ರಾಜ್ಯ ಕಂಡ ಸಂವೇದನೆ ಜನನಾಯಕ ಕಾಗೋಡು
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.10
ಸಮಾಜವಾದಿ ನೆಲದಿಂದ ಬಂದ ಕಾಗೋಡು ತಿಮ್ಮಪ್ಪ ಈ ರಾಜ್ಯ ಕಂಡ ಹಿರಿಯ ಸೂಕ್ಷ್ಮ ಸಂವೇದನೆಯ ಜನನಾಯಕ. ನುಡಿದಂತೆ ನಡೆದು ಮಾತು ಉಳಿಸಿಕೊಂಡ ಹೋರಾಟಗಾರ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
ವಿಧಾನಸಭಾಧ್ಯಕ್ಷ ಹಾಗೂ ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪರವರ 82ನೇ ಹುಟ್ಟುಹಬ್ಬ ಅಂಗವಾಗಿ ಕಾಗೋಡು ತಿಮ್ಮುಪ್ಪ ಅಭಿಮಾನಿ ವೃಂದವು ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನೆ ಹಾಗೂ ಸಹಚಿಂತನಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜವಾದವನ್ನೇ ಉಸಿರಾಗಿಸಿಕೊಂಡಿರುವ ಕಾಗೋಡು ತಿಮ್ಮಪ್ಪ, ಬೇರೆ ರಾಜಕಾರಣಿಗಳಿಗಿಂತ ಭಿನ್ನರಾಗಿದ್ದು, ವಿಶೇಷವಾದ ಜನಭಿಪ್ರಾಯ ಹೊಂದಿದ್ದಾರೆ. ಸಮಾಜವಾದಿ ಕಾಗೋಡು: ಉಳುವವನೇ ಹೊಲದೂಡೆಯ ಎಂಬ ಕಾನೂನು ಜಾರಿಗೆ ಬಂದು ಅದನ್ನು ಪ್ರತಿ ವ್ಯಕ್ತಿಗೂ ಅನ್ವಯಗೊಳಿಸಿದವರು ಕಾಗೋಡು ತಿಮ್ಮಪ್ಪನವರು. ದೇಶದ ಬೇರೆ ರಾಜ್ಯದಲ್ಲಿ ಸಮಾಜವಾದಿ ಹೋರಾಟಕ್ಕೆ ಯಶಸ್ಸು ದೊರೆಯದಿದ್ದರೂ, ರಾಜ್ಯದಲ್ಲಿ ಮಾತ್ರ ಯಶಸ್ಸು ದೊರೆತಿದೆ. ಇದಕ್ಕೆ ಕಾಗೋಡು ತಿಮ್ಮಪ್ಪ, ಗೋಪಾಲಗೌಡ, ಲೋಹಿಯಾ ಅವರ ನಿರಂತರ ಹೋರಾಟ ಕಾರಣ ಎಂದರು.
ಕೃಷಿಕರಿಗೆ ಭೂಮಿ ಕೊಟ್ಟವರು: ಭೂಮಿಯಿಲ್ಲದ ಕೃಷಿಕರಿಗೆ ಭೂಮಿ ದೊರೆಯುವಂತೆ ಮಾಡಿದ ಕಾಗೋಡು ತಿಮ್ಮಪ್ಪರವರನ್ನು ಉತ್ತರ ಕರ್ನಾಟಕದ ಜನತೆ ಇಂದಿಗೂ ಸ್ಮರಿಸುತ್ತಾರೆ. ಕಾಗೋಡು ತಿಮ್ಮಪ್ಪ ಅವರನ್ನು ಬಹಳ ವರ್ಷದಿಂದ ಸೂಕ್ಷ್ಮವಾಗಿ ಕಂಡಿದ್ದೇನೆ. ಈ ವೇಳೆ ಬಡವರನ್ನು ಪರಿಗಣನೆಗೆ ತೆಗೆದುಕೊಂಡು ನ್ಯಾಯ ದೊರಕಿಸಿಕೊಡುತ್ತಿದ್ದರು. ಅಲ್ಲದೇ, ವಕೀಲರಾಗಿ ಕೆಲಸ ಮಾಡುತ್ತಿದ್ದ ವೇಳೆ ಬಡವರ್ಗದವರಿಗೆ ಪುಕ್ಕಟೆಯಾಗಿ ನ್ಯಾಯಾಲಯದಲ್ಲಿ ವಾದ ಮಾಡಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ರೈತರ ಪರ ಹೋರಾಟ: ಸಮಾಜವಾದ ಹೋರಾಟದ ಫಲವಾಗಿ ರಾಜ್ಯದ ಸಮಾರು 11 ಲಕ್ಷ ಹೆಕ್ಟೇರ್ ಜಮೀನನ್ನು 8 ಲಕ್ಷ ರೈತರಿಗೆ ಹಂಚಲಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಿಮ್ಮಪ್ಪ ಅವರನ್ನು ತನ್ನ ತೆಕ್ಕೆಗೆ ಕರೆದುಕೊಂಡಿತು. ಇದರಿಂದ ಪಕ್ಷಕ್ಕೆ ಅನುಕೂಲವಾಯಿತು. ಕಾಂಗ್ರೆಸ್ನಲ್ಲಿದ್ದರೂ ತಮ್ಮ ಸಮಾಜವಾದಿ ನೆಲೆಗಟ್ಟನ್ನು ಎಂದು ಬಿಟ್ಟುಕೊಟ್ಟಿಲ್ಲ. ಇಂದಿಗೂ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಮಾಜವಾದಿಗಳಾದ ಮಿಣುಕಮ್ಮ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾಗೋಡು ತಿಮ್ಮಪ್ಪ ಅಭಿಮಾನಿ ವೃಂದದ ಅಧ್ಯಕ್ಷ ಆರ್. ಪ್ರಸನ್ನಕುಮಾರ್ಸ್ವಾಗತಿಸಿದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಭಂಡಾರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕಲಗೋಡು ರತ್ನಾಕರ್, ಮಾಜಿ ಶಾಸಕ ಕರಿಯಣ್ಣ ಮತ್ತಿತರರು ಇದ್ದರು. ಎನ್. ರಮೇಶ್ಸ್ವಾಗತಿಸಿದರು.
ಅಭಿನಂದನೆಗೆ ನೂಕುನುಗ್ಗಲು
ಕಾಂಗ್ರೆಸ್ ಪಕ್ಷ ಬದಲಾಗಿಲ್ಲ. ಕಾರ್ಯಕ್ರಮದ ವೇದಿಕೆಯಲ್ಲಿ ಗೊಂದಲವೋ ಗೊಂದಲು.. ಬರೀ ಕಾರ್ಯಕರ್ತರದ್ದೇ ಓಡಾಟ, ಫೋಟೋ ತೆಗೆಸುಕೊಳ್ಳುವ ಗೀಳು.. ಕಾಗೋಡು ತಿಮ್ಮಪ್ಪರವರಿಗೆ ಅಭಿನಂದಿಸಲು ನೂಕುನುಗ್ಗಲು ಉಂಟಾಗಿತ್ತು.
ನಿರೂಪಕರು ಕಾರ್ಯಕ್ರಮದ ನಂತರ ಸಂಘ, ಸಂಸ್ಥೆಗಳು ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವೇದಿಕೆಯ ಎರಡು ಬದಿಯಿಂದಲೂ ಕಾರ್ಯಕರ್ತರು ವೇದಿಕೆ ಮೇಲೇರಿದರು. ಕೊನೆಗೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಾರ್ಯಕರ್ತರನ್ನು ಕೇಳಗಿಳಿಸಬೇಕಾಯಿತು. ಇದರ ಜತೆಗೆ ಫೋಟೋ ಗೀಳು ಅಂಟಿಸಿಕೊಂಡಿರುವ ಕೆಲ ಕಾರ್ಯಕರ್ತರು ಸನ್ಮಾನಿಸುವ ವೇಳೆ ವೇದಿಕೆ ಏರತೊಡಗಿದರು. ಇತ್ತ ನಿರೂಪಕರು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಮಾತನಾಡಲು ತಿಳಿಸಿದಾಗ, ಅವರು ಮಾತನಾಡಲು ಹೋಗಲು ದಾರಿ ಬಿಡದಷ್ಟು ಪೋಟೋ ತೆಗೆಸಿಕೊಳ್ಳುತ್ತಿದ್ದ ಕಾರ್ಯಕರ್ತರನ್ನು ನೋಡಿ ಕಂಬಾರ್ ಅವರು ವಾಪಸು ಕುಳಿತುಕೊಳ್ಳಲು ಮುಂದಾದರು.
ನಂತರ ಆರ್. ಪ್ರಸನ್ನಕುಮಾರ್, ಕಾರ್ಯಕರ್ತರನ್ನು ದಾರಿ ಬಿಡುವಂತೆ ತಿಳಿಸಿ, ಕಂಬಾರ್ ಅವರನ್ನು ಮಾತನಾಡುವ ವೇದಿಕೆಗೆ ಕರೆದೊಯ್ದರು.
ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ಕಾಗೋಡು
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.10
ವಿಧಾನಸಭಾಕ್ಷನಾಗಿರುವುದರಿಂದ ಕೆಲವೊಂದು ಸತ್ಯ ಸಂಗತಿಗಳನ್ನು ಹೇಳುವಂತಿಲ್ಲ. ಮುಂದಿನ ಬಾರಿಯಂತೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆಗ ಬದುಕಿದ್ದರೆ ಸತ್ಯಗಳನ್ನು ಹೇಳಿಯೇ ಹೋಗುತ್ತೇನೆ. ಹೋರಾಟವನ್ನು ಆಗಲೂ ಮುಂದುವರೆಸುತ್ತೇನೆ ಎಂದು ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾ ತಮ್ಮ 82ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಅವರು, ಆಡಳಿತ ಎಷ್ಟು ಕುಸಿದು ಬಿದ್ದಿದೆ ಎಂದರೆ ಸಮಾಜವನ್ನು ಸರಿ ಮಾಡಲಿಕ್ಕೇ ಆಗುವುದಿಲ್ಲ ಎನ್ನುವಷ್ಟು ಹಾಳಾಗಿದೆ. ಸಾಮಾಜಿಕ ಬದಲಾವಣೆ ಆಗದೆ ಸಮಾನತೆಯನ್ನು ತರುವುದು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಪ್ರಬಲ ಸಂಘಟನೆಗಳು ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದರು.
ಬದಲಾವಣೆ ಸುಲಭವಲ್ಲ: ನಿಜ ಹೇಳಿದರೆ ಜನರಿಗೆ ಹಿಡಿಸುವುದಿಲ್ಲ. ಹಾಗಾಗಿ ದೇಶದಲ್ಲಿ ಬದಲಾವಣೆ ತರುವುದು ಸುಲಭವಲ್ಲ ಎಂದು ವಿಷಾದಿಸಿದ ಅವರು, ಹೋರಾಟದ ಬದುಕು ಬಹಳ ಕಷ್ಟದ ಬದುಕು. ಹೋರಾಟ ಜೈಲು- ಅನ್ಯಾಯ ಬಯಲು ಇದೇ ನನ್ನ ಸಿದ್ಧಾಂತ. ಆದ್ದರಿಂದ ಹೋರಾಟದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಅಲ್ಲದೇ, ಸಮಾಜವಾದದಿಂದ ಒಬ್ಬ ಶಾಸಕ ಹೇಗಿರಬೇಕು ಎಂದು ಕಲಿತುಕೊಂಡೆ. ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಈ ಹೋರಾಟ ತಿಳಿಸಿತು ಎಂದು ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು.
ಯುವಕರಲ್ಲಿ ಆಸಕ್ತಿಯಿಲ್ಲ: ಹಿಂದೆ ಭೂಸುಧಾರಣಾ ಕಾಯ್ದೆ ಜಾರಿ ಸಂದರ್ಭದಲ್ಲಿ ಯುವಕರೇ ಜೈಲಿಗೆ ಹೋಗಿ ಬಂದಿದ್ದರು. ಹೋರಾಟಕ್ಕೆ ಧುಮುಕುತ್ತಿದ್ದರು. ಆದರೆ, ಇಂದಿನ ಯುವಕರಲ್ಲಿ ಹೋರಾಟದ ಮನೋಭಾವವೇ ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ರಾಜಕಾರಣ ಇಂದು ವ್ಯಾಪಾರೀಕರಣವಾಗಿದೆ. ಇರುವ ವ್ಯವಸ್ಥೆಯಲ್ಲಿ ಅನ್ನ ಬೇಯಿಸಿಕೊಂಡು ಎಷ್ಟು ಬೋಕೋ ಅಷ್ಟು ದೋಚಿಕೊಂಡು ಹೋಗಿದ್ದಾರೆ.
ಎಷ್ಟು ಹೊಡ್ಕೋ ತಿನ್ನೋಕೆ ಸಾಧ್ಯವೋ ಅಷ್ಟು ಹೊಡೆಯೋದು. ಆಮೇಲೆ ಚುನಾವಣೆಲಿ ಬೇಕಾದಷ್ಟು ಹಣ ಖರ್ಚು ಮಾಡೋದು ಎನ್ನುವ ಲೆಕ್ಕಾಚಾರ ಬಂದಿದೆ. 72ರಲ್ಲಿ ಚುನಾವಣೆ ಮಾಡೋವಾಗ ನನ್ನ ಜೇಬಲ್ಲಿ 200 ರುಪಾಯಿ ಇತ್ತು. ಆದರೂ ನಾನು ಮತ್ತು ಕೋಣಂದೂರು ಲಿಂಗಪ್ಪ ಗೆದ್ದೆವು ಎಂದರು.
ನಂಬ್ತೀವಲ್ರೀ...ಅಯ್ಯೋ ದೇವರೇ...
ಈಗ ಗಣಪತಿ ಹಬ್ಬ ಮಾಡ್ತಾ ಇದ್ದಾರೆ. ನಾನು ಅಷ್ಟೊಂದಾಗಿ ನಂಬಿಕೆ ಇರೋ ಮನುಷ್ಯಾ ಅಲ್ಲ. ಆದರೂ ಒತ್ತಾಯಕ್ಕೆ ಬಿದ್ದು ಗಣಪತಿ ನೋಡಕ್ಕೆ ಹೋಗಿದ್ದೆ. ನಿಜಾ ಹೇಳಂಗೇ ಇಲ್ಲ. ಹೇಳಿದ್ರೆ ನಾ ಸತ್ತೆ ಅಂತಾನೇ. ಆನೆ ತಲೆ ತಂದು ಮನುಷ್ಯನಿಗೆ ಕೂರಸಿದರೆ ಕೂರುತ್ತೇನ್ರೀ ಕಿಡ್ನಿ ಹಾಳಾಗಿದೆ ಅಂತ ಮತ್ತೊಂದು ಕಿಡ್ನಿ ಹಾಕಿದ್ರೇನೇ ಸೇರೋದು ಕಷ್ಟ. ಆದರೂ ನಂಬಗಿಲ್ಲ...
- ಕಾಗೋಡು ತಿಮ್ಮಪ್ಪ, ವಿಧಾನಸಭಾಧ್ಯಕ್ಷ