'ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ'
ಶಿರಾಳಕೊಪ್ಪ: ಹೆಸರಿಗಾಗಿ ಕೆಲಸ ಮಾಡದೆ ಪ್ರಕೃತಿಯಲ್ಲಿ ಇರುವ ಸೂರ್ಯ, ಚಂದ್ರ ರಂತೆ ಸದ್ದಿಲ್ಲದೆ ಕೆಲಸ ಮಾಡಿದಾಗ ಆತ್ಮಕ್ಕೆ ತೃಪ್ತಿ ಉಂಟಾಗುತ್ತದೆ. ಆಗ ಭಗವಂತನ ದಯೆ ತಾನಾಗಿಯೇ ದೊರೆಯುತ್ತದೆ ಎಂದು ಶಿವಮೊಗ್ಗ ಕಸ್ತೂರಬಾ ಕಾಲೇಜಿನ ಉಪನ್ಯಾಸಕ ನಟೇಶ್ ತಿಳಿಸಿದರು.
ಕಸಾಪ ಆಶ್ರಯದಲ್ಲಿ ಕದಂಬ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ. ಸುವರ್ಣಮ್ಮ ಡಾ. ಶ್ರೀನಿವಾಸ ಭಟ್ ಅವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ ಕಲ್ಯಾಣ ಕ್ರಾಂತಿಗೆ ಅಲ್ಲಮ ಪ್ರಭುಗಳ ಕೊಡುಗೆ ಹಾಗೂ ಡಿವಿಜಿ ಅವರ ವಿಚಾರಧಾರೆ ಎಂಬ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ಎಲ್ಲ ಧರ್ಮಗಳು ಸತ್ಯ ಹೇಳಬೇಕು ಎಂದು ಹೇಳಿವೆ. ಹಾಗೆಯೇ ಯಾವ ಕೆಲಸ ನಮಗೆ ಬಂಧನ ಉಂಟು ಮಾಡುವದಿಲ್ಲವೋ ಅದೇ ಸತ್ಯ. ಆ ಸತ್ಯ ಹೇಳುವುದರಿಂದ ಮೊದಲು ಆರೋಗ್ಯಕ್ಕೆ ಸಹಕಾರಿ ಆಗಲಿದೆ. ನಾವು ಆಡುವ ಮಾತು ಹಿತವಾಗಿರಬೇಕು. ತಿನ್ನುವ ಆಹಾರ ಮಿತವಾಗಿರಬೇಕು. ಆಗ ಆತ್ಮಜ್ಞಾನ ಉಂಟಾಗುತ್ತದೆ ಎಂದರು.
ಕದಂಬ ಕಾಲೇಜಿನ ಪ್ರಾಂಶುಪಾಲ ಯುವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಸಾಪ ಘಟಕದ ಅಧ್ಯಕ್ಷ ಎನ್.ಜಿ. ನಾಗರಾಜ್ ವಹಿಸಿ ಮಾತನಾಡಿದರು.
ತಾಲೂಕು ಕಸಾಪ ಕಾರ್ಯದರ್ಶಿ ಚಿನ್ನಪ್ಪ ಓಬಳೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಗಳಾದ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ಟ ಮತ್ತು ವಿಷ್ಣು ಭಟ್ಟ, ಕಸಾಪ ಘಟಕ ಗೌರವಾಧ್ಯಕ್ಷ ಡಾ. ಗಂಗಾಧರ, ರವಿ ಶಾನಭೋಗ ಇದ್ದರು.
ಕಸಾಪ ಕಾರ್ಯದರ್ಶಿ ಎಂ.ಡಿ. ರಾಜು ಸ್ವಾಗತಿಸಿ, ನಿರೂಪಿಸಿದರು.