ವಿವಾಹಿತೆ ಅನುಮಾನಾಸ್ಪದ ಸಾವು: ಪೋಷಕರ ದೂರು
ಸಾಗರ: ತಾಲ್ಲೂಕಿನ ಸೂರಗುಪ್ಪೆ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದು ಪೋಷಕರು ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೂರಗುಪ್ಪೆ ಗ್ರಾಮದ ಶೀಲ (30) ಎಂಬ ಮಹಿಳೆ ಗುರುವಾರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಂಜಪ್ಪ ಎಂಬುವವರ ಪುತ್ರಿ ಶೀಲ ಅವರನ್ನು ಅದೇ ಗ್ರಾಮದ ಗೋಪಾಲ ಎಂಬುವವರಿಗೆ ಆರು ತಿಂಗಳು ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿರುವ ಶೀಲ ಅವರ ತಂದೆ ಮಂಜಪ್ಪ ತಮ್ಮ ಮಗಳನ್ನು ಆಕೆಯ ಗಂಡ ಗೋಪಾಲ ಕೈಯಿಂದ ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೃತ ಶೀಲಾ ಅವರ ಗಂಡ ಗೋಪಾಲ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಪೇಟೆ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ಗ್ರಾಮಾಂತರ ಠಾಣೆ ಪಿ.ಎಸ್.ಐ. ಶಶಿಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮವಾಗಿ ಬೆಳೆದಿದ್ದ ಗಾಂಜಾ ವಶ
ಸಾಗರ: ತಾಲ್ಲೂಕಿನ ಮುಂಬಾಳು ಗ್ರಾಮದ ಹುಚ್ಚಪ್ಪ ಎಂಬುವವರು ಶುಂಠಿ ಬೆಳೆಯ ನಡುವೆ ಬೆಳೆದಿದ್ದ 5 ಕೆ.ಜಿ. ಗಾಂಜಾ ಬೆಳೆಯನ್ನು ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಗಾಂಜಾ ಬೆಳೆಯನ್ನು ವಶಕ್ಕೆ ಪಡೆದು ಆರೋಪಿ ಹುಚ್ಚಪ್ಪನನ್ನು ಬಂಧಿಸಿದ್ದಾರೆ.
ಸಿಪಿಐ ಹೊನ್ನಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಪಿ.ಎಸ್.ಐ. ಶಶಿಕಾಂತ್, ಸಿಬ್ಬಂದಿಗಳಾದ ಜಯೇಂದ್ರ, ರಾಘವೇಂದ್ರ ಶೆಟ್ಟಿ, ಮಹಾಂತೇಶ್, ಹಜರತಾಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರು ನಾಪತ್ತೆ: ದೂರು
ಸಾಗರ: ತಾಲ್ಲೂಕಿನ ಹೆಗ್ಗೋಡು ಕೇಡಲಸರದ ಪ್ರೌಢಶಾಲೆಯ 9ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಗುರುವಾರ ನಾಪತ್ತೆಯಾಗಿರುವ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಕೇಡಲಸರ ಪ್ರೌಢಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮುಂಡಿಗೆಸರ ಗ್ರಾಮದ ಸಿಂಧು, ಮಳಲಿ ಗ್ರಾಮದ ಅನುರಾಧ ಹಾಗೂ ಹೈತೂರಿನ ಶ್ಯಾಮಲ ನಾಪತ್ತೆಯಾದ ವಿದ್ಯಾರ್ಥಿನಿಯರಾಗಿದ್ದಾರೆ. ಗುರವಾರ ಬೆಳಿಗ್ಗೆ ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದ ವಿದ್ಯಾರ್ಥಿನಿಯರು ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಪೋಷಕರು ವಿದ್ಯಾರ್ಥಿನಿಯರ ಸ್ನೇಹಿತೆಯರ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಸುಳಿವು ಪತ್ತೆಯಾಗದೆ ಇರುವುದರಿಂದ ಶುಕ್ರವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ತಿಕ ದೀಪೋತ್ಸವ
ಶಿವಮೊಗ್ಗ: ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜ ಡಿ. 2ರಂದು ಸಂಜೆ 5.30ಕ್ಕೆ ಶ್ರೀ ತುಳಜಾ ಭವಾನಿ ಅಮ್ಮನವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಏರ್ಪಡಿಸಿದೆ. ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಮಾಜದ ಅಧ್ಯಕ್ಷರು ತಿಳಿಸಿದ್ದಾರೆ.
ಮರಳು ದಂಧೆ: 18 ಲಾರಿ ವಶ
ಹೊಸನಗರ: ತಾಲೂಕಿನಲ್ಲಿ ನಡೆದ ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ತಹಸೀಲ್ದಾರ್ ದಾಳಿ ನಡೆಸಿ 18 ಲಾರಿ ವಶಪಡಿಸಿಕೊಂಡ ಘಟನೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ಸಿ. ಎಂ. ಕುಲಕರ್ಣಿ ಮತ್ತು ಪಿಎಸ್ಐ ಸಂತೋಷ್, ಪರವಾನಗಿ ಪಡೆದ ಸ್ಥಳ ಮತ್ತು ಮರಳು ತುಂಬುತ್ತಿದ್ದ ಸ್ಥಳಕ್ಕೆ ಹೊಂದಾಣಿಕೆ ಬಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ಪ್ರತಿಲಾರಿಗೆ ರು. 1,500 ದಂಡ ವಿಧಿಸಲಾಗಿದ್ದು ಇದನ್ನು ಖಂಡಿಸಿದ ಲಾರಿ ಮಾಲೀಕರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ಕೂಡ ನಡೆಸಿದ ಘಟನೆ ನಡೆದಿದೆ.