ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರಸಭೆ ಗದ್ದುಗೆ ಕಾಂಗ್ರೆಸ್- ಜೆಡಿಎಸ್ ಪಾಲು

Srinivasa Murthy VN
Updated On : 13 Sept 2013, 11:14 am

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.12
ನಗರಸಭೆಯಲ್ಲಿ ಆಡಳಿತಕ್ಕೆ ಬರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಜಂಟಿ ಪ್ರಯತ್ನ ವಿಫಲವಾಗಿದ್ದು, ಗುರುವಾರ ನಗರಸಭೆ ಮುಖ್ಯಸ್ಥರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ಮೈತ್ರಿಕೂಟ ಗೆಲವು ಪಡೆದಿದೆ. ಕೆಜೆಪಿ- ಬಿಜೆಪಿ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ.
ಅಧ್ಯಕ್ಷರಾಗಿ 23ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಖುರ್ಷಿದಾ ಬಾನು, ಉಪಾಧ್ಯಕ್ಷರಾಗಿ 21ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ರೇಖಾ ಚಂದ್ರಶೇಖರ್ ಅವರು 23- 19 ಮತಗಳ ಅಂತರದಿಂದ ಆಯ್ಕೆಯಾದರು.
ಎರಡು ದಿನಗಳ ಹಿಂದೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ನಿವಾಸದಲ್ಲಿ ಸಭೆ ಸೇರಿದ್ದ ಕೆ.ಎಸ್. ಈಶ್ವರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಅಧಿಕಾರಕ್ಕೇರುವ ತಂತ್ರ ರೂಪಿಸಿದ್ದರು. ಆದರೆ, ಕಾಂಗ್ರೆಸ್ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಪ್ರತಿತಂತ್ರ ರೂಪಿಸಿ ಇದನ್ನು ವಿಫಲಗೊಳಿಸಿದರು.
ಎರಡೂ ಮೈತ್ರಿಕೂಟಗಳು 21 ಸದಸ್ಯ ಸಂಖ್ಯೆಯೊಂದಿಗೆ ಸಮಬಲ ಹೊಂದಿದ್ದವು. ಹಾಗಾಗಿ ಶುಕ್ರವಾರದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನ ನಡೆಸಿದ್ದ ಬಿಜೆಪಿ- ಕೆಜೆಪಿ ಮೈತ್ರಿಕೂಟವು ತಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಎಲ್ಲಾ ಸದಸ್ಯರ ಒಲವು ಪಡೆಯುವಲ್ಲಿ ವಿಫಲವಾಯಿತು.
ಮತದಾನ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಪಿ.ವಿ. ಕೃಷ್ಣಭಟ್ ಅವರೂ ಸಹ ಹಾಜರಿದ್ದು ಮೈತ್ರಿಕೂಟದ ಪರ ಮತ ಚಲಾಯಿಸಿದರು.
ಕೈಕೊಟ್ಟ ಕೆಜೆಪಿ ಸದಸ್ಯರು: ಬಿಜೆಪಿಯ 8 ಸದಸ್ಯರು ಹಾಜರಿದ್ದರು. ಆದರೆ, ಕೆಜೆಪಿಯ ಏಳು ಸದಸ್ಯರಲ್ಲಿ ಐವರು ಮಾತ್ರ ಈ ಮೈತ್ರಿಕೂಟದ ಪರ ಮತ ಚಲಾಯಿಸಿದ್ದು ಬೊಮ್ಮನಕಟ್ಟೆ ಮಂಜುನಾಥ ಹಾಗೂ ಶಾಹಿಸ್ತಾ ಬಾನು ಅವರು ಪಕ್ಷದ ಸೂಚನೆ ಧಿಕ್ಕರಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ನೀಡಿದರು.
ಇತ್ತ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಪರವಾಗಿ ಕಾಂಗ್ರೆಸ್‌ನ 11, ಜೆಡಿಎಸ್‌ನ 5, ಎಸ್‌ಡಿಪಿಐ ಪಕ್ಷದ ಒಬ್ಬರು, ಇಬ್ಬರು ಪಕ್ಷೇತರರು, ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ ಮತ ಚಲಾಯಿಸಿದ್ದಲ್ಲದೇ ಕರ್ನಾಟಕ ಜನತಾ ಪಕ್ಷದ ಇಬ್ಬರು ಸದಸ್ಯರೂ ಸಹ ಮತ ಚಲಾಯಿಸಿದರು. ಹಾಗಾಗಿ ಈ ಸಂಖ್ಯೆ 23ರ ವರೆಗೆ ಬೆಳೆಯಿತು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಸುನೀತಾ ಅಣ್ಣಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆಜೆಪಿಯ ಅರ್ಚನಾ ಬಳ್ಳೆಕೆರೇ ಸೋಲನುಭವಿಸಿದರು.

ಭಾರಿ ಭದ್ರತೆ
ಚುನಾವಣೆ ನಡೆಯುತ್ತಿದ್ದ ಸಭಾಂಗಣಕ್ಕೆ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಕುಸುಮಾ ಕುಮಾರಿ ಅವರು ಪತ್ರಕರ್ತರಿಗೆ ಪ್ರವೇಶ ನಿಷೇಧಿಸಿದ್ದರು. ಆದರೆ, ನಗರಸಭೆ ಸಿಬ್ಬಂದಿ ಹಾಗೂ ಸದಸ್ಯರಲ್ಲದವರು ಒಳಗೆ ಕಿಕ್ಕಿರಿದಿದ್ದರು. ಅವರನ್ನು ಹೊರಗೆ ಕಳುಹಿಸುವ ಯಾವ ಪ್ರಯತ್ನಗಳನ್ನೂ ಚುನಾವಣಾಧಿಕಾರಿಯವರು ಮಾಡಲಿಲ್ಲ. ಭಾರಿ ಭದ್ರತೆ ಆಯೋಜಿಸಿದ್ದರಿಂದ ನಗರಸಭೆ ಆವರಣ ಪ್ರವೇಶಿಸಲು ಕಷ್ಟಪಡಬೇಕಾಯಿತು. ಇದು ವಿಧಾನ ಪರಿಷತ್ ಸದಸ್ಯರಿಗೆ ಕಿರಿಕಿರಿಯನ್ನುಂಟು ಮಾಡಿದ್ದು, ಅವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷತೆಗಳು
  ಈ ಫಲಿತಾಂಶದೊಂದಿಗೆ 8 ವರ್ಷಗಳ ನಂತರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ.
  ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಜೆಡಿಎಸ್ ಈಗ ಮತ್ತೆ ಅಧಿಕಾರ ಪಡೆದಂತಾಗಿದೆ.
  ಶಿವಮೊಗ್ಗ ನಗರಸಭೆಗೆ ಇದೇ ಮೊದಲ ಬಾರಿ ಮುಸ್ಲೀಂ ಸಮುದಾಯಯದವರೊಬ್ಬರು ನೇರ ಚುನಾವಣೆಯಲ್ಲಿ ಅಧ್ಯಕ್ಷರಾಗಿದ್ದಾರೆ. ಎರಡು ದಶಕಗಳ ಹಿಂದೆ ಯೂಸೂಫ್ ಖಾನ್ ಅವರು ಪ್ರಭಾರ ಅಧ್ಯಕ್ಷರಾಗಿದ್ದರು.
  ರಾಜ್ಯ ಸರ್ಕಾರವು ಶಿವಮೊಗ್ಗ ನಗರಸಭೆಯನ್ನು ನಗರ ಪಾಲಿಕೆಯಾಗಿ ಉನ್ನತೀಕರಿಸುವುದಾಗಿ ಈಗಾಗಲೇ ಹೇಳಿರುವುದರಿಂದ ಹಾಲಿ ಆಡಳಿತಾವಧಿ ಕೆಲವೇ ತಿಂಗಳು ಉಳಿಯುವ ಸಾಧ್ಯತೆಯೇ ಹೆಚ್ಚು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement