ಹೊಳೆ ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕ.ಪ್ರ ವಾರ್ತೆ, ಭದ್ರಾವತಿ, ಮಾ.10
ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭದ್ರಾನದಿ ದಂಡೆಯಲ್ಲಿರುವ ಹೊಳೆ ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಪೂಜೆ ಮತ್ತು ದರ್ಶನಕ್ಕಾಗಿ ವೀರಶೈವ ಸಮಾಜ ವಿಶೇಷ ವ್ಯವಸ್ಥೆ ಮಾಡಿತ್ತು. ಕಳೆದ ವರ್ಷದ ಹೋಲಿಕೆಯಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರೂ ಬೆಳಗಿನಿಂದ ರಾತ್ರಿ ಪೂರ್ತಿ ಭಕ್ತರು ಸರತಿ ಸಾಲಿನಲ್ಲಿ ಬಂದು ಈಶ್ವರ, ಗಣಪತಿ ಮತ್ತು ನಾಗದೇವತೆಯ ವಿಗ್ರಹಗಳಿಗೆ ಕೈಮುಗಿದು ಪಕ್ಕದಲ್ಲೇ ಏರ್ಪಡಿಸಿದ್ದ ರುದ್ರಹೋಮದಲ್ಲಿಯೂ ಪಾಲ್ಗೊಂಡರು.
ಕಾಗದನಗರದ ಈಶ್ವರ ದೇವಸ್ಥಾನದಲ್ಲಿಯೂ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಇಲ್ಲಿ ಗುರು ಆರ್ಟ್ಸ್ ಬ್ರದರ್ಸ್ ಅಲಂಕರಿಸಿದ್ದ ಕೈಲಾಸ ದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಮಹಾಶಿವರಾತ್ರಿ ಪ್ರಯುಕ್ತ ರುದ್ರಹೋಮ ಹಾಗೂ ಯಮಪೂಜೆಯನ್ನು ಹೊಸಮನೆ ಎನ್ಎಂಸಿ ಎಡಭಾಗದಲ್ಲಿರುವ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು. 108 ಕಳಶಗಳನ್ನು ಪ್ರತಿಷ್ಠಾಪಿಸಿ 108 ಲೀಟರ್ ಹಾಲಿನ ಅಭಿಷೇಕ ಮಾಡಿದ್ದು ಇಲ್ಲಿನ ವಿಶೇಷವಾಗಿತ್ತು. ರುದ್ರಹೋಮವನ್ನು ಇಲ್ಲಿಯೂ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಭದ್ರಾ ಶಿವಾಲಯ ಸಮಿತಿ ಹಾಗೂ ದೇವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್, ಸಮಿತಿ ಪದಾಧಿಕಾರಿಗಳು ಹಾಜರಿದ್ದು ಭಕ್ತರ ಅನುಕೂಲಗಳನ್ನು ಗಮನಿಸಿದರು.
ಶನೈಶ್ಚರ ಮಹಾತ್ಮೆ ಯಕ್ಷಗಾನ
ಕ.ಪ್ರ ವಾರ್ತೆ, ಭದ್ರಾವತಿ, ಮಾ.10
ಪಟ್ಟಣದ ಎಸ್ಎವಿ ಶಾಲಾ ಆವರಣದಲ್ಲಿ ಯಕ್ಷಕಾರಂಜಿ ಮತ್ತು ಭಕ್ತರು ಏರ್ಪಡಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಶನೈಶ್ಚರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರಸಂಗ ಯಶಸ್ವಿಯಾಗಿ ನಡೆಯಿತು.
ಧರ್ಮಸ್ಥಳದಿಂದ ತರಲಾಗಿದ್ದ ಶ್ರೀ ಮಹಾಗಣಪತಿಯ ಪೂಜೆ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿನಿಯೋಗಿಸಲಾಯಿತು.
ನಂತರ ಸಂಜೆ 5.30ಕ್ಕೆ ಅಲ್ಲಿ ಸ್ಥಾಪಿಸಿದ್ದ ಮಹಾಗಣಪತಿಯನ್ನು ರಾಜಬೀದಿ ಉತ್ಸವದಲ್ಲಿ ಕೊಂಡೊಯ್ದು ಎಸ್ಎವಿ ಶಾಲಾ ಅವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಯೂ ಪೂಜೆ ಮುಗಿದ ನಂತರ ರಾತ್ರಿ 9.30ಕ್ಕೆ ಯಕ್ಷಗಾನ ಪ್ರಾರಂಭವಾಯಿತು.
ಶನಿಕಾಟ ಯಾರನ್ನೂ ಬಿಡದು ಹಾಗೂ ದೈವಭಕ್ತಿ ಇರುವವರಿಗೆ ಶನಿಕಾಟದ ಪ್ರಭಾವ ಕಡಮೆಯಾಗುವುದು ಎಂಬ ಸಂದೇಶವನ್ನು ಸಾರುವ ಈ ಯಕ್ಷಗಾನ ಬಯಲಾಟದ ಪಾತ್ರಗಳು ಜೀವಂತವಾಗಿ ಕಂಡುಬಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಶನಿ ವೇಷದಲ್ಲಿ ನಿಡ್ಲೆ ಗೋವಿಂದಭಟ್ ಹಾಗೂ ಈಶ್ವರನ ವೇಷದಲ್ಲಿ ಚಂದ್ರಶೇಖರ ಧರ್ಮಸ್ಥಳ ಕಾಣಿಸಿಕೊಂಡರು. ಉಳಿದ ಪಾತ್ರಧಾರಿಗಳ ಯಕ್ಷಗಾನ ನೈಪುಣ್ಯತೆಯೂ ಅತಿ ಪ್ರೌಢಿಮೆಯಿಂದ ಕೂಡಿತ್ತು.
ಶಾಸಕ ಬಿ.ಕೆ. ಸಂಗಮೇಶ್ವರ ಸೇರಿದಂತೆ ಪಟ್ಟಣದ ನಾಗರಿಕರು ಯಕ್ಷಗಾನ ಬಯಲಾಟವನ್ನು ನೋಡಿ ಆನಂದಿಸಿದರು.