ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿರೀಕ್ಷೆಗೆ ತಕ್ಕ ಆಡಳಿತಕ್ಕೆ ಕಾಂಗ್ರೆಸ್ ಸಿದ್ಧ: ಶ್ರೀನಿವಾಸ್

Srinivasa Murthy VN
Updated On : 13 Mar 2013, 10:23 am

ಸಾಗರ: ನಗರಸಭೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ತೀ.ನ.ಶ್ರೀನಿವಾಸ್ ಹೇಳಿದರು.
    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ವಿತರಣೆ, ಘನತ್ಯಾಜ್ಯ ವಿಲೇವಾರಿ, ನಿವೇಶನರಹಿತರಿಗೆ ನಿವೇಶನ ಹಂಚಿಕೆ, ಆಧಾರ ಕಾರ್ಡ್ ವಿತರಣೆ, ಸಂತೆಮೈದಾನ ನಿರ್ಮಾಣ ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.
ಸಮಿತಿ ರಚನೆ ಉದ್ದೇಶ: ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದವಿಲ್ಲ ಎಂದ ತೀ.ನ. ಎಲ್ಲಾ ಸದಸ್ಯರು ಸ್ಥಳೀಯ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ವಿಚಾರಿಸುವ ಜೊತೆಗೆ ಆಗಬೇಕಾದ ಕೆಲಸಗಳು, ಸಮಸ್ಯೆಗಳನ್ನು ಬಗೆಹರಿಸಲು ತೆಗೆದುಕೊಳ್ಳಬೇಕಾದ ಕ್ರಮ ಕುರಿತು ಚರ್ಚೆ ನಡೆಸಿ, ಪ್ರತಿ ವಾರ್ಡ್‌ನಲ್ಲೂ ನಾಗರಿಕ ಸಮಿತಿ ರಚನೆ ಮಾಡುವ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ಮುಂದಿನ ಕಾರ್ಯಯೋಜನೆ ವಿವರಿಸಿದರು.
   ಬಿಜೆಪಿ ಆಡಳಿತದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ನಿವೇಶನ ಮಾರಾಟ, ಲೇಔಟ್‌ಗಳ ನಿರ್ಮಾಣದ ಬಗ್ಗೆ ಹಿಂದೆ ನಡೆದಿದೆ ಎನ್ನಲಾಗುವ ಹಗರಣಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ ಅವರು, ಈಗಾಗಲೇ ಜಿಲ್ಲೆಯ ಶಿಕಾರಿಪುರ, ತೀರ್ಥಹಳ್ಳಿ, ಶಿವಮೊಗ್ಗ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕನ್ನಡ ಗಂಗ ಯೋಜನೆ ಜಾರಿಗೆ ಬಂದಿದೆ. ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಸಹ ಕನ್ನಡ ಗಂಗ ಯೋಜನೆ ಅನುಷ್ಠಾನಕ್ಕೆ ತರಲು ಗಮನ ಹರಿಸಲಾಗುವುದು. ಇದರಿಂದ ನಗರದ ಜನರಿಗೆ ದಿನದ 24 ಗಂಟೆಯೂ ಸಮರ್ಪಕ ನೀರು ವಿತರಣೆಗೆ ಅನುಕೂಲವಾಗುತ್ತದೆ ಎಂದರು.
  ಕಾಗೋಡು ತಿಮ್ಮಪ್ಪನವರ ನಿರಂತರ ಹೋರಾಟ ಹಾಗೂ ಹಿಂದೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬರಲು ಕಾರಣವಾಗಿದೆ. ಕಾಂಗ್ರೆಸ್‌ಗೆ ಬಹುಮತ ನೀಡಿರುವ ನಗರದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.  ನಗರಸಭೆ ಸದಸ್ಯರಾದ ಸುಂದರಸಿಂಗ್, ವಿ. ಗುರು, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ವಿನೋದಾ ರುದ್ರಪ್ಪ, ವಿಲ್ಸನ್, ಗುಡ್ಡೆಮನೆ ನಾಗರಾಜ್, ಮಹಾಬಲೇಶ್ವರ ಶೇಟ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement