ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಮೊಗ್ಗದಲ್ಲಿ 'ಚಿನ್ನ'ದ ಕಳೆ

Srinivasa Murthy VN
Updated On : 14 May 2013, 11:47 am

ಶಿವಮೊಗ್ಗ: ಸೋಮವಾರ ಶಿವಮೊಗ್ಗದ ಚಿನಿವಾರ ಪೇಟೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಯುಗಾದಿ, ಸಂಕ್ರಾಂತಿ, ದಸರಾ ಹಬ್ಬ ಒಟ್ಟಿಗೆ ಬಂದಂತೆ ಕಳೆಕಟ್ಟಿತ್ತು.
ಅಕ್ಷಯ ತದಿಗೆ ದಿನದಂದು ಚಿನ್ನದಾಭರಣ ಖರೀದಿಸಿದರೆ ಐಶ್ವರ್ಯ, ಸಂಪತ್ತು ವೃದ್ಧಿಸುತ್ತಂತೆ ಎಂಬ ನಂಬಿಕೆಯ ಸಂಪೂರ್ಣ ಲಾಭ ಪಡೆಯಲು ಮುಂದಾದ ಚಿನ್ನದಾಭರಣದ ಮಳಿಗೆಗಳು ಗ್ರಾಹಕರನ್ನು ಸೆಳೆಯಲು ವಾರದ ಮುಂಚಿನಿಂದಲೇ ಗಾಳ ಹಾಕಿದ್ದರು. ರಿಯಾಯಿತಿಗಳು, ಆಕರ್ಷಣೆಗಳನ್ನು ಪ್ರಕಟಿಸಿದ್ದರು. ಅದರಂತೆ ಗ್ರಾಹಕರೂ ಸಹ ಕೈಯಲ್ಲಿ ಕಾಸಿಲ್ಲದಿದ್ದರೂ ಸಾಲಸೋಲ ಮಾಡಿಯಾದರೂ ಐಶ್ವರ್ಯವನ್ನು ಮನೆಯಲ್ಲಿ ಕಟ್ಟಿಹಾಕುವ ಉದ್ದೇಶದಿಂದ ಸೋಮವಾರ ಆಭರಣ ಮಳಿಗೆಗಳಿಗೆ ದಾಂಗುಡಿ ಇಟ್ಟಿದ್ದರು.
ಶಿವಮೊಗ್ಗ ಮಾರುಕಟ್ಟೆ: ಶಿವಮೊಗ್ಗ ಚಿನಿವಾರ ಪೇಟೆಯ ವ್ಯಾಪ್ತಿ ದೊಡ್ಡದು. ಜಿಲ್ಲೆಯ ಏಳು ತಾಲೂಕು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕು, ನೆರೆಯ ದಾವಣಗೆರೆ ಜಿಲ್ಲೆಯ ಎರಡು ತಾಲೂಕು ಮತ್ತು ಸಣ್ಣಪುಟ್ಟ ಪಟ್ಟಣಗಳು ನೆಚ್ಚಿಕೊಂಡಿರುವುದು ಶಿವಮೊಗ್ಗದ ಚಿನಿವಾರ ಪೇಟೆಯನ್ನೇ.
ಇಲ್ಲಿನ ಸಾಂಪ್ರದಾಯಿಕ ಚಿನ್ನಬೆಳ್ಳಿ ವ್ಯಾಪಾರಸ್ಥರ ಮೇಲೆ ಮುಂಚಿನಿಂದಲೂ ಗ್ರಾಹಕರಿಗೆ ಹೆಚ್ಚಿನ ನಂಬಿಕೆ. ಇವರೊಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಬೇರು ಬಿಡುತ್ತಿರುವ ದೊಡ್ಡ ದೊಡ್ಡ ಚಿನ್ನಬೆಳ್ಳಿ ಆಭರಣ ಮಳಿಗೆಗಳು ವಹಿವಾಟು ಹೆಚ್ಚಾಗಲು ಕಾರಣವಾಗಿದೆ.
ಶೇ.20 ರಿಂದ 35 ಹೆಚ್ಚಳ: ಸೋಮವಾರ ಮುಂಜಾನೆಯಿಂದಲೇ ಅಂಗಡಿ ಮುಂದೆ ಜನರು ಜಮಾಯಿಸಿದ್ದರು. ಗೋಪಿವೃತ್ತದ ಬಳಿಯ ಪ್ರಮುಖ ಚಿನ್ನಬೆಳ್ಳಿ ಆಭರಣ ಮಳಿಗೆಯಲ್ಲಂತೂ ಜನಜಾತ್ರೆ. ಅಕ್ಷಯ ತೃತೀಯ ಸಂದರ್ಭದಲ್ಲಿ ದಿನನಿತ್ಯದ ವಹಿವಾಟಿಗಿಂತ ಶೇ.20ರಿಂದ 35ರಷ್ಟು ಚಿನ್ನ ಮಾರಾಟ ಹೆಚ್ಚಾಗಲಿದೆ ಎಂಬುದು ಚಿನ್ನಬೆಳ್ಳಿ ವರ್ತಕ ಮಂಜಣ್ಣ ಹೇಳುತ್ತಾರೆ.
ದೇಶದ ಪ್ರಮುಖ ನಗರಗಳಂತೆ ಇಲ್ಲೂ ಸಹ ಅಡ್ವಾನ್ಸ್ ಬುಕ್ಕಿಂಗ್ ಸಹ ನಡೆದಿತ್ತು. ಈ ಹಬ್ಬದ ಸಂದರ್ಭದಲ್ಲಿ ಶೇ.10-25 ರಷ್ಟು ಅಡ್ವಾನ್ಸ್ ಬುಕ್ಕಿಂಗ್ ಹೆಚ್ಚಳ ಕಂಡು ಬಂದಿದೆ ಎಂದು ಹೇಳಿದರು. ವಿಶೇಷ ಎಂಬಂತೆ ಚಿನ್ನದ ಆಭರಣದಷ್ಟೇ ಚಿನ್ನದ ನಾಣ್ಯದ ಖರೀದಿ ಭರಾಟೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement