ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾನು ಅಧ್ಯಯನ ವರದಿ ಜಾರಿಗೊಳಿಸಿ

Srinivasa Murthy VN
Updated On : 27 Nov 2013, 11:27 am

ಕ.ಪ್ರ.ವಾರ್ತೆ  ಶಿವಮೊಗ್ಗ  ನ. 26
ಶಿವಮೊಗ್ಗ ಜಿಲ್ಲೆ ಕಾನು ಅಧ್ಯಯನ ವರದಿ ನೀಡಿರುವ ಶಿಫಾರಸುಗಳನ್ನು ಅರಣ್ಯ ಇಲಾಖೆ ಜಾರಿ ಮಾಡಬೇಕು ಹಾಗೂ ಪಶ್ಚಿಮ ಘಟ್ಟದಲ್ಲಿ ಏಕಜಾತಿ ನೆಡುತೋಪು ನಿರ್ಮಾಣ ಮಾಡಬಾರದು ಎಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣ ನಿರ್ಣಯ ಕೈಗೊಂಡು ಸರ್ಕಾರವನ್ನು ಒತ್ತಾಯಿಸಿದೆ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅರಣ್ಯಗಳ ಜೀವ ವೈವಿಧ್ಯ ಕುರಿತು ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕೊನೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಉಳಿದಂತೆ, ಪಶ್ಚಿಮ ಘಟ್ಟದ (ವಿಶೇಷವಾಗಿ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ) ಜೀವ ವೈವಿಧ್ಯಗಳ ಅಧ್ಯಯನಗಳಿಗೆ ಇನ್ನಷ್ಟು ಆದ್ಯತೆ ನೀಡಬೇಕು. ಈಗಾಗಲೇ ಆಗಿರುವ ಹಲವು ಉಪಯುಕ್ತ ಅಧ್ಯಯನಗಳ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಅರಣ್ಯ- ಪರಿಸರ ಇಲಾಖೆಗಳು ಗಮನ ನೀಡಬೇಕು, ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ವಿಭಾಗಗಳಿಂದ ಕಳೆದ 10 ವರ್ಷಗಳಿಂದ ಕೈಗೊಳ್ಳಲಾಗಿರುವ ವಿಶೇಷ ಅಧ್ಯಯನಗಳ ಸಾರಾಂಶ- ನಿರ್ಣಯ ಕ್ರೋಢೀಕರಿಸಿ ಅಧ್ಯಯನಗಳ ಸಂಗ್ರಾಹ್ಯ ವರದಿ ಪ್ರಕಟಿಸಬೇಕು ಎಂದು ನಿರ್ಣಯಿಸಲಾಯಿತು.
ಸಮಾವೇಶ ನಡೆಸಿ: ಬಾಳೆಹೊನ್ನೂರಿನಲ್ಲಿ 2014 ಜನವರಿ 2ನೇ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪರಿಸರ ಕಾರ್ಯಕರ್ತರ ಸಮಾವೇಶ ನಡೆಸಬೇಕು. ಅಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪರಿಸ್ಥಿತಿ ಅಧ್ಯಯನ ಬಗ್ಗೆ ಇನ್ನಷ್ಟು ಸಮಾಲೋಚನೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು.
ಕೊಡಚಾದ್ರಿ, ದತ್ತ ಪೀಠದಂತಹ ಬೆಟ್ಟ ಪ್ರದೇಶಗಳ ಹುಲ್ಲುಗಾವಲು ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಅವಶ್ಯ ಎಂದು ವಿಚಾರ ಸಂಕಿರಣ ಅಭಿಪ್ರಾಯಪಟ್ಟಿದೆ. ಕೆರೆಗಳ ಪರಿಸ್ಥಿತಿ ಅಭ್ಯಾಸ ಮಾಡಲು ಹೈಸ್ಕೂಲು ಕಾಲೇಜುಗಳ ಎನ್‌ಎಸ್‌ಎಸ್ ಮತ್ತು ಇಕೋಕ್ಲಬ್‌ಗಳ ವಿದ್ಯಾರ್ಥಿಗಳು ಮುಂದಾಗುವಂತೆ ವಿಶೇಷ ಕಾರ್ಯಕ್ರಮ, ಶಿಬಿರ ಆಯೋಜಿಸಬೇಕು ಎಂದು ತೀರ್ಮಾನಿಸಲಾಯಿತು.
ವಿಸ್ತ್ರತ ಚರ್ಚೆ ನಡೆಯಲಿ: ಪಶ್ಚಿಮಘಟ್ಟದ ಕುರಿತ ಡಾ.ಕಸ್ತೂರಿ ರಂಗನ್ ವರದಿ ಬಗ್ಗೆ ವಿಸ್ತ್ರತ ಚರ್ಚೆ ನಡೆಯಬೇಕು ಎಂದು ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
2011ರಲ್ಲಿ ಅರಣ್ಯ ವಿಜ್ಞಾನಿ ಡಾ. ಮಾಧವ ಗಾಡ್ಗೀಳ ಅವರು ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಘಟ್ಟಗಳ ಅಧ್ಯಯನ, ಸಂರಕ್ಷಣೆಯ ವರದಿ ನೀಡಿದರು. ಆದರೆ. ಸರ್ಕಾರ ಉದ್ದಿಮೆದಾರರ ಒತ್ತಡದಿಂದ ಅದನ್ನು ತಿರಸ್ಕರಿಸಿ ಕಸ್ತೂರಿ ರಂಗನ್ ಅವರನ್ನು ವರದಿ ನೀಡಲು ಕೋರಿತು. ಈಗ ವರದಿಯನ್ನು ಕೇರಳ ಸರಕಾರ ತಿರಸ್ಕರಿಸಿದೆ. ಗಾಡ್ಗೀಳ ವರದಿಯಲ್ಲಿ ಪಶ್ಚಿಮ ಘಟ್ಟವನ್ನು ಮೂರು ಭಾಗ ಮಾಡಿ ಸಂರಕ್ಷಣೆಗೆ ಒತ್ತು ನೀಡಲಾಗಿತ್ತು. ಆದರೆ, ಕಸ್ತೂರಿ ರಂಗನ್ ವರದಿಯಲ್ಲಿ ಅದರ ಪ್ರಮಾಣ ಶೇಕಡಾ 35 ರಷ್ಟು ಮಾತ್ರ ಇತ್ತು. ಈಗ ಅದನ್ನೂ ವಿರೋಧಿಸಲಾಗುತ್ತಿದೆ. ಪಶ್ಚಿಮ ಘಟ್ಟ ಎಲ್ಲರಿಗೂ ಸೇರಿದ್ದು, ಇದರ ಬಗ್ಗೆ ಸಮಗ್ರವಾಗಿ ಚರ್ಚೆಯಾಗಬೇಕಿದೆ ಎಂದರು.
ಅಸಮಾಧಾನ: ಅರಣ್ಯ ಅಭಿವೃದ್ಧಿ ಕೂಡ ಒಂದು ಅಭಿವೃದ್ಧಿ ಯೋಜನೆ ಎಂದು ಪರಿಗಣಿಸಬೇಕು ಎಂದು ಹೇಳಿದ ಅವರು, ಪರಿಸರ ನಾಶ ಮಾಡಿ ಅಭಿವೃದ್ಧಿ ಸಾಧಿಸುವ ಪಾಶ್ಚಿಮಾತ್ಯ ಧೋರಣೆಯಿಂದ ಅರಣ್ಯ ನಾಶ ಹೊಂದುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶರಾವತಿ ಅಭಿವೃದ್ಧಿ ಸಂಸ್ಥೆಯ ಹಕ್ರೆ ಸುಬ್ಬರಾವ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಜೇನುಗಳ ಸಂತತಿ ಕ್ಷೀಣಿಸುತ್ತಿದೆ. ಯಾಕೆ ಹೀಗಾಗುತ್ತಿದೆ, ಅದಕ್ಕೆ ಕಾರಣಗಳೇನು ಎಂಬುದನ್ನು ಶೋಧಿಸಬೇಕಿದೆ. ಅರಣ್ಯದ ಮಧ್ಯೆ ಇರುವ ಕೆರೆಗಳು ಅರಣ್ಯ ನಾಶದಿಂದ ಹೂಳು ತುಂಬುತ್ತಿವೆ. ಇದರ ಸಂರಕ್ಷಣೆಯಾಗಬೇಕಿದೆ ಎಂದರು.
ಪಶ್ಚಿಮಘಟ್ಟ ಉಳಿಸಿ ಆಂದೋಲನದ ಗಜೇಂದ್ರ ಗೊರಸುಗುಡಿಗೆ, ಚಿಕ್ಕಮಗಳೂರು ಜಿಲ್ಲೆಯ ಪರಿಸರದ ಮಾಹಿತಿ ನೀಡುತ್ತಾ ಪರಿಸರ ವಿನಾಶದ ಅನೇಕ ಸಂಗತಿ ಜಿಲ್ಲೆ ಹೊಂದಿದೆ. ಜನಾಂದೋಲನದ ಮೂಲಕ ಕುದುರೆ ಮುಖ ಗಣಿಗಾರಿಕೆ ನಿಲ್ಲಿಸಲಾಗಿದೆ. ಗಣಿಗಾರಿಕೆಯಿಂದ ಬದ್ರಿ ಜಲಾಶಯದ ಆಯುಷ್ಯ ಕಡಿಮೆಯಾಗಿದೆ ಎಂದರು.
ವಿವಿಧ ಗೋಷ್ಠಿಗಳಲ್ಲಿ ಡಾ. ಟಿ.ವಿ. ರಾಮಚಂದ್ರ, ಡಾ. ಸುದರ್ಶನ, ಡಾ. ವಿನಾಯಕ ಕೆ.ಎಸ್. ಶಿಕಾರಿಪುರ, ಡಾ. ಸೈಯ್ಯದ, ಅಬ್ರಹಾಂ, ಡಾ. ಸೋಮಶೇಖರ ಆಚಾರ ಅವರು ಅರಣ್ಯ ಜೀವ ವೈವಿಧ್ಯತೆಯ ಅಧ್ಯಯನ ವಿವರ ಮಂಡಿಸಿದರು. ಸಂವಾದ ಗೋಷ್ಠಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಪರಿಸರ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement