ಎನ್ನೆಸ್ಸೆಸ್‌ನಿಂದ ಶಿಸ್ತು, ಸಂಯಮ
ಶಿವಮೊಗ್ಗ; ಎನ್ನೆಸ್ಸೆಸ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು, ಸಂಯಮ ಮೂಡುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಬಾಲಕೃಷ್ಣ ಹೆಗಡೆ ತಿಳಿಸಿದರು.
ತಾಲೂಕಿನ ಕೊಮ್ಮನಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಮ್ಮಿಕೊಂಡಿದ್ದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಉದ್ದೇಶಿಸಿ ಮಾತನಾಡಿದರು.
ಸ್ವಾವಲಂಬಿ ಜೀವನ: ಎನ್ನೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮ ಕೆಲಸಕಾರ್ಯಗಳನ್ನು ತಾವೇ ಮಾಡಿಕೊಳ್ಳುವ ಸ್ವಾವಲಂಬಿ ಜೀವನದ ಪಾಠ ನೀಡುತ್ತದೆ. ಹೆಚ್ಚಿನದೇನನ್ನೂ ಆಸೆ ಪಡದೆ ಇದ್ದಿದ್ದರಲ್ಲಿಯೇ ನೆಮ್ಮದಿಯಿಂದ ಬದುಕುವ ಕಲೆಯನ್ನು ಅದು ಹೇಳಿಕೊಡುತ್ತದೆ ಎಂದು ತಿಳಿಸಿದರು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಸಾಕಾರಕ್ಕೆ ಇಂತಹ ಶಿಬಿರ ಸಹಕಾರಿಯಾಗಿರುತ್ತವೆ ಎಂದ ಅವರು, ಬದುಕುವ ಕಲೆ ಕಲಿಸುವ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಲಭಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಮನಃ ಪರಿವರ್ತನೆ: ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಎಸ್. ಕಾಲೇಜು ಪ್ರಾಂಶುಪಾಲ ಪ್ರೊ. ಆರ್. ಮಂಜುನಾಥ್ ಮಾತನಾಡಿ, ಎನ್ನೆಸ್ಸೆಸ್ ಸಂಘಟನೆ ವಿದ್ಯಾರ್ಥಿಗಳ ಮನಃ ಪರಿವರ್ತನೆ ಮಾಡುತ್ತದೆ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನು ಕಲಿಸಿಕೊಡುತ್ತದೆ. ಕಾಲೇಜಿನಿಂದ ಶಿಬಿರಕ್ಕೆ ಬರುವಾಗಿನ ಮನಃಸ್ಥಿತಿ ಶಿಬಿರ ಮುಗಿಸಿ ಮರಳುವಾಗ ಬದಲಾಗಿರುವುದನ್ನು ಕಾಣುತ್ತೇವೆ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಡಾ.ಎ.ಟಿ. ಪದ್ಮೇಗೌಡ, ಪ್ರೊ. ಟಿ.ಆರ್. ಗೋಪಾಲ್, ಪ್ರೊ. ಸುಧಾಕರ್, ವಿದ್ವಾನ್ ಮಂಜುನಾಥ್ ಭಟ್, ಗ್ರಾಮದ ಮುಖಂಡ ಕೆ.ಆರ್. ಈರಪ್ಪ, ಕೆ.ಇ. ಮಲ್ಲಿಕಾರ್ಜುನ, ಮಂಜಪ್ಪ, ಶೇಖರಪ್ಪ, ಮಹೇಶ್ವರಪ್ಪ, ರುದ್ರೇಶಪ್ಪ, ಶಿಕ್ಷಕ ನರಸೋಜಿರಾವ್, ಪರಿಮಳಾ ಹಂಕಾರಿ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿ ಬಾಲರಾಜ ನಿರ್ವಹಿಸಿದರು.