ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಲೆಗಳಿಗೆ ಸಕಾಲದಲ್ಲಿ ಅನುದಾನ

Srinivasa Murthy VN
Updated On : 26 May 2013, 10:27 am

ಸರ್ಕಾರಿ, ಅನುದಾನಿತ, ಸ್ಥಳೀಯ ಸಂಸ್ಥೆಗಳ ಎಸ್‌ಡಿಎಂಸಿ ಖಾತೆಗೆ ನೇರ ಹಣ ಜಮೆಗೆ ಚಿಂತನೆ
-ಶ್ರೀಕಾಂತ ಭಟ್/ ಆತ್ಮಭೂಷಣ್
ಶಿವಮೊಗ್ಗ/ಮಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ, ಸ್ಥಳೀಯ ಸಂಸ್ಥೆಗಳ ಶಾಲೆಗಳಿಗೆ ಪ್ರತಿವರ್ಷ ತಲುಪುವ ವಾರ್ಷಿಕ ಅನುದಾನ ವಿಳಂಬವಾಗುವುದನ್ನು ತಡೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಸಾಲಿನಿಂದ ಪರ್ಯಾಯ ಕ್ರಮ ಅನುಸರಿಸುತ್ತಿದೆ.
ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಸಕಾಲದಲ್ಲಿ ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆಯಾದರೂ ಅದು ಶಾಲೆ ಹಂತ ತಲುಪುವುದಕ್ಕೆ ತೀರಾ ತಡವಾಗುತ್ತಿತ್ತು. ಇದರಿಂದ ಅನೇಕ ಸಂದರ್ಭದಲ್ಲಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮ, ಕಾಮಗಾರಿ ಮುಂತಾದ ಕಾರ್ಯಗಳಿಗೆ ತೊಡಕಾಗುತ್ತಿತ್ತು. ಈ ಬಗ್ಗೆ ಚರ್ಚೆ ನಡೆಸಿರುವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಅನುದಾನವನ್ನು ಶಾಲೆಯ ಖಾತೆಗೆ ನೇರವಾಗಿ ಜಮಾ ಮಾಡಲು ನಿರ್ಧರಿಸಿದ್ದಾರೆ.
ಖಾತೆಗೆ ವರ್ಗಾವಣೆ: ಸರ್ವ ಶಿಕ್ಷಣ ಅಭಿಯಾನ ಯೋಜನೆಯು ಪ್ರಾರಂಭವಾದ ಸಮಯದಿಂದ ಶಾಲೆಗಳಿಗೆ ಸಲ್ಲಬೇಕಾದ ವಾರ್ಷಿಕ ಅನುದಾನಗಳನ್ನು ಅಭಿಯಾನದ ಕಚೇರಿಯಿಂದ ಜಿಲ್ಲಾ ಕಚೇರಿಗೆ ಬಿಡುಗಡೆಯಾಗುತ್ತಿತ್ತು. ಜಿಲ್ಲಾ ಕಚೇರಿಯಿಂದ ಶಾಲೆಗಳಿಗೆ ಚೆಕ್ ಮೂಲಕ ಅಥವಾ ಸಂಬಂಧಿಸಿದ ಕಚೇರಿಯು ಹೊಂದಿರುವ ಬ್ಯಾಂಕ್ ಖಾತೆಯಿಂದ ನೇರವಾಗಿ ಜಿಲ್ಲಾ ಕಚೇರಿಗೆ ಅನುದಾನ ವರ್ಗಾಯಿಸಿ ಅಲ್ಲಿಂದ ಶಾಲೆಗಳ ಎಸ್‌ಡಿಎಂಸಿ ಖಾತೆಗೆ ವರ್ಗಾಯಿಸಲಾಗುತ್ತಿತ್ತು.
ಆದರೆ, 2013-14ನೇ ಸಾಲಿನಲ್ಲಿ ವಾರ್ಷಿಕ ಅನುದಾನಗಳಲ್ಲಿ ಜಿಲ್ಲೆಗಳ ಮೂಲಕ ಶಾಲೆಗೆ ವರ್ಗಾಯಿಸುವ ಬದಲು ಶಾಲೆಗಳ ಎಸ್‌ಡಿಎಂಸಿ ಖಾತೆಗೆ ನೇರವಾಗಿ ಇಸಿಎಸ್ (ಎಲೆಕ್ಟ್ರಾನಿಕ್ಸ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ವರ್ಗಾಯಿಸಲು ಸರ್ವ ಶಿಕ್ಷಣ ಅಭಿಯಾನ ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ನಿರ್ಧಾರ ಮಾಡಿದ್ದು, ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.
ಸಕಾಲದಲ್ಲಿ ತಲುಪುತ್ತದೆ: ರಾಜ್ಯ ಕಚೇರಿಯ ಬ್ಯಾಂಕ್ ಖಾತೆಯಿಂದ (ಕೆನರಾ ಬ್ಯಾಂಕ್, ಮಾಧವ ನಗರ, ಬೆಂಗಳೂರು ಶಾಖೆ) ನೇರವಾಗಿ ರಾಜ್ಯದಲ್ಲಿರುವ ಎಲ್ಲಾ ಶಾಲೆಗಳ ಎಸ್‌ಡಿಎಂಸಿ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ. ಇದರಿಂದ ಅನುದಾನವು ಸಂಬಂಧಿಸಿದ ಶಾಲೆಗಳಿಗೆ ಯಾವುದೇ ವಿಳಂಬ ಇಲ್ಲದೇ ಸಕಾಲದಲ್ಲಿ ತಲುಪುವುದಲ್ಲದೇ, ಕಾರ್ಯಕ್ರಮಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಹಕಾರಿಯಾಗುವುದು ಎಂದು ಸರ್ವಶಿಕ್ಷಣ ಅಭಿಯಾನ ಅಧಿಕಾರಿಗಳ ವಿವರಣೆ.
ಸೆಪ್ಟೆಂಬರ್ 30ರಂದು ಸಂಗ್ರಹಿಸಿದ ಡೈಸ್ ಅಂಕಿ-ಅಂಶಗಳ ಆಧಾರದ ಮೇರೆಗೆ ವಾರ್ಷಿಕ ಕ್ರಿಯಾ ಯೋಜನೆ 2013-14ರಲ್ಲಿ ಸಿದ್ಧಪಡಿಸಿದ್ದು, ಅದರ ಆಧಾರದಲ್ಲಿ ಅನುಮೋದನೆಗೊಂಡ ಶಾಲಾ ಅನುದಾನ, ನಿರ್ವಹಣಾ ಅನುದಾನ ಮತ್ತು ಸಮವಸ್ತ್ರ ಅನುದಾನಗಳನ್ನು ಮೊದಲ ಹಂತದಲ್ಲಿ ಖಾತೆಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.
ಮೊದಲ ಎರಡು ವಾರ: ಡೈಸ್ ಅಂಕಿ-ಅಂಶಗಳ ಆಧಾರದ ಮೇರೆಗೆ ಶಾಲೆಗೆ ಬಿಡುಗಡೆ ಮಾಡಬಹುದಾದ ಅನುದಾನದ ಮಾಹಿತಿಯನ್ನು ರಾಜ್ಯ ಕಚೇರಿಯ ಸಂಬಂಧಿಸಿದ ಕಾರ್ಯಕ್ರಮಾಧಿಕಾರಿಗಳಿಂದ ಸಿದ್ಧಪಡಿಸಿದಂತೆ ಲೆಕ್ಕಪತ್ರ ಶಾಖೆಯಿಂದ ಅನುದಾನ ವರ್ಗಾಯಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆ ಜೂನ್ 2013ರ ಮೊದಲ ಎರಡು ವಾರದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ರಾಜ್ಯ ಕಚೇರಿಯಿಂದ ಶಾಲೆಗಳಿಗೆ ನೇರವಾಗಿ ಅನುದಾನದ ವರ್ಗಾವಣೆಯಾದರೂ ಶಾಲೆಗೆ ಅನುದಾನ ವರ್ಗಾವಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು, ಅನುದಾನದ ಬಳಕೆ, ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಅನುಷ್ಠಾನ ಕಾರ್ಯ ಹಿಂದಿನಂತೆಯೇ ಬ್ಲಾಕ್ ಹಂತದ ಮತ್ತು ಜಿಲ್ಲಾ ಹಂತದ ಅಧಿಕಾರಿಗಳದ್ದೇ ಆಗಿರುತ್ತದೆ. ಜಿಲ್ಲೆಗಳಿಂದ ಅನುದಾನ ಬಿಡುಗಡೆ ಮಾಡಿರುವುದಿಲ್ಲ ಎಂಬ ವಿಳಂಬ ನೀತಿ ಅನುಸರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿನ ಸಿಬ್ಬಂದಿ ಅಥವಾ ಅಧಿಕಾರಿಗಳು ಮೇಲ್ವಿಚಾರಣೆ ಮಾಡುವ ಸಂದರ್ಭದಲ್ಲಿ ಅನುದಾನಗಳು ಶಾಲೆಗೆ ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯಮಾನುಸಾರ ಬಳಕೆ ಮಾಡುತ್ತಿರುವ ಬಗ್ಗೆ ಮೇಲ್ವಿಚಾರಣಾ ಸಂದರ್ಭದಲ್ಲಿ ಪರಿಶೀಲಿಸಿ ಕಾರ್ಯಕ್ರಮದ ಅನುಷ್ಠಾನ ಸರಿಯಾಗಿ ಆಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ಶಾಲೆಯಲ್ಲಿ ವೈಪರೀತ್ಯ ಕಂಡುಬಂದಲ್ಲಿ ಮೇಲ್ವಿಚಾರಣಾ ಸಿಬ್ಬಂದಿ, ಅಧಿಕಾರಿಯ ಕಾರ್ಯಲೋಪವೆಂದು ಪರಿಗಣಿಸಲಾಗುವುದೆಂದು ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಚೇರಿ ಎಚ್ಚರಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಾಲಾ ಅನುದಾನ ಮಂಜೂರಾಗಿದ್ದು, ಘಟಕ ವೆಚ್ಚ- ಕಿರಿಯ ಪ್ರಾಥಮಿಕ ಶಾಲೆಗೆ 5 ಸಾವಿರ, ಹಿರಿಯ ಪ್ರಾಥಮಿಕ ಶಾಲೆಗೆ 7 ಸಾವಿರ ಆಗಿದೆ. ಶಾಲೆಯು 1ರಿಂದ 7ನೇ ತರಗತಿ ಅಥವಾ 8ನೇ ತರಗತಿ ಹೊಂದಿದ್ದಲ್ಲಿ ಎರಡು ಘಟಕ ಎಂದು ಪರಿಗಣಿಸಿ 12 ಸಾವಿರ ಬಿಡುಗಡೆ ಮಾಡಲಾಗುತ್ತದೆ. ಶಾಲೆಗಳ ದಾಖಲೆ ಪುಸ್ತಕ, ಬೋಧನಾ ಉಪಕರಣ ಖರೀದಿಗೆ ಇದು ಉಪಯೋಗವಾಗಲಿದೆ.
ನಿರ್ವಹಣಾ ಅನುದಾನವನ್ನು ಸರ್ಕಾರಿ ಶಾಲೆಗಳಿಗೆ ಮಾತ್ರ ನೀಡಲಾಗುತ್ತದೆ. ಪ್ರತಿ ಘಟಕಕ್ಕೆ ಸರಾಸರಿ 7500 ನಂತೆ ಜಿಲ್ಲೆಗಳ ಶಾಲೆಗಳ ಸಂಖ್ಯೆಯನ್ನು ಆಧರಿಸಿ ಮಂಜೂರು ಮಾಡಲಾಗಿದೆ. ಕಟ್ಟಡ ರಕ್ಷಣೆ, ಸೌಂದರ್ಯ ಹೆಚ್ಚಿಸಲು (ಸುಣ್ಣ ಬಣ್ಣ, ದುರಸ್ತಿ, ದೂರವಾಣಿ ಬಿಲ್, ಕುಡಿವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ವಹಣೆ) ಉಪಯೋಗಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement