ಸಾಮಾಜಿಕ ಬದಲಾವಣೆ ಹರಿಕಾರ
ಕ.ಪ್ರ. ವಾರ್ತೆ ಮೊಳಕಾಲ್ಮುರು ಮೇ 13
ವಚನ ಸಾಹಿತ್ಯದ ಮುಖೇನ ದುರ್ಬಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದವರು ಬಸಣ್ಣನವರು. ಅವರು ಮಹಾ ಮಾನವತಾವಾದಿಗಳಾಗಿ ಪ್ರಜ್ವಲಿಸಿದಂಥವರು ಎಂದು ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಸವಣ್ಣನವರ ಜಯಂತ್ಸುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಜಾತಿಯ ಸಂಘರ್ಷದಲ್ಲಿದ್ದಾಗ ತನ್ನ ವಚನಗಳನ್ನು ಅಭಿವ್ಯಕ್ತಗೊಳಿಸಿ ಸಮಾಜದ ಬದಲಾವಣೆ ಬಯಸಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ಸಾಮಾಜಿಕವಾಗಿ, ಧಾರ್ಮಿಕವಾಗಿ, ಎಲ್ಲಾ ವರ್ಗದ ಜಾತಿಯ ಜನರನ್ನು ಅನುಭವ ಮಂಟಪದಡಿಯಲ್ಲಿ ಕೂರಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು.
ಜಾತಿಯ ವಿಷ ಬೀಜವನ್ನು ಹೋಗಲಾಡಿಸಲು ಎಷ್ಟೇ ಪ್ರಯತ್ನಿಸಿದರೂ ಜಾತೀಯತೆಯನ್ನು ಹೋಗಲಾಡಿಸಲು ಇಂದಿಗೂ ಸಾಧ್ಯವಾಗಿಲ್ಲ. ಒಳಪಂಗಡಗಳ ವೈಮನಸ್ಸುಗಳಿಂದಾಗಿ ಸಮಾಜದ ಬದಲಾವಣೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ವೃತ್ತಿಗೆ ಗೌರವ ನೀಡಿ: ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ, ವಾತ್ಸಲ್ಯಗಳು ಬೆರೆತು ಧರ್ಮಗಳನ್ನು ಗೌರವಿಸುವಂತಹ ಶೇಷ್ಠ ಧರ್ಮವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಕಲ್ಯಾಣ ರಾಜ್ಯದ ಪ್ರಧಾನಿಗಳಾದ ಬಸವಣ್ಣನವರು ಕಾಯಕದ ಮೂಲಕ ಕೈಲಾಸ ಕಂಡಂತಹವರು. ಮನುಷ್ಯ ಮಾಡುವ ವೃತ್ತಿಯ ಬಗ್ಗೆ ಗೌರವ ಮೂಡಿಸಿಕೊಳ್ಳಬೇಕು. ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಸ್ವಾಮೀಜಿಗಳಾಗಲಿ ಎಲ್ಲರೂ ಸಹ ಸಮಾಜದಲ್ಲಿ ಸೇವೆ ಮಾಡಲಿಕ್ಕೆ ನಿಯೋಜನೆಗೊಂಡಂಥವರು ಎಂದರು.
ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ವಿನಯ ಮೈಗೂಡಿಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಬೇಕು. ಬಸವಣ್ಣನವರ ಆದರ್ಶಗಳನ್ನು ಪಾಲಿಸಿ ದುಶ್ವಟಗಳಿಂದ ದೂರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲಕ್ಷ್ಮಿ ನರಸಿಂಹಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ಚಂದ್ರಕಾಂತ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷ ಪಿ.ಎಂ. ಚಂದ್ರಶೇಖರ್, ಇ.ಓ. ಅಂಜನಕುಮಾರ್, ಬಿ.ಇ.ಓ ಉಮಾದೇವಿ ಬಿ., ಸಿ.ಪಿ.ಐ. ಮಂಜುನಾಥ, ಜಿಂಕಾ ಶ್ರೀನಿವಾಸ್, ಮೊಹಮ್ಮದ್ ಖಾಸಿಂ, ವಿನಯ್ ಕುಮಾರ್, ಕೆ.ಜಿ. ಪಾರ್ಥಸಾರಥಿ, ಬಿ.ಆರ್.ಸಿ. ನಯಿಮ್-ಉರ್ ರೆಹಮಾನ್, ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಚಿತ್ರದುರ್ಗ: ಜಿಲ್ಲೆಯಲ್ಲಿ ಮೂರನೇ ಬಾರಿಗೆ ಸತ್ಯಮೇವ ಜಯತೆ ಸ್ಪರ್ಧಾತ್ಮಕ ತರಬೇತಿ ಕೇಂದ್ರದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಡಿ.ಇಡಿ ಕೋರ್ಸ್ ಮುಗಿಸಿರುವ ಸ್ಪರ್ಧಾಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಬೋಧನೆಯಲ್ಲಿ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಳ್ಳಲು ವಿಶೇಷ ಉಪನ್ಯಾಸಕರನ್ನು ಕರೆಸಲಾಗುತ್ತದೆ.
ಸ್ಪರ್ಧಾಚೈತ್ರ ತರಬೇತಿ ಕೇಂದ್ರದಿಂದ ಉಪನ್ಯಾಸಕರನ್ನು ಸಹ ಕರೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಬಿರಕ್ಕೆ ಭಾಗವಹಿಸುವ ಸ್ಪರ್ಧಾಕಾಂಕ್ಷಿಗಳ ಪೈಕಿ ಮೊದಲ ನೂರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶವಿರುತ್ತದೆ. ಈ ಕೇಂದ್ರಕ್ಕೆ ಹೆಸರನ್ನು ನೋಂದಾಯಿಸಲು ಮೇ 14 ರಿಂದ 31ರೊಳಗೆ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ 99028 11596, 91645 08558, 80501 00812 ಸಂಪರ್ಕಿಸಲು ಅಧ್ಯಕ್ಷ ಓ. ಪ್ರತಾಪ್ ಜೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.