ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ದುರಾಡಳಿತ: ಆರೋಪ

Srinivasa Murthy VN
Updated On : 13 Mar 2013, 10:24 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.12
ಶಿವಮೊಗ್ಗ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೇಳ ಹೆಸರಿಲ್ಲದಂತೆ ಧೂಳೀಪಟವಾಗಿದೆ. ಬಿಜೆಪಿ  ದುರಾಡಳಿತದಿಂದ ಬೇಸತ್ತಿರುವ ಶಿವಮೊಗ್ಗ ನಗರದ ನಾಗರಿಕರು ನಗರಸಭೆ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸೇವಾದಳ  ಸಮನ್ವಯ ಸಮಿತಿ ಸದಸ್ಯ ವೈ.ಎಚ್. ನಾಗರಾಜ್ ತಿಳಿಸಿದ್ದಾರೆ.
   ನಗರಸಭೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಹಲವು ಭ್ರಷ್ಟಾಚಾರ ನಡೆಸಿದ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಹಸಿರೀಕರಣ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿಕೊಂಡರು.
    ಹಗರಣದ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಮಾಡಲು ನಿರಾಕರಿಸಿದ ಹಿಂದಿನ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿಯವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಲಾಯಿತು. ಈ ವರ್ಗಾವಣೆಗೆ ಸ್ಥಳೀಯ ಶಾಸಕ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇರ ಕಾರಣಕರ್ತರಾಗಿದ್ದರು. ವೇದಮೂರ್ತಿ ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ನಾಗರಿಕರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
   ಬಿಜೆಪಿ ಹಾಗೂ ಶಾಸಕರ ತುಘಲಕ್ ದರ್ಬಾರ್ ಗಮನಿಸುತ್ತಿದ್ದ ಶಿವಮೊಗ್ಗ ನಾಗರಿಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ.
  ಈ ಫಲಿತಾಂಶವೂ ಮುಂದಿನ ವಿಧಾನಸಭೆ ಚುನಾವಣೆ ಮೇಲೂ ಪ್ರಭಾವ ಬೀರುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ನಗರದಲ್ಲಿ ಪರಾಭವಗೊಳ್ಳುವುದು ನಿಶ್ಚಿತ. ನಾಗರಿಕರು ಅವರಿಗೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗಿದ್ದಾರೆ ಎಂದು ವೈ.ಎಚ್. ನಾಗರಾಜ್ ತಿಳಿಸಿದ್ದಾರೆ.

ಇಂದಿನಿಂದ ಪಿಯು ಪರೀಕ್ಷೆ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.12
ಮಾ.13ರಿಂದ 28ರವರೆಗೆ ಜಿಲ್ಲೆಯ ಒಟ್ಟು 32 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ನಡೆಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಕೆ. ನಾಗರಾಜ್ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರಗಳು, ಭದ್ರಾವತಿ ತಾಲೂಕಿನಲ್ಲಿ 7 ಕೇಂದ್ರಗಳು, ತೀರ್ಥಹಳ್ಳಿ ಮತ್ತು ಶಿಕಾರಿಪುರ ತಾಲೂಕಿನಲ್ಲಿ ತಲಾ 3 ಕೇಂದ್ರಗಳು, ಹೊಸನಗರ ಮತ್ತು ಸೊರಬ ತಾಲೂಕಿನಲ್ಲಿ ತಲಾ 2 ಕೇಂದ್ರಗಳು ಹಾಗೂ ಸಾಗರ ತಾಲೂಕಿನಲ್ಲಿ 4 ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.   
  ಅವರು, ಪರೀಕ್ಷಾ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ತಂಡವಲ್ಲದೆ ಪ್ರತ್ಯೇಕ 10 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಪ್ರಾಂಶುಪಾಲರು ಹಾಗೂ ಮೂರು ಜನ ಉಪನ್ಯಾಸಕರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಹೊಸ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಕಲಾ ವಿಭಾಗದಲ್ಲಿ 7256, ವಾಣಿಜ್ಯ ವಿಭಾಗದಲ್ಲಿ 5518, ವಿಜ್ಞಾನ ವಿಭಾಗದಲ್ಲಿ 5492 ಅಭ್ಯರ್ಥಿಗಳು ಸೇರಿದಂತೆ ಒಟ್ಟು 18,266 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement