ಮಳೆ ನಡುವೆಯೂ ಸಂಭ್ರಮ
ಕ.ಪ್ರ. ವಾರ್ತೆ ಸೊರಬ ಸೆ.10
ಗಣಪತಿ, ಗೌರಿ ಹಬ್ಬಕ್ಕೆ ಮಳೆಯ ಅರ್ಭಟದ ನಡುವೆಯೂ ಉತ್ಸಾಹದಿಂದ ಜನತೆ ಆಚರಣೆ ಮಾಡುತ್ತಿದ್ದಾರೆ.
ಗಣೇಶನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಉತ್ಸಾಹದ ಪೈಪೋಟಿ ಎದ್ದುಕಾಣುತ್ತಿದ್ದು, ವಿಶೇಷವಾಗಿ ಸಾರ್ವಜನಿಕ ಗಣಪತಿ ವಿಗ್ರಹಗಳ ವಿನ್ಯಾಸ, ವರ್ಣಗಳಲ್ಲಿ ಕಲಾತ್ಮಕ ಆಕರ್ಷಣೆ ಗಮನ ಸೆಳೆಯುವಂತಿದೆ. ಉಳವಿಯಲ್ಲಿ ಮೆಸ್ಕಾಂ ಸಿಬ್ಬಂದಿ ರಚಿಸಿರುವ ನವಿಲಿನ ಮೇಲೆ ಕುಳಿತ ಗಣಪತಿ, ಸಂಗೀತದ ಹಿನ್ನೋಟ ಆಕರ್ಷಣೀಯ ಎನಿಸಿದ್ದು, ನೋಡುಗರ ಸಂಖ್ಯೆ ದಿನದದ ದಿನಕ್ಕೆ ಏರುತ್ತಿದೆ.
ವಿವಿಧ ರೀತಿಯ ವಿನಾಯಕ: ಪಟ್ಟಣದಲ್ಲಿ ವಾಹನ ಚಾಲಕರು ಶಿವ, ಪಾರ್ವತಿ ಗಣೇಶರ ವಿಶೇಷ ವಿನ್ಯಾಸವಿರಿಸಿ ಗಣಪತಿ ಪ್ರತಿಷ್ಠಾಪಿಸಿದ್ದರೆ, ಇಲ್ಲಿನ ಮರೂರು ರಸ್ತೆಯ ವಿಶ್ವಕರ್ಮ ಯುವ ವೇದಿಕೆಯವರು ಶಂಖದ ವಿನ್ಯಾಸದಲ್ಲಿ ಗಣಪತಿ ರಚಿಸಿ ಪೂಜಿಸುತ್ತಿದ್ದಾರೆ. ಗುಡಿಗಾರ ಸಮಾಜದವರು 11 ಅಡಿ ಎತ್ತರದ ಗಣಪತಿ ಇರಿಸಿದ್ದರೆ, ಕಾನಕೇರಿ ಬಡಾವಣೆಯಲ್ಲಿ ಓಂ ಭೂತೇಶ್ವರ ಗಣಪತಿ ಇರಿಸಿದ್ದಾರೆ.
ಇದೇ ವೇಳೆ ಚಂದ್ರಗುತ್ತಿ ಗಣಪತಿ ದೇಗುಲದ ವಿಗ್ರಹಕ್ಕೆ ಇಲ್ಲಿನ ಗಣಪತಿ ಶೇಟ್ ಮತ್ತು ಮಕ್ಕಳು ಸುಮಾರು 4 ಕೆಜಿ ತೂಕದ ಬೆಳ್ಳಿಯ ಕವಚ ಸಮರ್ಪಿಸಿದ್ದಾರೆ. ಗ್ರಾಮದಲ್ಲಿ ಗಜಾನನೋತ್ಸವ ಸಮಿತಿಯವರು 6.5 ಅಡಿ ಎತ್ತರದ ಸಾರ್ವಜನಿಕ ಗಣಪತಿಯನ್ನು ಇರಿಸಿದ್ದಾರೆ.
ತಾಲೂಕಿನ ಇಂಡುವಳ್ಳಿಯಲ್ಲಿ ಸುಮಾರು 700 ವರ್ಷ ಹಳೆಯದಾದ ಗಣಪತಿ ಗುಡಿ, ಪ್ರಾಚೀನ ಗಣಪತಿ ದೇಗುಲಗಳು ಇರುವ ಕೋಡನಕಟ್ಟೆ, ಆನವಟ್ಟಿ, ಚಂದ್ರಗುತ್ತಿ ಇನ್ನೂ ಅನೇಕ ಕಡೆಗಳಲ್ಲಿ ವಿಶೇಷ ಪೂಜೆ ಸಮಾರಂಭಗಳು ನಡೆಯಿತು.