ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶ್ವಾನಗಳ ಕೊಡಚಾದ್ರಿ ಚಾರಣ

Srinivasa Murthy VN
Updated On : 11 Mar 2013, 2:26 am

-ರವಿ ಬಿದನೂರು
ಕ.ಪ್ರ.ವಾರ್ತೆ, ಹೊಸನಗರ
 ಮಹಾಶಿವರಾತ್ರಿ ಅಂಗವಾಗಿ ಕೊಡಚಾದ್ರಿ ಗಿರಿ ಏರುವಾಗ ಕಂಡುಬಂದ ಚಿತ್ರಗಳಿವು. ಮೂರು ಶ್ವಾನಗಳು ಒಂದರ ಹಿಂದೊಂದರಂತೆ ಗಿರಿ ಹತ್ತುತ್ತಿರುವುದು ಕಂಡಾಗ ಕುತೂಹಲ ತರಿಸಿದ್ದಂತೂ ಸತ್ಯ.
 ಕಟ್ಟಿಹೊಳೆಯಿಂದ ಹೊರಟ ಶ್ವಾನಗಳು ಮುಖ್ಯದಾರಿಯಲ್ಲೇ ಲಗುಬಗೆಯಿಂದ ಹೆಜ್ಜೆ ಹಾಕುತ್ತಿದ್ದವು. ಬರುವ ವಾಹನಗಳಿಗೆ ದಾರಿ ಬಿಡುತ್ತಾ ಗಿರಿಯತ್ತ ಏರುತ್ತಿದ್ದ ಬಗೆ ಕಂಡು ಇವು ಕೂಡಾ ನಮ್ಮಂತೆ ಶಿವರಾತ್ರಿ ಜಾತ್ರೆಗೆ ಬಂದಿವೆ ಎಂಬ ತಮಾಷೆ ಮಾತಾಡಿದ್ದು ಆಯ್ತು. ಕುತೂಹಲದ ಕಣ್ಣಿನಿಂದ ಗಮನಿಸುತ್ತಾ ಹೋದಾಗ ಅವು ನೇರವಾಗಿ ಗಿರಿಯ ತುದಿಗೆ ಹೊರಟಿದ್ದು ಖಚಿತವಾಯಿತು.
ಇಲ್ಲಿ ಮಾಮೂಲು: ಗಿರಿ ತಪ್ಪಲಿನ ಕಟ್ಟಿನಹೊಣೆ, ಕಾರಿಘಾಟಿ ಕಡೆಯ ಶ್ವಾನಗಳು ನಿರಂತರ ಗಿರಿಯ ಸಂಪರ್ಕದಲ್ಲಿರುತ್ತವೆ. ಗಿರಿ ತಪ್ಪಲಿನಿಂದ ತುದಿಯವರೆಗೆ ಅಲ್ಲಲ್ಲಿ ಆಯಾಸ ಆರಿಸಿಕೊಳ್ಳುತ್ತ ಅಡ್ಡಾಡುತ್ತಿರುತ್ತವೆ ಎಂದು ಹಿರಿಯ ನಿವಾಸಿಯೊಬ್ಬರು ಹೇಳುತ್ತಾರೆ.
 ಪ್ರವಾಸಿಗಳು ಗಿರಿ ಏರುತ್ತಿದ್ದಂತೆ ಅವರ ದೋಸ್ತಿ ಸಂಪಾದಿಸಲು ರೆಡಿ ಆಗುತ್ತವೆ. ಕೈಯಲ್ಲಿದ್ದ ತಿಂಡಿಯನ್ನೇನಾದರು ಶ್ವಾನಗಳಿಗೆ ಹಾಕಿದ್ದೇ ಆದರೆ ಗಿರಿಯಿಂದ ನಿರ್ಗಮಿಸುವರೆಗೆಅವರ ಜೊತೆಜೊತೆಯಲ್ಲೆ ಓಡಾಟ ಮಾಡುತ್ತವೆ.
 ಸರ್ವಜ್ಞಪೀಠ, ಚಿತ್ರಮೂಲ, ಗಣೇಶ ಗುಹೆ ಸೇರಿದಂತೆ ಪ್ರವಾಸಿಗಳು ವೀಕ್ಷಣೆಗೆ ಹೊರಡುವ ಮಾರ್ಗ ಅಂದಾಜಿಸಿ ಅವರಿಗಿಂತ ಮುಂದೆ ಅಲ್ಲಿ ಮುಟ್ಟಿರುತ್ತವೆ. ಪ್ರವಾಸಿಗರು ಬಂದು ಇನ್ನೇನು ವಾಪಾಸಾಗಬೇಕು ಎನ್ನುವಾಗ ಮುಂದಿನ ಸ್ಥಳಕ್ಕೆ ಹೋಗಲು ಶ್ವಾನಗಳು ಅಣಿಯಾಗುತ್ತವೆ. ಹೀಗಾಗಿ ಒಂದು ರೀತಿಯಲ್ಲಿ ಕೊಡಚಾದ್ರಿಯ ಗೈಡ್ ಕೂಡ ಇಲ್ಲಿಯ ಶ್ವಾನಗಳು ಎನ್ನುತ್ತಾರೆ ರಾಮಚಂದ್ರ ಜೋಗಿ.
 ಕೊಡಚಾದ್ರಿಯಲ್ಲಿ ಕಾಲಭೈರವನ ಸನ್ನಿಧಿ ಕೂಡ ಇದೆ. ಕಾಲಭೈರವನ ವಾಹನ ಕೂಡ ಶ್ವಾನ ಎಂಬುದು ಗಮನಾರ್ಹ. ಕೊಡಚಾದ್ರಿಗೆ ಬರುವ ಭಕ್ತರು, ಪ್ರವಾಸಿಗರಲ್ಲಿ ಕೇರಳದವರು ಅಧಿಕ. ಇಲ್ಲಿಯ ಶ್ವಾನಗಳ ಚುರುಕುತನ ಕಂಡು ಸಾಕಷ್ಟು ಮರಿಗಳನ್ನು ಸಾಕಲು ಕೊಂಡು ಹೋಗಿದ್ದಾರಂತೆ ಅಲ್ಲಿಂದ ಬಂದ ಪ್ರವಾಸಿಗರು.
ಗಿರಿಯತ್ತ ಬರುವ ಪ್ರವಾಸಿಗಳ ತಿಂಡಿ ಪಟ್ಟಣದ ಮೇಲಿನ ಆಸೆಯೇ, ಇಲ್ಲ ಗಿರಿಯೊಳಗೆ ಬದುಕು ಹೊಂದಿಕೊಂಡಿದೆಯೋ ಅಥವಾ ಕಾಕತಾಳಿಯ ಇರಬಹುದು. ಆದರೆ ಶ್ವಾನಗಳ ಓಡಾಟ ಮತ್ತು ಗಿರಿ ನಿವಾಸಿಗಳಲ್ಲಿ ಕೆಲವರ ಅಭಿಪ್ರಾಯ ಒಂದಷ್ಟು ಸೋಜಿಗ ತರಿಸಿದ್ದಂತೂ ಸತ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement