಂದ ಹೊರಟಿದ್ದೇವೆ, ಅಲ್ಲಿ ಖಾತೆ ತೆರೆದು ಸಂಘಟನೆ ಪ್ರಭಾವ ತಿಳಿಸುತ್ತೇವೆ ಎಂದು ಹೇಳುತ್ತಾರೆ. ಸೊರಬ, ತೀರ್ಥಹಳ್ಳಿಯಲ್ಲಿ ತಾವು ಅಧಿಕಾರಕ್ಕೆ ಏರುವ ವಿಶ್ವಾಸವೂ ಆ ಪಕ್ಷದಲ್ಲಿದೆ.
ಸದ್ಯ 15 ಸದಸ್ಯ ಬಲದ ತೀರ್ಥಹಳ್ಳಿ ಸ್ಥಳೀಯ ಸಂಸ್ಥೆಯಲ್ಲಿ 11 ಸ್ಥಾನ ಬಿಜೆಪಿ ಹಾಗೂ 4 ಸ್ಥಾನ ಕಾಂಗ್ರೆಸ್ ಕಬ್ಜದಲ್ಲಿದೆ.
ಈ ಬಾರಿ ಬಿಜೆಪಿಯ ಬುಟ್ಟಿಯೊಳಗೆ ಕೆಜೆಪಿ ಹಾಗೂ ಜೆಡಿಎಸ್ ಕೈ ಹಾಕುವ ಸಾಧ್ಯತೆ ದಟ್ಟವಾಗಿದೆ. ಶಿಕಾರಿಪುರ ಮತ್ತು ಶಿರಾಳಕೊಪ್ಪದಲ್ಲಿ ಕೆಜೆಪಿ ಅಬ್ಬರ ಹೆಚ್ಚಾಗಿದ್ದು, ಕಾಂಗ್ರೆಸ್, ಬಿಜೆಪಿ ಖಾತೆ ತೆರೆಯುವ ಆಶಾಭಾವನೆಯಲ್ಲಿವೆ. ಭದ್ರಾವತಿಯಲ್ಲಿ ಪಕ್ಷೇತರರದ್ದೇ ಅಬ್ಬರ. ಪ್ರಮುಖವಾಗಿ ಜೆಡಿಎಸ್ ಕಾಂಗ್ರೆಸ್ ನಡುವೆ ಪೈಪೋಟಿ. ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಪ್ರಭಾವ ಸಾಬೀತಾಗಲಿದೆ.