ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈಲು ಮಾರ್ಗ ವಿಸ್ತರಿಸಲು ಆಗ್ರಹ

Srinivasa Murthy VN
Updated On : 3 Feb 2014, 11:34 am

ಅರಸಾಳು ಕೇಂದ್ರ ಅಭಿವೃದ್ಧಿ, ಬೈಂದೂರಿಗೆ ರೇಲ್ವೆ ಮಾರ್ಗ ವಿಸರಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಫೆ.2
ಹೊಸನಗರ ತಾಲೂಕಿನ ಏಕೈಕ ರೈಲು ನಿಲ್ದಾಣವಾದ ಅರಸಾಳು ಕೇಂದ್ರವನ್ನು ಅಭಿವೃದ್ಧಿಪಡಿಸುವ ಜತೆಗೆ ಹೊಸನಗರ ಮಾರ್ಗವಾಗಿ ಬೈಂದೂರಿಗೆ ರೇಲ್ವೆ ಮಾರ್ಗ ವಿಸ್ತರಿಸಬೇಕು ಎಂದು ರೇಲ್ವೆ ಸಚಿವರನ್ನು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಹಾಗೆಯೇ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ಗೆ ಮನವಿ ಸಲ್ಲಿಸಿದ್ದು, ಕೇಂದ್ರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.
ಶಿವಮೊಗ್ಗದಿಂದ ತಾಳಗುಪ್ಪದವರೆಗಿನ ಬ್ರಾಡ್‌ಗೇಡ್ ರೇಲ್ವೆ ಮಾರ್ಗವು ಪೂರ್ಣಗೊಂಡಿದ್ದು, ರೈಲುಗಳ ಸಂಚಾರ ಪ್ರಾರಂಭವಾಗಿದೆ. ಈ ಮಾರ್ಗ ಆರಂಭಗೊಂಡು 85 ವರ್ಷಗಳಾಗಿವೆ. ಆ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ರೈಲು ನಿಲ್ದಾಣಗಳನ್ನು ಗೇಜ್ ಪರಿವರ್ತನೆಯ ಕಾಲದಲ್ಲಿ ಕಡೆಗಣಿಸಲಾಗಿದೆ. ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾದ ಹೊಸನಗರ ತಾಲೂಕಿನ ಪ್ರಮುಖ ಹಾಗೂ ಏಕೈಕ ರೈಲು ನಿಲ್ದಾಣ ಅರಸಾಳು. ಇಲ್ಲಿ ಆರಂಭದಿಂದಲೂ ಪ್ರಮುಖ ಸಂಪರ್ಕ ರೈಲು ನಿಲ್ದಾಣವಾಗಿತ್ತು. ಈ ನಿಲ್ದಾಣದಿಂದ ಹೊಸನಗರ, ತೀರ್ಥಹಳ್ಳಿ, ಕುಂದಾಪುರ ತಾಲೂಕುಗಳ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವುದು ಸುಲಭವಾಗಿತ್ತು. ಸಂಪರ್ಕ ನಿಲ್ದಾಣವಾಗಿದ್ದ ಅರಸಾಳು ಈಗ ಕೇವಲ ಒಂದು ನಿಲುಗಡೆಯ ಕೇಂದ್ರವಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಕುಂದಾಪುರ, ಕೊಲ್ಲೂರು, ಕೊಡಚಾದ್ರಿ, ನಗರ, ರಾಮಚಂದ್ರಾಪುರ, ಕಾರಣಗಿರಿ, ಹುಂಚ, ಕವಲೇದುರ್ಗ, ಅಂಬುತೀರ್ಥ ಮುಂತಾದ ಐತಿಹಾಸಿಕ ಮತ್ತು ಪ್ರವಾಸಿ ಕೇಂದ್ರಗಳಿಗೆ ಈ ರೈಲು ನಿಲ್ದಾಣದ ಪಕ್ಕ ಹಾದುಹೋಗುವ ರಾಜ್ಯ ಹೆದ್ದಾರಿ 26ರ ಮೂಲಕ ವ್ಯವಸ್ಥಿತ ಪ್ರಯಾಣಕ್ಕೆ ಬಸ್ ಸಂಚಾರ ಸೌಲಭ್ಯವಿದೆ. ಹಾಗೆಯೇ ಅರಸಾಳುವಿನಿಂದ ಬೆಂಗಳೂರಿಗೆ ನೇರ ಉತ್ತಮ ಪ್ರಯಾಣ ಸೌಲಭ್ಯವಿದೆ. ಹಾಗಾಗಿ ಜನನಿಬಿಡ ಕೇಂದ್ರವಾದ ಅರಸಾಳುವಿನಲ್ಲಿ ರೈಲು ನಿಲ್ದಾಣವನ್ನು ಪುನಃ ಸಜ್ಜುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಲೆನಾಡಿನ ಭಾಗವನ್ನು ಪಶ್ಚಿಮ ತೀರದ ಕೊಂಕಣ ರೇಲ್ವೆ ಮಾರ್ಗಕ್ಕೆ ಕೆಲವು ಯೋಜನೆಗಳು ಪರಿಶೀಲನೆಯಲ್ಲಿವೆ ಇದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ತಾಳಗುಪ್ಪದಿಂದ ಹೊನ್ನಾವರಕ್ಕೆ ವಿಸ್ತರಿಸುವ ಕಾರ್ಯಕ್ಕೆ ಪರಿಸರದ ಸಮಸ್ಯೆ ಇದೆ. ಅದಕ್ಕೆ ಪರ್ಯಾಯವಾಗಿ ಅರಸಾಳುವಿನಿಂದ ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನ ಮುಖಾಂತರ ಬೈಂದೂರಿಗೆ ರೇಲ್ವೆ ಹಳಿ ಹಾಕಿಸಬಹುದು. ಇದರಿಂದ ಹೊಸನಗರ, ನಗರ, ಕೊಡಚಾದ್ರಿ, ಕೊಲ್ಲೂರು, ರಾಮಚಂದ್ರಾಪುರ, ಕಾರಣಗಿರಿಗಳಿಗೆ ಬೆಂಗಳೂರಿನಿಂದ ನೇರವಾದ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್. ವಿಶ್ವೇಶ್ವರಯ್ಯ ಹಾಗೂ ಎಸ್.ಜಿ. ರಂಗನಾಥ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement