ಕಡಿಮೆ ಪರಿಹಾರ ಬಿಡುಗಡೆ: ವಿಷಾದ
ಸೊರಬ: ಅತಿವೃಷ್ಟಿಯಿಂದಾಗಿ ಸುಮಾರು 810 ಕೋಟಿ ಬೆಳೆ ನಷ್ಟವುಂಟಾಗಿದೆ. ರಾಷ್ಟ್ರೀಯ ವಿಪತ್ತು ನಿಧಿಯಿಂದ ಕೇವಲ 73 ಕೋಟಿ ಬಿಡುಗಡೆಯಾಗಿರುವುದಕ್ಕೆ ಶಾಸಕ ಮಧುಬಂಗಾರಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಧಿಕಾರಿ ಮಟ್ಟದ ಸಭೆ ನಡೆಸಿ ಮಾತನಾಡಿದ ಅವರು, ಬೆಳೆಯ ಜೊತೆಗೆ ಕೆರೆ-ಕಟ್ಟೆ, ರಸ್ತೆ, ಮನೆ. ಜಾನುವಾರುಗಳು ಹಾನಿಗೊಳಗಾಗಿದ್ದು, ಹಣ ಬಿಡುಗಡೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಪ್ರಕ್ರಿಯೆಯಲ್ಲಿ ಇನ್ನೂ 200 ಮೀ.ರಸ್ತೆ ವಿಸ್ತರಣೆ ಬಾಕಿ ಉಳಿದಿದ್ದು, ಕಾಮಗಾರಿ ನಡೆಯದಿದ್ದರೆ ಬಂದ ಹಣ ಸರ್ಕಾರಕ್ಕೆ ವಾಪಸ್ಸಾಗುತ್ತದೆ. ಈ ನಿಟ್ಟಿನಲ್ಲಿ ತುರ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪರ್ಯಾಯ ವ್ಯವಸ್ಥೆಯ ಕುರಿತು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
ಪರಿಹಾರದ ಕುರಿತು ಗೊಂದಲ ಇರುವುದರಿಂದ ಹೆಚ್ಚಿನ ಪರಿಹಾರ ಕೊಡಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದು ಅವರು, ಅಗಲೀಕರಣ ಪ್ರಕ್ರಿಯೆ ಕುರಿತು ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಪಪಂ ಅಧಿಕಾರಿ ಸಂಗಮೇಶ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಕಾರ್ಯಾಧ್ಯಕ್ಷ ಅತಿಕುರ್ ರೆಹಮಾನ್, ಸೈಯದ್ ಸಿರಾಜ್, ಟೌನ್ ಅಧ್ಯಕ್ಷ ಮಧುರಾಯಶೇಠ್, ಎಂ.ಡಿ. ಶೇಖರ್, ಎನ್. ಕುಮಾರ್, ಎಸ್. ಪರಶುರಾಮಪ್ಪ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬಾಲಭವನ: ಅರ್ಜಿ ಆಹ್ವಾನ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಭಾಲಭವನದ ಮಕ್ಕಳಿಗೆ ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಬಾಲಭವನಕ್ಕೆ ಕಚೇರಿ ಸಹಾಯಕ ಮತ್ತು ಕಲಾ ಸಂಯೋಜಕರ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದು, 10 ತಿಂಗಳ ಅವಧಿಗೆ ಅರ್ಹ ಕಲಾವಿದರು ಹಾಗೂ ಸಂಸ್ಥೆಗಳ ಮುಖ್ಯಸ್ಥರಿಂದ ಷರತ್ತಿಗೊಳಪಟ್ಟು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಆಯ್ಕೆಯಾದ ಕಾರ್ಯಕ್ರಮ ಸಂಯೋಜಕರಿಗೆ ತಿಂಗಳಿಗೆ 7 ಸಾವಿರ ಹಾಗೂ ಕಚೇರಿ ಸಹಾಯಕರಿಗೆ 5 ಸಾವಿರ ಮಾಸಿಕ ಗೌರವಧನ ನೀಡಲಾಗುವುದು.
ಆಸಕ್ತರು ವಿವರಗಳಿಗಾಗಿ ಕಾರ್ಯದರ್ಶಿಗಳು, ಜಿಲ್ಲಾ ಬಾಲಭವನ ಸಮಿತಿ ಹಾಗೂ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ, ದೂರವಾಣಿ ಸಂಖ್ಯೆ 08182-249034, ಅಥವಾ 249033/34ನ್ನು ಸಂಪರ್ಕಿಸಬಹುದು.
'ಶಿಕ್ಷಣದ ಜತೆ ನೀತಿ ತಿಳಿಸಿ'
ಸೊರಬ: ಗುರವೇನಮಃ ಕಾಲಹೋಗಿ ಗುರವೇನ್ ಮಹಾ ಎನ್ನುವಂತಹ ಕಾಲ ಬಂದಿದೆ ಎಂದು ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು ಶಿಕ್ಷಣ ನೀಡುವುದರೊಂದಿಗೆ ಮಕ್ಕಳಲ್ಲಿ ಮಮತೆ, ನೀತಿ, ಪರಂಪರೆಯನ್ನು ಬೆಳೆಸುವುದರಿಂದ ಜೀವನೋಪಾಯಕ್ಕೆ ದಾರಿ ತೋರಿದಂತಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಮಧುಬಂಗಾರಪ್ಪ, ಶಿಕ್ಷಕರಿಂದ ರೂಪಗೊಂಡ ಶಿಷ್ಯರೇ ಇಂದು ಆಡಳಿತದಲ್ಲಿದ್ದು ಅವರಿಂದಲೆ ನಿರಂತರ ಶೋಷಣೆಗೊಳಗಾಗುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದರು.