ಹಣಕಾಸು ಸಚಿವಾಲಯದಿಂದ ನ್ಯಾಯಾಂಗ ನಿಂದನೆ: ಆರೋಪ
ಶಿವಮೊಗ್ಗ: ಅಡಕೆ ಬೆಳೆಗಾರರ ಸಾಲ ಮನ್ನಾ ಕುರಿತು ನ್ಯಾಯಾಲಯ ನೀಡಿದ ತೀರ್ಪನ್ನು ಜಾರಿಗೆ ತಾರದೆ ಕೇಂದ್ರ ಹಣಕಾಸು ಸಚಿವಾಲಯ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ರಾಜ್ಯ ಉಚ್ಚ ನ್ಯಾಯಾಲಯ ಅಡಕೆ ಬೆಳೆಗಾರರ ಸಾಲ ಮನ್ನಾ ಪರ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ 3 ತಿಂಗಳ ಒಳಗೆ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಹಣಕಾಸು ಕಾರ್ಯಾಲಯಕ್ಕೆ ಆದೇಶಿಸಿದೆ. ಈಗ ಮೂರು ತಿಂಗಳ ಗಡುವು ಮುಗಿದಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಂಗ ನಿಂದನೆ ಏಕೆ?: ಮೂರು ತಿಂಗಳ ಗಡುವು ಮುಗಿದ ಕಾರಣ ಇದು ನ್ಯಾಯಾಂಗ ನಿಂದನೆ ಆಗಿದೆ. ಕೇಂದ್ರ ನಾಯಕರು ಹಲವಾರು ಬಾರಿ ಮನವರಿಕೆ ಮಾಡಿದರೂ ಅಧಿಕಾರಿಗಳು ರೈತರ ಹಿತಾಸಕ್ತಿಗೆ ವಿರುದ್ಧ ನಡೆದುಕೊಂಡಿದ್ದಾರೆ.
ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಡಕೆ ಬೆಳೆಗಾರರ ಆತ್ಮಹತ್ಯೆಯಂತಹ ಘಟನೆ ತಡೆಯುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಜಾರಿ ಮಾಡಿಸಲು ಮುಂದಾಗುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆ ಜಾರಿ ಆದರೆ ಅಡಕೆ ಬೆಳೆಗಾರರಿಗೆ ನ್ಯಾಯ ಸಿಗುವುದಲ್ಲದೇ ಅಡಿಕೆ ಬೆಳೆಗಾರರ ಸಾಲ ಮನ್ನಾ ಆಗುವುದು ಖಚಿತ ಎಂದವರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಹಲವಾರು ಯುವಕರು ಹಾಗೂ ಹಿರಿಯ ಅಡಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆಲ್ಲಾ ದೃಶ್ಯಗಳು ನಮ್ಮ ಕಣ್ಣಮುಂದಿರುವಾಗ ನ್ಯಾಯಾಂಗ ನಿಂದನೆ ಜಾರಿ ಮಾಡಿಸುವುದು ಅನಿವಾರ್ಯವಾಗಿದೆ ಎಂದವರು ತಿಳಿಸಿದ್ದಾರೆ.
ನಅಡಕೆ ಬೆಳೆಗಾರರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನೀವು ನಿಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಈ ದೇಶದ ನ್ಯಾಯಾಲಯದ ಮೇಲೆ ನಂಬಿಕೆ ಇಡಿ. ನ್ಯಾಯಾಲಯದ ಮತ್ತು ಕೇಂದ್ರದ ಮುಖಾಂತರ, ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಿಸುವುದು ಖಚಿತ ಎಂದು ವಿವರಿಸಿದ್ದಾರೆ.
ಇದನ್ನ್ನು ಅಡಕೆ ಬೆಳೆಗಾರರ ಪೋಷಣೆ ಮಾಡುವ ಕೆಲಸ ರೈತರಿಂದ ಆಗಬೇಕು. ಸತ್ಯಾಗ್ರಹ, ಒಂದು ಜಾಗೃತಿಗಾಗಿಅದರಿಂದ ಸಂಪೂರ್ಣ ನ್ಯಾಯ ಸಿಗುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
-----
ಆಧ್ಯಾತ್ಮಿಕ ಕೇಂದ್ರಗಳಿಂದ ಶಾಂತಿ ದೊರೆಯಲು ಸಾಧ್ಯ
ಕ.ಪ್ರ ವಾರ್ತೆ, ಶಿಕಾರಿಪುರ, ಮಾ.10
ಆಧ್ಯಾತ್ಮಿಕ ಕೇಂದ್ರಗಳಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ದೊರೆಯಲು ಸಾಧ್ಯ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿಯಲ್ಲಿ ಶಿವರಾತ್ರಿ ಅಂಗವಾಗಿ ಬಾನುವಾರ ವಿವಿಧ ಕಾರ್ಯಕ್ರಮದ ನಂತರದಲ್ಲಿ ಸತ್ಯ ಶಿವರಾತ್ರಿಯ ಬಗ್ಗೆ ನಡೆದ ಸಂದೇಶದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನದಲ್ಲಿ ಸಮಾಜದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿದೆ. ಮನುಷ್ಯ ದೈವದ ಬಗೆಗಿನ ನಂಬಿಕೆ ಕಳೆದುಕೊಂಡು ಧರ್ಮಾಚರಣೆ ತಪ್ಪುತ್ತಿರುವ ಹಿನ್ನಲೆಯಲ್ಲಿ ದುರ್ಘಟನೆಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದರು.
ಆಧ್ಯಾತ್ಮಿಕ ಕೇಂದ್ರಗಳು ಇಂತಹ ಸಮಾಜ ವಿದ್ರೋಹದ ಕಾರ್ಯವನ್ನು ಸ್ಥಗಿತಗೊಳಿಸಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಬಹು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಪ್ರಶಂಸಿಸಿದರು.
ಪರಿವರ್ತನೆ ಮೂಲಕ ಸರಿದಾರಿ: ಆಧ್ಯಾತ್ಮಿಕ ಕೇಂದ್ರಗಳಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯಾವಿದೆ. ಈ ದಿಸೆಯಲ್ಲಿ ಪ್ರತಿನಿತ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಪೂರ್ಣ ಜ್ಞಾನ ಸಂಪಾದಿಸಿ ವೈಯುಕ್ತಿಕ ಪರಿವರ್ತನೆಯ ಮೂಲಕ ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ. ಸಮಾಜ ಸುಧಾರಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿ.ವಿ ಪಾತ್ರ, ಕೊಡುಗೆ ಅನನ್ಯ ಎಂದರು.
ಮಾಜಿ ಕಾಡಾ ಅಧ್ಯಕ್ಷ ಕೆ. ಶೇಖರಪ್ಪ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡಿ, ಆಧ್ಯಾತ್ಮಿಕ ಸೇವೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ ಮುಂಚೂಣಿಯಲ್ಲಿದ್ದು ಸಾಮಾನ್ಯ ವ್ಯಕ್ತಿಯನ್ನು ಪರಿಪೂರ್ಣವಾಗಿಸುವಲ್ಲಿ ವಿ.ವಿ ಹೆಚ್ಚಿನ ಶ್ರಮ ವಹಿಸುತ್ತಿದೆ ಎಂದರು.
ಅಂತರಾಷ್ಟ್ರೀಯವಾಗಿ ಜನಪ್ರಿಯವಾಗಿರುವ ಸಂಸ್ಥೆಯ ಪ್ರಧಾನ ಕೇಂದ್ರ ರಾಜಸ್ಥಾನದ ಮೌಂಟ್ ಅಬು ಭೇಟಿ ಜೀವನದಲ್ಲಿ ಮರೆಯಲಾಗದ ಅನುಭವವಾಗಿದೆ ಎಂದು ಸ್ಮರಿಸಿದರು.
ಸಂಸ್ಥೆ ಸಂಚಾಲಕಿ ಕು. ಸ್ನೇಹಕ್ಕ ಶಿವಸಂದೇಶವನ್ನು ಭಿತ್ತರಿಸಿ ಶಿವರಾತ್ರಿಯ ಅರ್ಥ, ಶಿವನ ಅವತಾರದ ಉದ್ದೇಶ, ಜಾಗರಣೆ, ಉಪವಾಸದ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ತಾ. ವಕೀಲರ ಸಂಘದ ಮಾಜಿ ಅಧ್ಯಕ್ಷ ವಸಂತಮಾಧವ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಗೆ ಅವಕಾಶ ಕಲ್ಪಿಸಲು ಮನವಿ ಮಾಡಿದರು.
ಜ್ಞಾನ ಅವಶ್ಯಕ: ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ವಿರಕ್ತಮಠದ ಚನ್ನಬಸವಸ್ವಾಮೀಜಿ ಆಶೀರ್ವಚನದಲ್ಲಿ, ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಜ್ಞಾನ ಅವಶ್ಯಕವಾಗಿದೆ. ಇದರಿಂದ ಮಾತ್ರ ಶಾಂತಿ ಸಮಾಧಾನ ಸಮಾಜದಲ್ಲಿ ನೆಲೆಸಲು ಸಾಧ್ಯ ಎಂದರು.
ಸಂಸ್ಥೆಯಿಂದ ಬಿಇಒ ಸಿದ್ದಲಿಂಗಪ್ಪ ಹಾಗೂ ಮಾಜಿ ಕಾಡಾ ಅಧ್ಯಕ್ಷ ಶೇಖರಪ್ಪನವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಪುಟ್ಟಪ್ಪಗೌಡ, ಶಿವನಗೌಡ, ಜಯಣ್ಣ, ಮಂಜಾಚಾರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೂರ್ತಿ ಸ್ವಾಗತಿಸಿ, ಬಸವರಾಜ ನಿರೂಪಿಸಿ, ಪುಟ್ಟಪ್ಪಗೌಡ ವಂದಿಸಿದರು.