ರೈತನ ಆತ್ಮಹತ್ಯೆಗೆ ಸರ್ಕಾರವೇ ಕಾರಣ
ಸಾಗರ: ಬೆಳಗಾವಿ ಜಿಲ್ಲೆ ಕಂಕಣವಾಡಿ ರೈತ ವಿಠಲ್ ಭೀಮಪ್ಪ ಅರಭಾವಿ ಅವರ ಆತ್ಮಹತ್ಯೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಸಾಗರ ಶಾಖೆ ಹಾಗೂ ಹಸಿರುಸೇನೆ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತ ವಿಠಲ್ ಭೀಮಪ್ಪ ಅರಭಾವಿ ಸಾವಿಗೆ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ರೈತರ ಬಗ್ಗೆ ಇರುವ ನಿರ್ಲಕ್ಷ್ಯ ಧೋರಣೆ ಕಾರಣ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಹಾಗೂ ಸರ್ಕಾರಿ ವ್ಯವಸ್ಥೆ ರೈತ ವಿರೋಧಿ ನಡವಳಿಕೆಯನ್ನು ತಕ್ಷಣ ತಿದ್ದಿಕೊಳ್ಳಬೇಕು. ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ರಾಜ್ಯ ಸರ್ಕಾರ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಅನಾಹುತ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಭತ್ತ ಕೃಷಿಗೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ತಯಾರಿಸುವ ಖರ್ಚುವೆಚ್ಚ ಅವೈಜ್ಞಾನಿಕವಾಗಿದೆ. ಇಲಾಖೆಯ ಅಂಕಿಅಂಶದಂತೆ ಮಲೆನಾಡು ಭಾಗದಲ್ಲಿ 1 ಎಕರೆ ಜಮೀನಿನಲ್ಲಿ ಭತ್ತದ ಕೃಷಿಗೆ ರು. 28699 ಖರ್ಚು ತಗಲುತ್ತದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ರೈತರು ಎಕರೆಗೆ 43100 ರೂ. ಖರ್ಚು ಮಾಡುತ್ತಿದ್ದಾರೆ. ಈ ಕುರಿತು ಪುನರ್ ಪರಿಶೀಲನೆ ನಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇಲಾಖೆಯ 2010-11ನೇ ಸಾಲಿನ ಅಂಕಿಅಂಶದ ಪ್ರಕಾರ ಆವಿನಹಳ್ಳಿ ಹೋಬಳಿಯಲ್ಲಿ ಒಂದು ಎಕರೆಗೆ 13-15 ಕ್ವಿಂಟಾಲ್, ತಾಳಗುಪ್ಪ ಹೋಬಳಿಯಲ್ಲಿ 11-14 ಕ್ವಿಂಟಾಲ್, ಕಸಬಾ ಹೋಬಳಿಯಲ್ಲಿ 15-18 ಕ್ವಿಂಟಾಲ್ ಹಾಗೂ ಆನಂದಪುರಂ ಹೋಬಳಿಯಲ್ಲಿ 15-19 ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತದೆ ಎನ್ನಲಾಗಿದೆ.
ಆದರೆ ವಾಸ್ತವವಾಗಿ ಆವಿನಹಳ್ಳಿಯಲ್ಲಿ 10 ಕ್ವಿಂಟಾಲ್, ತಾಳಗುಪ್ಪದಲ್ಲಿ 10 ಕ್ವಿಂಟಾಲ್, ಕಸಬಾದಲ್ಲಿ 12 ಕ್ವಿಂಟಾಲ್ ಹಾಗೂ ಆನಂದಪುರಂನಲ್ಲಿ 13 ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತಿದೆ. ಇಲಾಖೆಯ ಬೆಳೆ ಲೆಕ್ಕಾಚಾರ ಪೂರ್ಣ ತಪ್ಪಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಲೆನಾಡಿನ ಭತ್ತದ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟ ಕುರಿತು ಸಮಾಲೋಚನಾ ಸಭೆ ನಡೆಸಬೇಕು.
ಯಾವುದೋ ಕಾಲದಲ್ಲಿ ನಡೆದಿರುವ ಸಮೀಕ್ಷೆಯ ಬದಲಾಗಿ ಹೊಸ ಸಮೀಕ್ಷೆ ನಡೆಸಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತ ಸಂಘದ ಅಧ್ಯಕ್ಷ ಕೆ. ಗುರುಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ. ಸೇನಾಪತಿ ಗೌಡ, ಪ್ರಮುಖರಾದ ಜಿ. ಅರುಣ್, ಚಂದ್ರು ಉಳ್ಳೂರು, ಮಹಾಬಲೇಶ್ವರ ಗೌಡ, ಶೇಷಗಿರಿ ಶರ್ಮ, ಶೈಲೇಂದ್ರ ಬಂದಗದ್ದೆ ಹಾಜರಿದ್ದರು.