ಬಸವಾಶ್ರಮದಿಂದ ಶರಣರ ಪರಿಚಯ
ಕ.ಪ್ರ.ವಾರ್ತೆ ಶಿಕಾರಿಪುರ ಫೆ. 2
ಅನಾಥ ಮಕ್ಕಳಿಗೆ ವಸತಿ ಸಹಿತ ಅನ್ನದಾನ, ವಿದ್ಯಾದಾನದ ಜತೆಗೆ ನಾಡಿನ ಶಿವಶರಣರನ್ನು ಯುವಪೀಳಿಗೆಗೆ ಪರಿಯಚಯಿಸುತ್ತಿರುವ ಬಸವಾಶ್ರಮದ ಕಾರ್ಯ ಶ್ಲಾಘನೀಯವಾದುದು ಎಂದು ಮಾಜಿ ಪುರಸಭಾಧ್ಯಕ್ಷ ವಸಂತಗೌಡ ತಿಳಿಸಿದರು.
ಭಾನುವಾರ ಸಂಜೆ ಪಟ್ಟಣದ ಬಸವಾಶ್ರಮ, ಬಸವಕೇಂದ್ರ, ತಾಲೂಕು ಶರಣಸಾಹಿತ್ಯ ಪರಿಷತ್ತು, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಬಸವೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲವು ವಿಚಾರಧಾರೆ: ಶಿಕಾರಿಪುರ ಶಿವಶರಣರ ಮೂಲ ಸ್ಥಳವಾಗಿದ್ದು, ಹಲವು ಶಿವಶರಣರು ತಾಲೂಕಿನಲ್ಲಿ ಜನ್ಮತಳೆದು ನಾಡಿನೆಲ್ಲೆಡೆ ತತ್ವ, ಆದರ್ಶದ ಮೂಲಕ ಹಲವು ವಿಚಾರಧಾರೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದ ಅವರು ಶಿವಶರಣರನ್ನು ಸಮಾಜಕ್ಕೆ ಮುಖ್ಯವಾಗಿ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಬಸವಾಶ್ರಮ ಅನಾಥ ಮಕ್ಕಳಿಗೆ ಅನ್ನದಾನ, ವಿದ್ಯಾದಾನ ವಸತಿ ಕಲ್ಪಿಸಿ ಕಳೆದ ತಿಂಗಳಿನಿಂದ ತಾಲೂಕಿನ ಪ್ರತಿ ಹಳ್ಳಿಹಳ್ಳಿಗಳಲ್ಲಿ ಬಸವಜ್ಯೋತಿ ಮೂಲಕ ಶಿವಶರಣರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸಿ ಜಾಗೃತಿ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎಂದು ಶ್ಲಾಘಿಸಿದರು.
ಅದ್ದೂರಿ ಸ್ವಾಗತ: ಪುರಸಭಾ ಸದಸ್ಯ ಅಂಗಡಿ ಜಗದೀಶ್ ಮಾತನಾಡಿ, ತಾಲೂಕಿನ 110 ಗ್ರಾಮಗಳಲ್ಲಿ ಕಳೆದ ತಿಂಗಳ ಕಾಲ ಸಂಚರಿಸಿದ ಬಸವಜ್ಯೋತಿ ಯಾತ್ರೆಗೆ ಎಲ್ಲೆಡೆ ಅದ್ಧೂರಿ ಸ್ವಾಗತ ದೊರೆತಿದ್ದು, ಎಲ್ಲಾ ವರ್ಗದ ಜನ ಯಶಸ್ಸಿಗೆ ಸಹಕರಿಸಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾರವಾರದ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ, ಶಿಕಾರಿಪುರ ಬಸವಾಶ್ರಮದ ಮಾತೆ ಶರಣಾಂಬಿಕಾ, ಶಿವಯೋಗ ಮಂದಿರದ ಪಂ. ರೇಣುಕಾಚಾರ್ಯ ವಹಿಸಿ ಆಶೀರ್ವದಿಸಿದರು.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪುಟ್ಟಪ್ಪಗೌಡ ವಹಿಸಿ ಮಾತನಾಡಿದರು. ತಹಸೀಲ್ದಾರ್ ಧರ್ಮೋಜಿರಾವ್, ಬಿ.ಡಿ ಭೂಕಾಂತ್, ಸಾಲೂರು ಕುಮಾರ್, ಶಶಿಧರಸ್ವಾಮಿ ಕಣಿವೆಮನೆ, ಬಿ.ಎಸ್. ಮಠದ್, ಮ ಂಜಾಚಾರ್, ಭಾಸ್ಕರ, ಗುರುರಾಜ ಜಕ್ಕಿನಕೊಪ್ಪ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಜಾಹ್ನವಿ ಅನನ್ಯಾ ಮಂಜಾಚಾರ್ ರಚನೆಯ ಋತುಗಾನ ಕೃತಿಯನ್ನು ಹಾಗೂ ಶರಣಪ್ರಭೆ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಲೀಲಾ ಪ್ರಭು ಮತ್ತಿತರ ದಾನಿಗಳನ್ನು ಸನ್ಮಾನಿಸಲಾಯಿತು.ಮೈತ್ರಿ ಶಾಲೆಯ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಕು.ವಚನಶ್ರೀ ಪ್ರಾರ್ಥಿಸಿ,ಮಹಾದೇವಪ್ಪ ಸ್ವಾಗತಿಸಿ, ಪುಟ್ಟಪ್ಪ ನಿರೂಪಿಸಿದರು, ಶ್ರೀನಿವಾಸ್ ವಂದಿಸಿದರು.