ಪಾಪಮುಕ್ತ ಜೀವನದಿಂದ ಆತ್ಮ ಸಂತೋಷ
ಸಾಗರ: ಯಾರು ಧರ್ಮವನ್ನು ಅನುಸರಿಸುತ್ತಾರೋ ಅವರಿಗೆ ಎಂದಿಗೂ ತೊಂದರೆಯಾಗದು. ಧರ್ಮವನ್ನು ನಂಬುವ ಜೊತೆಗೆ ಪಾಪಮುಕ್ತ ಜೀವನವನ್ನು ನಡೆಸಿದಾಗ ಆತ್ಮ ಸಂತೋಷ ಸಿಗುತ್ತದೆ ಎಂದು ಜೈನಮಠದ ಆಕಲಂಕ ಭಟ್ಟಾರಕ ಶ್ರೀ ಹೇಳಿದರು. ತಾಲೂಕಿನ ಬಿದರೂರು ಭಗವಾನ್ ಮಹಾವೀರ ಬಸದಿಯಲ್ಲಿ ಏರ್ಪಡಿಸಿದ್ದ ದಶಲಕ್ಷಣ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧಾರ್ಮಿಕ ಆಡಂಬರವನ್ನು ದೂರ ಮಾಡಿ, ಸರಳ ಜೀವನ ಸಾಗಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಬಿತಾ ಪ್ರೇಮಕುಮಾರ ಮಾತನಾಡಿ, ಶ್ರಾವಕರಲ್ಲಿ ಉತ್ತಮವಾದ ಧಾರ್ಮಿಕ ಮನೋಧರ್ಮ ಬರಬೇಕಾದರೆ ಮಠಾಧೀಶರ ಸಾನ್ನಿಧ್ಯ ಅತೀ ಮುಖ್ಯ. ನಾವು ಅಂತಹ ಮಠಗಳನ್ನು ಗೌರವಿಸಬೇಕು. ಧರ್ಮಕಾರ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ. ಸ್ವಾಮಿ, ಹಿರಿಯ ಪುರೋಹಿತ ಸಿದ್ಧಾರ್ಥ ಇಂದ್ರ, ವಲಯ ಜೈನ ಮಿಲನ್ ಅಧ್ಯಕ್ಷ ಸಿ.ಎನ್.ಜೈನ್ ಮೊದಲಾದವರು ಹಾಜರಿದ್ದರು.
9ನೇ ದಿನಕ್ಕೆ ಮುಷ್ಕರ
ಶಿವಮೊಗ್ಗ: ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆಗೆ ಒತ್ತಾಯಿಸಿ ನಗರದ ಪಶುವೈದ್ಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಪಶುವೈದ್ಯ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಶುಕ್ರವಾರ ಕಾಲೇಜಿಗೆ ಆಗಮಿಸಿದ್ದು ವಿದ್ಯಾರ್ಥಿಗಳ ಭೇಟಿ ಮಾಡುವ ಪ್ರಯತ್ನ ನಡೆಸಿದರು. ಆಷ್ಟರಲ್ಲಾಗಲೇ ಸಂಜೆಯಾಗಿದ್ದು, ದಿನದ ಪ್ರತಿಭಟನೆ ಮುಗಿದಿದ್ದರಿಂದ ಶನಿವಾರ ಪ್ರತಿಭಟನಾ ಸ್ಥಳದಲ್ಲಿಯೇ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಬೇಡಿಕೆ ಈಡೇರಿಸುವ ವರೆಗೂ ಪ್ರತಿಭಟನೆ ಮುಂದುವರಿಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ಭಾವಗೀತೆ ಸ್ಪರ್ಧೆ
ಶಿವಮೊಗ್ಗ: ಹೊಸಹಳ್ಳಿಯ ಗೆಳೆಯರ ಬಳಗ ಸೆ.15ರಂದು ಬೆಳಿಗ್ಗೆ 10.30ಕ್ಕೆ ಹೊಸಹಳ್ಳಿಯ ಗಮಕ ಭವನದಲ್ಲಿ ದಿ. ರಘುಪತಿ ಸ್ಮಾರಕ ಭಾವಗೀತೆ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಗೆ ಮುಕ್ತ ಅವಕಾಶವಿದ್ದು, 16ರಿಂದ 30 ವರ್ಷದೊಳಗಿನ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಬಹುಮಾನ 1 ಸಾವಿರ, ದ್ವಿತೀಯ 750, ತೃತೀಯ ಬಹುಮಾನ 500 ನಿಗದಿಪಡಿಸಲಾಗಿದೆ. ಸ್ಪರ್ಧಾಳುಗಳು 100 ರುಪಾಯಿ ಪ್ರವೇಶ ಶುಲ್ಕ ಪಾವತಿಸಿ, ಸೆ.12ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಬಳಗ ತಿಳಿಸಿದೆ. ವಿವರಗಳಿಗಾಗಿ- 8762969797.
ಸದಸ್ಯರ ಸಭೆ
ಶಿವಮೊಗ್ಗ: ಕಾಳಿದಾಸ ಸೇವಾ ಸಂಸ್ಥೆಯ 16 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬಾಲರಾಜ್ ಅರಸ್ ರಸ್ತೆಯ ಕುರುಬರ ವಿದ್ಯಾರ್ಥಿನಿಲಯ ಸಭಾಂಗಣದಲ್ಲಿ ಸೆ.15ರಂದು ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿದೆ. ಸಭೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಕಾಳಿದಾಸ ಸೇವಾ ಸಂಸ್ಥೆ ಅಧ್ಯಕ್ಷ ಪಿ. ಬಾಲಪ್ಪ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಪಿ. ಮೈಲಾರಪ್ಪ ಮ್ತತಿತರರು ಉಪಸ್ಥಿತರಿರುವರು. ಇದೇ ವೇಳೆ ಡಿವಿಎಸ್ ಸ್ವತಂತ್ರ ಪ.ಪೂ ಕಾಲೇಜಿನ ಉಪನ್ಯಾಸಕ ಡಾ. ಸಾಮುಕ್ ಕನಕದಾಸರ ಅರಮನೆ ಉತ್ಖನನ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಸಂಸ್ಥೆಯ ಕಾರ್ಯದರ್ಶಿ ಕೆ. ತಿಮ್ಮಪ್ಪ ತಿಳಿಸಿದ್ದಾರೆ.
ವಿಶೇಷ ಉಪನ್ಯಾಸ
ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆ ಮತ್ತು ಜೆಸಿಐ ಮಲ್ನಾಡ್ ಆಶ್ರಯದಲ್ಲಿ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೆ.14ರಂದು ಬೆಳಿಗ್ಗೆ 11ಗಂಟೆಗೆ ಗರ್ಭಿಣಿ ಸ್ತ್ರೀಯರಿಗೆ ಪೋಷಣೆ ವಿಷಯ ಕುರಿತು ವೈದ್ಯಕೀಯ ಉಪನ್ಯಾಸ ಏರ್ಪಡಿಸಲಾಗಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಧೀರೇಂದ್ರ ಪಂಢರಿ ತಿಳಿಸಿದ್ದಾರೆ. ವಿವರಗಳಿಗಾಗಿ- 9611118474.