ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೇಡಿಯೋಗೆ ವಿಶೇಷ ಮಾನ್ಯತೆ

Srinivasa Murthy VN
Updated On : 27 Nov 2013, 11:27 am

ಕ.ಪ್ರ.ವಾರ್ತೆ  ಶಿವಮೊಗ್ಗ  ನ.26
ಮಾಧ್ಯಮಗಳ ಆರ್ಭಟದ ಮಧ್ಯೆಯೇ ರೇಡಿಯೋಗೆ ತನ್ನದೇ ಆದ ಮಾನ್ಯತೆ ಇದೆ. ರೇಡಿಯೋ ಕಾರ್ಯಕ್ರಮಗಳನ್ನು ತುಂಬಾ ಕುತೂಹಲದಿಂದ ಜನರು ಕೇಳುತ್ತಾರೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮತ್ತು ಭದ್ರಾವತಿಯ ಆಕಾಶವಾಣಿ ಆಶ್ರಯದಲ್ಲಿ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಯುವ ಕವಿಗೋಷ್ಠಿ ಮತ್ತು ಕನ್ನಡ ನಾಡು- ನುಡಿ, ಚರ್ಚೆ- ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿ ಮತ್ತು ಸಮಾಜದಲ್ಲಿ ಪ್ರೀತಿ, ಅಧ್ಯಾತ್ಮ, ಪ್ರಾಕೃತಿಕ ಸೌಂದರ್ಯ, ಮಾನವನ ವರ್ತನೆ ಅಭಿವ್ಯಕ್ತಿಸುವ ಕಾವ್ಯವನ್ನು ಅನೇಕ ಸಾಧಕರು ಆಸ್ವಾದಿಸುವ ಮೂಲಕ ಒತ್ತಡಗಳಿಂದ ಬಿಡುಗಡೆ ಪಡೆಯುತ್ತಾರೆ. ಕವಿತೆ ಮತ್ತು ಸಂಗೀತಕ್ಕೆ ಆತಂಕ, ತಲ್ಲಣ ನಿವಾರಿಸುವ ಶಕ್ತಿಯಿದೆ. ಜೀವನದ ಉನ್ನತ ಮೌಲ್ಯ ದಾಖಲಿಸುವ ಮಾಧ್ಯಮ ಕಾವ್ಯ ಎಂದು ಕುಲಪತಿ ಬಾರಿ ಅಭಿಪ್ರಾಯಪಟ್ಟರು.
ಘನತೆ ಇದೆ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ಸುಧೀಂದ್ರ. ಎನ್. ಅವರು, ನಮ್ಮ ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಕಲೆಯನ್ನು ಜನತೆಗೆ ತಲುಪಿಸುವ ಮಾಧ್ಯಮ ರೇಡಿಯೋ ಮೊದಲ ಸ್ಥಾನದಲ್ಲಿ ತನ್ನ ಘನತೆ ಕಾಪಾಡಿಕೊಂಡಿದೆ. ಕಲ್ಪನಾಶಕ್ತಿ ಮತ್ತು ಸೃಜನಶೀಲತೆ ಬೆಳೆಸುವ ರೇಡಿಯೋ ಪ್ರತಿಭಾವಂತರನ್ನು ಪ್ರೇರೇಪಿಸುವಂತಹದ್ದೆಂದರು.
ಹೊಣೆಗಾರಿಕೆ: ಡಾ. ಎ.ಎಸ್. ಶಂಕರನಾರಾಯಣ ಮಾತನಾಡಿ, ಬೌದ್ಧಿಕ ಮತ್ತು ಭೌತಿಕವಾಗಿ ಬೆಳೆಯುವುದನ್ನು ಅಭಿವೃದ್ಧಿಯೆಂದು ಕರೆಯಲಾಗುವುದು. ಮನೆ- ಮನ ಮುಟ್ಟುವ ಮಾರ್ಗವಾದ ಆಕಾಶವಾಣಿ ಅಭಿವೃದ್ಧಿಪಡಿಸುವ ಸಾಧನಗಳಲ್ಲಿ ಒಂದಾಗಿದೆ. ಆಕಾಶವಾಣಿ ನಿಮ್ಮ ಮಾಧ್ಯಮ. ಅದನ್ನು ಫಲಪ್ರದವಾಗಿಸುವ ಹೊಣೆಗಾರಿಕೆ ನಿಮ್ಮದು ಎಂದರು.
ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ವಿದ್ಯಾರ್ಥಿ ಕವಿಗಳಾದ ಕವಿತಮ್ಮ. ಆರ್, ಭವಾನಿ, ರಣಧೀರ, ಗೀತಾ ಎ.ಸಿ, ಮಾಲತೇಶ್, ಸಬಿಯಾ ಬಾನು, ಚೇತನ್ ಕುಮಾರ್ ಜೈನ್, ಸ್ಮಿತಾ ಮಾಕಳ್ಳಿ, ಸಿ.ಎಂ. ಶೋಭಾ, ಪ್ರಕಾಶ್. ಕೆ.ಎನ್, ತಿಪ್ಪೇಸ್ವಾಮಿ, ಬೀರಪ್ಪ ಗಂಗಾವತಿ, ಅವಿನಾಶ್, ಸುಜಾತ. ಡಿ.ಎನ್, ದೀಪಾರಾಣಿ, ಶ್ವೇತಾ.ಸಿ, ಶೃತಿ, ಹರ್ಷಿತಾ, ರವಿ, ತಿಮ್ಮೇಗೌಡ, ಶಶಿಕುಮಾರ್ ನಾಯ್ಕ್, ಮುಕ್ತ, ಆಶಾ.ಎ, ಪಾರ್ವತಮ್ಮ, ನವೀನ.ಎಚ್.ಟಿ, ಅಖಿಲಾ. ಬಿ, ಹೇಮಾವತಿ ಮೊದಲಾದವರು ಸ್ವರಚಿತ ಕವಿತೆ ವಾಚಿಸಿದರು.
ಪ್ರಸಾರಾಂಗ ನಿರ್ದೇಶಕ ಪ್ರೊ. ಜಿ. ಪ್ರಶಾಂತ ನಾಯಕರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೀರ್ತಿಪ್ರಭು ಪ್ರಾರ್ಥಿಸಿ, ಡಾ. ಶಿವಾನಂದ ಕೆಳಗಿನಮನೆ ಸ್ವಾಗತಿಸಿದರು. ಡಾ.ಬಿ.ಇ. ಕುಮಾರಸ್ವಾಮಿ ವಂದಿಸಿದರೆ, ಸಿ.ಶ್ವೇತಾ ಮತ್ತು ನವೀನ್‌ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement