ತಾ. ಮಟ್ಟದ ಪಪೂ ಕಾಲೇಜು ಕ್ರೀಡಾಕೂಟ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.10
ಸಾರ್ವಜನಿಕ ಶಿಕ್ಷಣ ಇಲಾಖೆ ಸೆ. 11 ಮತ್ತು 12ರಂದು ಶಿಕಾರಿಪುರದ ಕುಮಧ್ವತಿ ಕ್ರೀಡಾಂಗಣದಲ್ಲಿ ಪ್ರಸಕ್ತ ಸಾಲಿನ ಶಿಕಾರಿಪುರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಕ್ರೀಡಾಕೂಟವನ್ನು ಸೆ. 11ರಂದು ಬೆಳಿಗ್ಗೆ 9.30ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಹಾಲಪ್ಪ ಅಧ್ಯಕ್ಷತೆ ವಹಿಸುವರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಚ್. ಇಂದುಮತಿ ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ಪುರಸಭಾ ಸದಸ್ಯ ಕೆ.ಜಿ. ವಸಂತಗೌಡ್ರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ್, ಪ್ರಾಂಶುಪಾಲ ಎಂ. ನಾಗರಾಜಪ್ಪ, ಡಿ. ವಿರೂಪಾಕ್ಷಪ್ಪ, ಡಾ. ವೀರೇಂದ್ರ, ನಾಗರಾಜ್ ಗೋನಾಳ್, ಸುಭಾಷ್ಚಂದ್ರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ಸೆ.12ರಂದು ಸಂಜೆ 5ಗಂಟೆಗೆ ನಡೆಯಲಿದೆ. ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್. ಹನುಮಂತಪ್ಪ ವಹಿಸುವರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗೋವಿಂದಪ್ಪ, ಸುರೇಶ ಧಾರವಾಡದ, ಎಸ್. ಚಂದ್ರಕಾಂತ್, ಹಾಲೇಶಪ್ಪ, ಕೆ.ಸಿ. ರಾಜಪ್ಪ, ಬಿ. ಭುಜಂಗಪ್ಪ, ಡಿ. ಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕ್ರೀಡಾಕೂಟದ ಸಂಚಾಲಕ ಪಿ.ಜೆ. ಪ್ರಕಾಶ್ಬಾಬು, ಕ್ರೀಡಾ ಕಾರ್ಯದರ್ಶಿ ಹನುಮಂತಪ್ಪ, ದೈಹಿಕ ಶಿಕ್ಷಣ ಸಂಚಾಲಕ ಯು. ದೇವೇಂದ್ರಪ್ಪ ಇದ್ದರು
14ರಿಂದ ದಸರಾ ಕ್ರೀಡಾಕೂಟ
ಸಾಗರ: ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ 2013-14ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ.14ರಂದು ನೆಹರೂ ಮೈದಾನದಲ್ಲಿ ಬೆಳಿಗ್ಗೆ 9ಗಂಟೆಗೆ ನಡೆಯಲಿದೆ.
ಭಾಗವಹಿಸುವ ಕ್ರೀಡಾಪಟುಗಳಿಗೆ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಪುರುಷರಿಗಾಗಿ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಅಥ್ಲೆಟಿಕ್ಸ್ ನಡೆಯಲಿದೆ.
ಗುಂಪು ಸ್ಪರ್ಧೆಗಳ ವಿಭಾಗದಲ್ಲಿ ಪುರುಷರಿಗಾಗಿ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್, ಫುಟ್ಬಾಲ್ ಹಾಗೂ ಮಹಿಳೆಯರಿಗಾಗಿ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್, ಫುಟ್ಬಾಲ್ ಸ್ಪರ್ಧೆಗಳು ನಡೆಯಲಿದೆ.
ಇದೇ ವೇಳೆ ಜಿಮ್ನಾಸ್ಟಿಕ್, ಈಜು, ಟೇಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಹಾಕಿ, ಬಾಸ್ಕೆಟ್ ಬಾಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ ನಡೆಯಲಿದೆ.
ಭಾಗವಹಿಸುವ ಕ್ರೀಡಾಪಟುಗಳು ಸೆ.14ರಂದು ಬೆಳಿಗ್ಗೆ 9 ಗಂಟೆಯೊಳಗೆ ಸ್ಥಳದಲ್ಲಿ ಹಾಜರಿದ್ದು, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಉಸ್ತುವಾರಿ ಸಹಾಯಕ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಚ್.ಜಿ. ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.