ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫಲಿತಾಂಶ ಉತ್ತಮಪಡಿಸಲು ಚಿಂತಿಸಿ

Srinivasa Murthy VN
Updated On : 27 Nov 2013, 11:26 am

ಶಿವಮೊಗ್ಗ: ಸರ್ಕಾರಿ ಶಾಲಾ ಶಿಕ್ಷಕರು ವೇತನ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಳಿ ತೊಡಿಕೊಂಡರಷ್ಟೇ ಸಾಲದು. ಅದರೊಂದಿಗೆ ಶಾಲೆಗಳ ಫಲಿತಾಂಶವನ್ನು ಉತ್ತಮಪಡಿಸುವ ಕುರಿತೂ ಚರ್ಚಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಶಿಕ್ಷಕರಿಗೆ ಸಲಹೆ ನೀಡಿದರು.
 ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಡಿವಿಎಸ್ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ 2013-14 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ವೇತನ ಪಾವತಿಯಾಗುತ್ತಿಲ್ಲ ಎಂದಾಗ ಕೂಡಲೇ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಅದೇ ರೀತಿ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದರ ಕುರಿತು ಆಲೋಚನೆ ನಡೆಸಬೇಕು ಎಂದರು.  
ಜಿಲ್ಲೆಗೆ 26 ನೇ ಸ್ಥಾನ: ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 26ನೇ ಸ್ಥಾನಗಳಿಸಿದೆ. ಇದು ನಿರಾಶಾದಾಯಕ ಫಲಿತಾಂಶ. ಈ ಬಾರಿ ಇನ್ನೂ ಹೆಚ್ಚಿನ ಸಾಧನೆ ಮಾಡುವತ್ತ ಶಿಕ್ಷಕರು ಗಮನ ಹರಿಸಬೇಕಿದೆ. ಕುಡಿಯುವ ನೀರು, ಬಿಸಿಯೂಟ, ಸಮವಸ್ತ್ರ, ಶೌಚಾಲಯ, ಉತ್ತಮ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೂ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಫಲಿತಾಂಶ ಕಡಿಮೆ ಪ್ರಮಾಣದಲ್ಲಿದೆ ಎಂದು ವಿಷಾದಿಸಿದರು.
 ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಡಿತವಾಗುತ್ತಿರುವುದೇಕೆ ಎಂಬ ಬಗ್ಗೆ ವಿಮರ್ಶೆ ನಡೆಯಬೇಕಿದೆ. ಎಲ್ಲಿ ಎಡವುತ್ತಿದ್ದೇವೆ ಎನ್ನುವ ಬಗ್ಗೆ ಕೂಡ ಆಲೋಚಿಸಬೇಕು.
 ಖಾಸಗಿ ಶಾಲೆಗಳಲ್ಲಿ ಓರ್ವ ವಿದ್ಯಾರ್ಥಿಯ ಅಂಕ ಕಡಿಮೆಯಾದರೆ ಅಂತಹ ಮಕ್ಕಳ ಕಡೆಗೆ ಹೆಚ್ಚಿನ ನಿಗಾವಹಿಸುತ್ತಾರೆ ಎಂದ ಅವರು, ಎಲ್ಲಾ ವಿದ್ಯಾರ್ಥಿಗಳು ಬುದ್ಧಿವಂತರಾಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.
ಶಿಕ್ಷಕರು ಶ್ರಮಿಸಲಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 1 ರಿಂದ 10 ನೇ ಸ್ಥಾನದೊಳಗೆ ಜಿಲ್ಲೆ ಗುರಿತಿಸಿಕೊಳ್ಳುವುದಕ್ಕೆ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದರು.
 ವೇದಿಕೆಯಲ್ಲಿ ಡಿಡಿಪಿಐ ಬಸವರಾಜಪ್ಪ, ಜಿಪಂ ಉಪಾಧ್ಯಕ್ಷೆ ಹೇಮಾ ಪಾವನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ, ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಗಣಪತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement