ತಣ್ಣಗಿದ್ದು ಪೊಲೀಸರಿಗೆ ಬಿಸಿ ಮುಟ್ಟಿಸಿದ ನಕ್ಸಲರು!
-ವಿಶೇಷ ವರದಿ
ಶಿವಮೊಗ್ಗ: ನೆರೆಯ ಆಂಧ್ರದಲ್ಲಿ ನಕ್ಸಲ್ ಚಟುವಟಿಕೆಯ ಮುಂಚೂಣಿ ನಾಯಕರ ಪೈಕಿ ಪ್ರಮುಖರಾದ ಗಣಪತಿ ಹಾಗೂ ರಮೇಶ್ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಾರ್ಯನಿರತರಾಗಿದ್ದಾರೆ ಎಂಬ ಸಂಶಯ ಪೊಲೀಸರಲ್ಲಿ ಮನೆ ಮಾಡಿದೆ. ಅದೇ ಹೊತ್ತಿನಲ್ಲಿ ಆಂಧ್ರದ ಗುಪ್ತಚರ ಪೊಲೀಸರು ಸದ್ದಿಲ್ಲದೇ ರಾಜ್ಯದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದಾರೆ.
ಆದರೆ, ನೆರೆ ರಾಜ್ಯದ ನಕ್ಸಲರ ಚಟುವಟಿಕೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ ಇಡುವಂತೆ ನಿರ್ದೇಶನ ಬಂದಿದೆ ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ನಿಷ್ಕ್ರಿಯರಂತಿದ್ದ ನಕ್ಸಲರು ಈಗ ಏಕಾಏಕಿ ತಮ್ಮ ಪ್ರಭಾವ ಅಲ್ಲಲ್ಲಿ ತೋರಿಸಲಾರಂಭಿಸಿದ್ದಾರೆ. ಈ ಮೂಲಕ ನಕ್ಸಲ್ ನಿಗ್ರಹ ಪಡೆಯ ನಿದ್ದೆಗೆಡಿಸಿದ್ದಾರೆ. ಮಲೆನಾಡಿನಲ್ಲಿ ನಕ್ಸಲರ ಬೇರನ್ನು ಕಿತ್ತೊಗೆಯುತ್ತೇವೆಂದು ಬೀಗುತ್ತಿದ್ದ ಸ್ಥಳೀಯ ಪೊಲೀಸರಿಗೆ ನಕಲ್ ವ್ಯಾಪ್ತಿ ಪ್ರದೇಶ ವಿಸ್ತಾರವಾಗುತ್ತಿರುವುದು ದೊಡ್ಡ ಸವಾಲು ಎನಿಸಲಾರಂಭಿಸಿದೆ. ಹಾಗೆಯೇ ನಕ್ಸಲ್ ವಿಚಾರವಾಗಿ ಇದೀಗ ಬರುತ್ತಿರುವ ಕೆಲ ಮಾಹಿತಿಗಳು ಇಲಾಖೆ ಅಧಿಕಾರಿಗಳನ್ನು ಗಂಭೀರವಾಗಿಸಿವೆ.
ಮಲೆನಾಡಿನಲ್ಲಿ ಕೇವಲ 38ರಿಂದ 40 ಜನ ನಕ್ಸಲರಿರಬಹುದೆಂಬ ಅಂದಾಜಿದೆ ಎಂದು ವರ್ಷದ ಕೆಳಗೆ ಮಾಹಿತಿ ನೀಡಿದ್ದ ಪೊಲೀಸ್ ಅಧಿಕಾರಿಗಳೇ ಇಂದು ಬೇರೆಯ ಮಾತನಾಡುತ್ತಿದ್ದಾರೆ. ಕನಿಷ್ಠ 60ರ ಸಂಖ್ಯೆ ದಾಟಿರಬಹುದು ಎಂದು ಬೆರಳೆಣಿಸುತ್ತಾರೆ. ನಕ್ಸಲ್ ಚಲನವಲನ ಗೌಣವಾಗಿತ್ತು. ಆದರೆ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ ಸರಿದು ಹೋಗುತ್ತಿದ್ದಂತೆ ಈಗ ಚುರುಕಾಗಿದ್ದಾರೆ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಪೊಲೀಸ್ ಮೂಲಗಳ ಖಚಿತ ಮಾಹಿತಿ.
ದಾರಿ ತಪ್ಪಿಸಿದ ನಕ್ಸಲರು
ಮೂರು ವರ್ಷದಲ್ಲಿ ನಕ್ಸಲರು ಸಂಘಟನೆಯನ್ನು ಬೆಳೆಸಲು ಮನಸ್ಸು ಮಾಡಲಿಲ್ಲ ನಿಜ. ಆದರೆ, ನಕ್ಸಲ್ ನಿಗ್ರಹ ಪಡೆಯ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡಿದ್ದಂತೂ ಹೌದು. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಗಡಿಭಾಗಗಳಲ್ಲಿ ನಕ್ಸಲರ ಸಂಪೂರ್ಣ ಜಾಡನ್ನು ಪೊಲೀಸರು ಹಿಡಿದಿದ್ದರು. ಹೀಗಾಗಿ ನಕ್ಸಲರು ತಣ್ಣಗಾಗಿದ್ದಾರೆ ಎಂದು ಪೊಲೀಸ್ ವಲಯದಲ್ಲಿ ಭಾವನೆ ಮೂಡಿತ್ತು. ಆದರೆ, ಪರಿಸ್ಥಿತಿ ಭಿನ್ನವಾಗಿದೆ. ಎಚ್ಚರಿಕೆಯಿಂದಿರುವಂತೆ ಸೂಚನೆಗಳು ಬರಲಾರಂಭಿಸಿವೆ.
ನಕ್ಸಲರ ತಾಲೀಮಿಗೆ ಕಂಗಾಲಾದ ಪೊಲೀಸರು
ಸ್ಥ್ಥಳೀಯ ನಕ್ಸಲ್ ಕೆಲವರು ಛತ್ತೀಸ್ಗಡಕ್ಕೆ ಹೋಗಿ ಬಂದಿರುವ ಮತ್ತು ಅಲ್ಲಿನ ಕೆಲವರು ಇಲ್ಲಿಗೆ ಬಂದು ಹೋಗುತ್ತಿರುವ ವಿಚಾರವನ್ನು ಪೊಲೀಸರು ಅಲ್ಲಗಳೆಯುತ್ತಿಲ್ಲ. ಈ ಚಟುವಟಿಕೆ ನಡೆದಿರುವ ಬಗ್ಗೆ ಸಂಶಯವಿದೆ. ಆದರೆ, ಯಾವುದೇ ಖಚಿತ ಪುರಾವೆ ಸಿಕ್ಕಿಲ್ಲ ಎಂಬ ಮಾಹಿತಿ ಪೊಲೀಸರಿಂದ ಬರುತ್ತದೆ.
ಶಿವಮೊಗ್ಗ ಜಿಲ್ಲೆಯ ಬಿದರಗೋಡು, ಧರ್ಮಸ್ಥಳ ವ್ಯಾಪ್ತಿಯಲ್ಲಿ ನಕ್ಸಲರು ಸಾಮಾನ್ಯರಂತೆ ಕಾಡಿನಿಂದ ಬಂದು ಹೋಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಆಂಧ್ರದ ಗುಪ್ತಚರ ವಿಭಾಗದ ಸಿಬ್ಬಂದಿ ಇಲ್ಲಿಗೆ ಆಗಮಿಸಿ ಮಾಹಿತಿ ಕಲೆ ಹಾಕಿರುವ ಸಂಗತಿಯೂ ಗೊತ್ತಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಆಂಧ್ರ ನಕ್ಸಲ್ ಮುಖಂಡರಿಬ್ಬರು ಸ್ಥಳೀಯ ನಕ್ಸಲರೊಂದಿಗೆ ಸಂಬಂಧದ ಹಿನ್ನೆಲೆಯಲ್ಲಿಯೇ ಆಂಧ್ರ ಪೊಲೀಸರು ಇಲ್ಲಿಗೆ ಬಂದು ಹೋಗಿದ್ದಾರೆ ಎಂಬುದು ಒಂದು ವಿಶ್ಲೇಷಣೆ. ಒಂದು ಕಾಲದಲ್ಲಿ ನಕ್ಸಲ್ ವಿಚಾರದಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ಇಂದು ನಕ್ಸಲ್ ಗುಪ್ತಚರ ಕಾರ್ಯ ಕುಸಿದಿದೆ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಗುಪ್ತಚರ ಮಾಹಿತಿ ಪಡೆಯಲು ಹಿನ್ನಡೆ ಅನುಭವಿಸುತ್ತಿರುವ ಬಗ್ಗೆ ಎಚ್ಚರಿಸಿದ್ದು, ಈ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲೂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದ ಮೇಲೆ ಹೆಚ್ಚಿನ ಗಮನ ಇಡಲಾಗಿದೆ. ಎಎನ್ಎಫ್, ಎಎನ್ಎಸ್ ತಂಡಗಳು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಕೂಂಬಿಂಗ್, ಪ್ಯಾಟ್ರೋಲಿಂಗ್ ಹೆಚ್ಚಿಸಲಾಗಿದೆ. ಡಿವೈಎಸ್ಪಿಯವರು ಖುದ್ದು ಮೇಲ್ವಿಚಾರಣೆಯಲ್ಲಿದ್ದಾರೆ. ನಾನು ಕೂಡ ವಾರದಲ್ಲೊಮ್ಮೆ ಹೋಗಿ ಬಂದಿದ್ದೇನೆ. ಈ ಪ್ರದೇಶದಲ್ಲಿ ನಿಗಾ ಇಡುವಂತೆ ಆಗಿಂದಾಗೆ ನಮಗೆ ಸೂಚನೆ ಬಂದಿದೆ.
-ಕೌಶಲೇಂದ್ರ ಕುಮಾರ್, ಶಿವಮೊಗ್ಗ ಎಸ್ಪಿ