ಕರಡಿ ದಾಳಿ, ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ
ಶಿವಮೊಗ್ಗ: ಮೇಕೆ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಅರಬಿಳಚಿ ಕ್ಯಾಂಪ್ ಬಳಿ ನಡೆದಿದೆ.
ಮಂಜುನಾಥ ಪಿಳ್ಳೈ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡಿನಂಚಿನ ಅರಬಿಳಚಿ ಕ್ಯಾಂಪ್ ಇದ್ದು, ತಿಂಗಳ ಹಿಂದಷ್ಟೇ ನಾರಾಯಣಸ್ವಾಮಿ ಎಂಬವರ ಮೇಲೆ ಕರಡಿ ದಾಳಿ ನಡೆಸಿತ್ತು. ಪದೇ ಪದೇ ಕರಡಿ ದಾಳಿಯಿಂದ ಆಕ್ರೋಶಕೊಂಡ ಸ್ಥಳೀಯರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕೂಡ್ಲಿಗೆರೆಯಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ದಾಳಿ ನಡೆದಿದ್ದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ಉದಾಸೀನ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಹಾಗೂ ದಾಳಿ ಮಾಡುತ್ತಿರುವ ಕರಡಿಯನ್ನು ಬಂಧಿಸಿ ಸ್ಥಳಾಂತರ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವೊಲಿಕೆ ಕಾರ್ಯ ವಿಫಲ ಆಗಿದ್ದರಿಂದ ಭದ್ರಾವತಿ ಡಿಎಫ್‌ಓ ಮಂಜುನಾಥ್ ಸ್ಥಳಕ್ಕಾಗಮಿಸಿ ಅಹವಾಲು ಆಲಿಸಿದರು. ಗಾಯಾಳುವಿಗೆ ಚಿಕಿತ್ಸೆ ಕೊಡಿಸುವ ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿ ಹಿಂದಕ್ಕೆ ಪಡೆದರು.
ಡಿಎಸ್‌ಎಸ್ ಶಿವಮೊಗ್ಗ ಗ್ರಾಮಾಂತರ ಸಂಚಾಲಕ ಕೆ.ಸುರೇಶ್, ಭದ್ರಾವತಿ ತಾಲೂಕು ಸಂಚಾಲಕ ಈಶ್ವರಪ್ಪ, ಜಿಲ್ಲಾ ಖಜಾಂಚಿ ಕೆ.ನರಸಿಂಹಶೆಟ್ಟಿ, ಸಂಚಾಲಕ ಎಂ. ಪಳನಿರಾಜ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.