ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಾಹನ ಚಾಲಕ ಕೋಟ್ಯಧಿಪತಿ

Srinivasa Murthy VN
Updated On : 27 Nov 2013, 11:25 am

ಕ.ಪ್ರ.ವಾರ್ತೆ  ಶಿವಮೊಗ್ಗ  ನ.26
ಮೆಸ್ಕಾಂನಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಲೆಮೆಂಟ್ ರಾಯನ್ ಅವರ ನಂಜಪ್ಪ ಲೇಔಟ್‌ನ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು  ಮಂಗಳವಾರ ದಾಳಿ ನಡೆಸಿ, ಕ್ಲೆಮೆಂಟ್ ಅವರ ಆಸ್ತಿಗೆ ಸಂಬಂಧಿಸಿದ ಮಹತ್ವದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲೆಮೆಂಟ್ ರಾಯನ್ ನಂಜಪ್ಪ ಲೇಔಟ್‌ನಲ್ಲಿ ಕೋಟ್ಯಂತರ ರುಪಾಯಿ ವೆಚ್ಚದ ಐಷಾರಾಮಿ ಬಂಗಲೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ 10 ಎಕರೆ ರಬ್ಬರ್  ತೋಟ ಹಾಗೂ ಮನೆ ಮತ್ತು ಬಿ.ಎಚ್. ರಸ್ತೆಯಲ್ಲಿರುವ ಎಸ್.ಆರ್. ಕಾರ್ ಡೆಕೋರೇಟರ್ ಮೇಲೆ  ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಆಸ್ತಿ ವಿವರ ಸಂಗ್ರಹ; ಮಂಗಳವಾರ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಪೊಲೀಸರು, ಕ್ಲೆಮೆಂಟ್ ಅವರ ಬ್ಯಾಂಕ್ ಖಾತೆಯಲ್ಲಿರುವ ವೇತನ ಹಾಗೂ ಅವರ ಆಸ್ತಿ, ಪಾಸ್ತಿಯ ವಿವರಗಳನ್ನು ಸಂಗ್ರಹಿಸಿದ್ದು, ಅವರ ಸೇವಾವಧಿಯ ವೇತನಕ್ಕಿಂತ ಹೆಚ್ಟಿನ ನಗದು ಹಾಗೂ ಇನ್ನಿತರ ದಾಖಲೆ ವಶಕ್ಕೆ ಪಡಿಸಿದ್ದಾರೆ. ಆದರೆ, ಆಸ್ತಿಯ ಮೌಲ್ಯ  ಬಹಿರಂಗ ಪಡಿಸಿಲ್ಲ.
ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ಶ್ರೀಧರ್ ನೇತೃತ್ವದಲ್ಲಿ ಒಂದು ತಂಡ ಕ್ಲೆಮೆಂಟ್ ಅವರ ಮೇಲೆ ದಾಳಿ ನಡೆಸಿದರೆ, ಮತ್ತೆರಡು ತಂಡ ಬಿ.ಎಚ್. ರಸ್ತೆಯಲ್ಲಿರುವ ಎಸ್.ಆರ್. ಕಾರ್ ಡೆಕೋರೇಟರ್ ಹಾಗೂ ಎನ್.ಆರ್. ಪುರ ತಾಲೂಕಿನ ತೋಟದ ಮೇಲೆ ದಾಳಿ ನಡೆಸಿದ್ದು, ಇಲ್ಲಿಯು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಸ್ವಯಂಪ್ರೇರಿತ ದಾಳಿ: ಕ್ಲೆಮೆಂಟ್ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ. ಸ್ವಯಂ ಪ್ರೇರಿತವಾಗಿ ಆಸ್ತಿಯ ವಿವರಗಳನ್ನು ಸಂಗ್ರಹಿಸಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ತನಿಖೆಯ ನಂತರ ವಿವಿರ ನೀಡುವುದಾಗಿ ತಿಳಿಸಿದ್ದು, ಎಲ್ಲಾ ವಿಷಯಗಳನ್ನು ಲೋಕಾಯುಕ್ತ ಎಡಿಜಿಪಿ ಅವರಿಗೆ ಸಲ್ಲಿಸಲಾಗುವುದು. ನಂತರ ಮಾಧ್ಯಮಗಳಿಗೆ ಅವರೇ ವಿವರ ನೀಡಲಿದ್ದಾರೆ ಎಂದು ಎಸ್.ಪಿ. ಶ್ರೀಧರ್ ತಿಳಿಸಿದ್ದಾರೆ.
ದಾಳಿ ವೇಳೆ ಲೋಕಾಯುಕ್ತ ಡಿವೈಎಸ್ ಪಿ ಎಂ. ನಾಗರಾಜ್, ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement