ಸುನ್ನಾ ವಿದ್ಯಾ ಸಂಸ್ಥೆ ಆಸ್ತಿ ವರ್ಗಾವಣಗೆ ವಿರೋಧ
ಶಿಕಾರಿಪುರ: ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಇಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣದ ಮೂಲಕ ಪ್ರಸಿದ್ದವಾಗಿರುವ ಸುನ್ನಾ ವಿದ್ಯಾ ಸಂಸ್ಥೆಯ ಆಂತರಿಕ ಕಲಹ ಇದೀಗ ಹೊರಬಂದಿದ್ದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ದೂರವಾಗಿದ್ದ ಭಟ್ಕಳ ಮೂಲದ ಆಯೂಭ್ ನಕ್ವಿ ಇದೀಗ ಸಂಸ್ಥೆಯನ್ನು ಕಾನೂನು ಬಾಹಿರವಾಗಿ ನೋಂದಣಿ ಮೂಲಕ ಕೋಟ್ಯಂತರ ರು.ಗಳ ಆಸ್ತಿ ಪಾಸ್ತಿಯ ಒಡೆತನಕ್ಕೆ ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸಂಸ್ಥೆಯಲ್ಲಿನ ಸಾವಿರಾರು ವಿದ್ಯಾರ್ಥಿ, ಸಿಬ್ಬಂದಿಗಳ ಭವಿಷ್ಯ ತೀವ್ರ ಆತಂಕಕ್ಕೀಡಾಗಿದೆ.
ಆಸ್ತಿ ಲಪಟಾಯಿಸಲು ಯತ್ನ: ಇಲ್ಲಿನ ಜಯನಗರದ ಸುನ್ನಾ ವಿದ್ಯಾ ಸಂಸ್ಥೆ ಹಾಗೂ ಮದೀನತ್ ಉಲ್ ಉಲೂಂ ಸಂಸ್ಥೆಯನ್ನು ಉಪನೋಂದಣಾಧಿಕಾರಿ ಇಲಾಖೆಯಲ್ಲಿ ಟ್ರಸ್ಟ್ನಲ್ಲಿನ ವ್ಯಕ್ತಿಯೋರ್ವರ ಕುಟುಂಬಕ್ಕೆ ಪುನರ್ ನೋಂದಣಿ ಮಾಡುವ ಮೂಲಕ ಇದೀಗ ಕೋಟ್ಯಂತರ ಬೆಲೆಬಾಳುವ ಸಂಸ್ಥೆಯ ಆಸ್ತಿ ಪಾಸ್ತಿ ಯನ್ನು ಕಬಳಿಸುವ ಪ್ರಯತ್ನ ನಡೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮೌಲಾನಾ ಅಮ್ಜದ್ ಹುಸೇನ್ ಹಫೀಜ್ ಕರ್ನಾಟಕಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.
1992 ರಲ್ಲಿ ಬಡ ಹಿಂದುಳಿದ ಮಕ್ಕಳನ್ನು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಪಟ್ಟಣದ ಜಯನಗರದಲ್ಲಿ ಆರಂಭವಾದ ಸುನ್ನಾ ಹಾಗೂ ಮದೀನತ್ ಉಲ್ ಉಲೂಂ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಭಟ್ಕಳ ಮೂಲದ ಆಯೂಭ್ ನಕ್ವಿ ಹಲವು ವರ್ಷಗಳಿಂದ ಸಂಸ್ಥೆಯ ಕಾರ್ಯಚಟುವಟಿಕೆಯಿಂದ ದೂರವಾಗಿ ಅಧ್ಯಕ್ಷ ಪದವಿಯಿಂದ ನಿರ್ಗಮಿಸಿದ್ದರು. ಇದೀಗ ಏಕಾಏಕಿ ಸಂಸ್ಥೆಯನ್ನು ಶಿಕಾರಿಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಣ ಮತ್ತಿತರ ಪ್ರಭಾವದ ಮೂಲಕ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಸ್ಥಳೀಯರಿಗೆ ಅಪಮಾನ: 95 ರಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲು, ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜು, ವೃತ್ತಿ ತರಬೇತಿ ಶಿಕ್ಷಣದ ಜತೆಗೆ ಇದೀಗ ಸ್ನಾತಕೋತ್ತರ ಅದ್ಯಯನ ಕೇಂದ್ರವನ್ನು ಆರಂಭಿಸುವ ಹಂತದಲ್ಲಿರುವ ಸಂಸ್ಥೆಯಲ್ಲಿನ ಬೈಲಾದಲ್ಲಿ ಕಾರ್ಯದರ್ಶಿ ಸಂಪೂರ್ಣ ಸಂಸ್ಥೆಯ ಉಸ್ತುವಾರಿಯಾಗಿದ್ದು ಪ್ರತಿಯೊಂದು ಹಂತದಲ್ಲಿಯೂ ಸಂಸ್ಥೆಯನ್ನು ಕಟ್ಟಿ ಅಭಿವೃದ್ದಿ ಪಡಿಸಲು ಎಲ್ಲಾ ರೀತಿಯಲ್ಲಿ ಶ್ರಮಿಸಿದ ಟ್ರಸ್ಟ್ ಸದಸ್ಯರ ಗಮನಕ್ಕೆ ಬಾರದೆ ಏಕಾಏಕಿ ಪುನರ್ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಸ್ಥಳೀಯರಿಗೆ ಅಪಮಾನವೆಸಗಿದ್ದಾರೆ ಎಂದು ದೂರಿದರು.
17 ಎಕರೆ ವಿಶಾಲ ಸ್ಥಳದಲ್ಲಿನ ಸಂಸ್ಥೆಗೆ ಮಾಸಿಕ 10 ಲಕ್ಷ ಖರ್ಚುಗಳನ್ನು ಕೇವಲ ಚಂದಾದಾರರ, ವಂತಿಗೆ ಮೂಲಕ ಸಂಗ್ರಹಿಸಿ ಲಾಭದ ಉದ್ದೇಶ ಹೊಂದದೆ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕನಸಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ ತೃಪ್ತಿಯನ್ನು ಹೊಂದಿದ್ದಾಗಿ ತಿಳಿಸಿದರು.
ಬೇರೆ ಅಧ್ಯಕ್ಷರ ಆಯ್ಕೆ: 2005 ರಲ್ಲಿ ಸಂಸ್ಥಾಪಕ ಅಧ್ಯಕ್ಷ ಭಟ್ಕಳ ಸಂಸ್ಥೆಯಿಂದ ಸಂಪೂರ್ಣ ದೂರವಾಗಿದ್ದರಿಂದ ನೂತನ ಅಧ್ಯಕ್ಷರಾಗಿ ಸ್ಥಳೀಯ ಅತಾವುರ್ ರೆಹಮಾನ್ ಅವರನ್ನು ಅದ್ಯಕ್ಷರನ್ನಾಗಿಸಿ ಆಯ್ಕೆ ಮಾಡಿಕೊಂಡಿಕೊಳ್ಳಲಾಯಿತು. ಅವರು ಬೈಲಾ ವಿರೋಧಿಸಿ ಏಕಾಏಕಿ ಸಂಪೂರ್ಣ ಸಂಸ್ಥೆಯನ್ನು ಕುಟುಂಬದ ಸದಸ್ಯರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು
ಟ್ರಸ್ಟಿ ಹನೀಫ್ ಸಾಬ್ ಮಾತನಾಡಿ, ಶಿರಾಳಕೊಪ್ಪ ಬಳಿಯ ಭದ್ರಾಪುರ ಗ್ರಾಮದ ಸಮೀಪ 40 ಎಕರೆ ತೋಟ ಮತ್ತಿತರ ಕೋಟ್ಯಂತರ ವೆಚ್ಚದ ಸಂಸ್ಥೆಯ ಆಸ್ತಿಯ ಬಗ್ಗೆ ಆಸಕ್ತಿ ಹೊಂದಿದ್ದ ಆಯೂಬ್ ನಕ್ವಿ ರವರಿಗೆ 6 ತಿಂಗಳ ಹಿಂದೆ ದುರುದ್ದೇಶ ಬಿಟ್ಟು ಮುಕ್ತ ಮಾತುಕತೆಗೆ ಆಹ್ವಾನಿಸಿದನ್ನು ತಿರಸ್ಕರಿಸಿದ್ದಾಗಿ ತಿಳಿಸಿ ಸಂಸ್ಥೆಯನ್ನು ಯಥಾರೀತಿ ಕಾಪಾಡುವ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಪರಬಾರೆಗೆ ಸಿದ್ದವಿದ್ದು ಉಪನೋಂದಣಾಧಿಕಾರಿಗಳ ಅನುಮಾನಾಸ್ಪದ ಕಾರ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುವ ಜತೆಗೆ ಕಾನೂನಿನ ಮೊರೆ ಹೋಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅತಾವುರ್ ರೆಹಮಾನ್,ಎಂ.ಎನ್. ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.