ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಲ್ಕು ಸ್ವರ್ಣ ಪದಕ ಪಡೆದ ರೈತನ ಮಗ

Srinivasa Murthy VN
Updated On : 13 Mar 2013, 10:23 am

ಶಿವಮೊಗ್ಗ: ಮಗ ಎಲ್ಲಿಯವರೆಗೆ ಬೇಕಾದರೂ ಓದಲಿ. ನಾನು ಓದಿಸುತ್ತೇನೆ. ನಾನು 1977ರಲ್ಲಿಯೇ ಬಿಎ ಪದವಿ ಪಡೆದಿದ್ದೆ. ಕುಟುಂಬದ ಕೆಲಸ ನಿರ್ವಹಿಸುವುದಕ್ಕಾಗಿ ಮುಂದಕ್ಕೆ ಓದಲಾಗದೇ ಕೃಷಿ ಕೆಲಸಕ್ಕೆ ಬಂದೆ. ನನ್ನ ಕೈಲಿ ಸಾಧ್ಯವಾಗದಿರುವುದನ್ನು ನನ್ನ ಮಗ ಮಾಡಬೇಕೆಂಬುದು ನನ್ನ ಆಸೆ...
ಇದು ಕುವೆಂಪು ವಿವಿ ಘಟಿಕೋತ್ಸವದಲ್ಲಿ ನಾಲ್ಕು ಸ್ವರ್ಣ ಪದಕ ಪಡೆದ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಶ್ರೀಧರ ಯಲ್ಲಪ್ಪ ಭಂಡಿವಾಡ ಅವರ ತಂದೆ ಯಲ್ಲಪ್ಪ ಬಸಪ್ಪ ಭಂಡಿವಾಡ ಅವರ ಮಾತು.
6 ಎಕರೆ ಒಣಭೂಮಿ ಹೊಂದಿರುವ ರೈತರಾದ ಇವರು ನಾಲ್ಕು ಸ್ವರ್ಣ ಪದಕ ಪಡೆದ ಮಗನೊಂದಿಗೆ ನಿಂತು ಹೆಮ್ಮೆಯಿಂದ ಬೀಗುತ್ತಿದ್ದರು.
ಶ್ರೀಧರ ಬಂಡಿವಾಡ ಅವರಿಗೆ ಎಂಟೆಕ್ ಮಾಡುವ ಆಸೆ ಇದೆ. ಆದರೆ, ಅದಕ್ಕಿಂತ ಮುಂಚೆ ವಿದ್ಯಾಭ್ಯಾಸ ಸಾಲ ತೀರಿಸಬೇಕು. ಹಾಗಾಗಿ ಸದ್ಯ ಬೆಂಗಳೂರಿನ ಬಿಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ವಂದನಾಗೆ ನಾಲ್ಕು ಸ್ವರ್ಣ: ಇನ್ನು ಕನ್ನಡ ವಿಭಾಗದಲ್ಲಿ ನಾಲ್ಕು ಸ್ವರ್ಣ ಪದಕ ಪಡೆದಿರುವ ವಂದನಾ ಎಂ.ಎನ್. ಅವರು ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಮೇಲ್ಪಾಲ್ ಎಂಬ ಕುಗ್ರಾಮದವರು. ಕೊಪ್ಪ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಇವರಿಗೆ ನಾಲ್ಕು ಸ್ವರ್ಣ ಬರುವ ನಿರೀಕ್ಷೆ ಇರಲಿಲ್ಲ. ಕಷ್ಟಪಟ್ಟು ಓದಿದ್ದರಿಂದ ಸಿಕ್ಕಿದೆ. ಸಂತೋಷವಾಗಿದೆ ಎನ್ನುತ್ತಾರೆ ಅವರು. ಇವರ ತಂದೆ ನಾರಾಯಣ ಬಿ. ಅವರು ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದರೆ, ತಾಯಿ ಸುಧಾಮಣಿ ಅವರು ಪ್ರಾಥಮಿಕ ಶಾಲೆ ಶಿಕ್ಷಕಿ.
ನಾಲ್ಕು ಸ್ವರ್ಣ ಪಡೆದಿರುವ ಸುನಿಲ್ ಕುಮಾರ್ ಎಸ್. ಅವರು ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ. ನಾನೇ ಆಸಕ್ತಿಯಿಂದ ಈ ಕಾಲೇಜು ಸೇರಿದೆ. ಮುಂದೆ ಗ್ರಾಫಿಕ್ ಡಿಸೈನರ್ ಆಗುವ ಆಸೆ ಇದೆ ಎನ್ನುತ್ತಾರೆ ಅವರು.
ಸಮಾಜಶಾಸ್ತ್ರ ವಿಭಾಗದ ರವಿ ಎಚ್.ಆರ್., ವಾಣಿಜ್ಯ ವಿಭಾಗದ ಶ್ರೀಕಾಂತ್ಕಾಮತ್, ಬಿಇ ಮೆಕ್ಯಾನಿಕಲ್ ವಿಭಾಗದ ಸುನಿಲ್ ರಾಮಚಂದ್ರ ಮಹೇಂದ್ರಕರ್, ಉರ್ದು ವಿಭಾಗದ ಶಹಿನಾ ಬೇಗಂ, ಇಂಗ್ಲಿಷ್ ವಿಭಾಗದ ನೂರ್ ಉಲ್ ಹದಾ, ರಸಾಯನ ಶಾಸ್ತ್ರ ವಿಭಾಗದ ಸಾರಿಕ, ಶ್ರೀಪ್ರಧ, ಬಯೋಟೆಕ್ನಾಲಜಿ ವಿಭಾಗದ ಸೀಮಾಶ್ರೀ ಎಂ.ಎಚ್, ಎಂಬಿಎ ಅಧ್ಯಯನ ವಿಭಾಗದ ಸೀಮಾ ಭಟ್ ಅವರು ತಲಾ ಮೂರು ಸ್ವರ್ಣ ಪದಕ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement